Kannada NewsKarnataka News

ಖಾನಾಪುರ ಕ್ಷೇತ್ರದಲ್ಲಿ ಅಚ್ಚುಕಟ್ಟಾಗಿ ಚುನಾವಣೆಗೆ ಪೂರ್ವತಯಾರಿ ಆರಂಭ


ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಮುಂಬರುವ ಮೇ.10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು
ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿದ್ದು, ಚುನಾವಣಾ
ಅಕ್ರಮಗಳನ್ನು ತಡೆಯಲು ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆ ತಂಡವನ್ನು ರಚಿಸಲಾಗಿದೆ.
26 ಸೆಕ್ಟರ್ ಆಫೀಸರ್, 12 ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ನಿಯೋಜಿಸಲಾಗಿದೆ.
ಲಿಂಗನಮಠ, ಲೋಂಡಾ, ಹೆಮ್ಮಡಗಾ ಮತ್ತು ಕಣಕುಂಬಿಗಳಲ್ಲಿ ತಪಾಸಣಾ ಕೇಂದ್ರಗಳನ್ನು
ತೆರೆಯಲಾಗಿದೆ ಎಂದು ಚುನಾವಣಾಧಿಕಾರಿ ಅನುರಾಧಾ ವಸ್ತ್ರದ ಮಾಹಿತಿ ನೀಡಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಸುದ್ದಿಗೋಷ್ಠಿ
ಉದ್ದೇಶಿಸಿ ಮಾತನಾಡಿದ ಅವರು, ತಹಸೀಲ್ದಾರ್ ಕಚೇರಿಯಲ್ಲಿ ದಿನದ 24 ಗಂಟೆ
ಕಾರ್ಯನಿರ್ವಹಿಸುವ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮತದಾರರು 08336
222225 ಸಂಖ್ಯೆಗೆ ದೂರವಾಣಿ ಕರೆ ಮಾಡಿ ತಮ್ಮ ಸಲಹೆ, ಸೂಚನೆ, ದೂರು ನೀಡಬಹುದು ಅಥವಾ
ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಪಡೆಯಬಹುದು. ಚುನಾವಣಾ ಆಯೋಗ ಸುಧಾರಿತ
ತಂತ್ರಾಂಶದ ಮೂಲಕ ಮತದಾರರ ಗೊಂದಲ ನಿವಾರಣೆಯ ಪ್ರಯತ್ನ ಪಡುತ್ತಿದೆ. ರಾಜಕೀಯ ಪಕ್ಷಗಳು
ಮತ್ತು ಅಭ್ಯಥರ್ಿಗಳು ಕ್ಷೇತ್ರದಲ್ಲಿ ಹಮ್ಮಿಕೊಳ್ಳುವ ರ್ಯಾಲಿ, ಪ್ರಚಾರ ಸಭೆ, ವಾಹನಗಳ
ಪರವಾನಿಗೆ, ಬ್ಯಾನರ್ ಮತ್ತಿತರ ಕೆಲಸಗಳಿಗಾಗಿ ತಹಸೀಲ್ದಾರ್ ಕಚೇರಿಯ ಏಕಗವಾಕ್ಷಿ
ಕೇಂದ್ರವನ್ನು ಸಂಪರ್ಕಿಸಿ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದರೆ ಇದೇ ಕೇಂದ್ರದ ಮೂಲಕ
ಪೊಲೀಸ್, ಸ್ಥಳೀಯ ಸಂಸ್ಥೆ, ಆರ್.ಟಿ.ಒ, ತಹಸೀಲ್ದಾರ್ ಕಚೇರಿಗಳಿಂದ ದಾಖಲೆಗಳನ್ನು
ಪರಿಶೀಲಿಸಿ ನಿರಾಕ್ಷೇಪಣಾ ಪ್ರಮಾಣಪತ್ರ ಮತ್ತು ಪರವಾನಿಗೆಯನ್ನು ಕೆಲವೇ ಗಂಟೆಗಳಲ್ಲಿ
ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ತಹಸೀಲ್ದಾರ್ ಪ್ರಕಾಶ ಗಾಯಕವಾಡ ಮಾತನಾಡಿ, ಕ್ಷೇತ್ರದಲ್ಲಿ 255 ಮತಗಟ್ಟೆಗಳಿದ್ದು,
ಅವುಗಳನ್ನು 233 ಸಾಮಾನ್ಯ, 16 ಸೂಕ್ಷ್ಮ ಮತ್ತು 6 ಅತೀ ಸೂಕ್ಷ್ಮ ಮತಗಟ್ಟೆಗಳೆಂದು
ಗುರುತಿಸಲಾಗಿದೆ. ಇದುವರೆಗೂ ನಡೆದ ಮತದಾರರ ನೊಂದಣಿ ಅಭಿಯಾನದ ಬಳಿಕ ಕ್ಷೇತ್ರದಲ್ಲಿ
1,07,776 ಪುರುಷ ಮತದಾರರು, 1,00839 ಮಹಿಳಾ ಮತದಾರರು, 12 ತೃತೀಯ ಲಿಂಗಿಗಳು
ಸೇರಿದಂತೆ ಒಟ್ಟು 2,08, 627 ಮತದಾರರು ಚುನಾವಣೆಯಲ್ಲಿ ಮತದಾನ ಮಾಡಲು
ಅರ್ಹರಾಗಿದ್ದಾರೆ. ಇದುವರೆಗೂ ಮತದಾರರ ಯಾದಿಯಲ್ಲಿ ಹೆಸರು ಸೇರಿಸದ ಅಥವಾ ಹೆಸರು
ಬಿಟ್ಟುಹೋಗಿರುವ ಮತದಾರರು ಏ.10ರವರೆಗೆ ತಮ್ಮ ಹೆಸರನ್ನು ಯಾದಿಯಲ್ಲಿ ಸೇರ್ಪಡೆ
ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ಸರ್ವೋದಯ ಪ್ರೌಢಶಾಲೆಯ ಬದಲು
ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಚುನಾವಣಾ ತರಬೇತಿ, ಮಸ್ಟರಿಂಗ್ ಮತ್ತು
ಡಿ-ಮಸ್ಟರಿಂಗ್ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ತಾಪಂ ಇಒ ವೀರನಗೌಡ ಏಗನಗೌಡರ, ಪೊಲೀಸ್ ಇನ್ಸಪೆಕ್ಟರ್ ರಾಮಚಂದ್ರ
ನಾಯ್ಕ ಮತ್ತು ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಇದ್ದರು.

https://pragati.taskdun.com/meeting-of-representatives-of-political-parties-in-belgaum/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button