
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಡಿ.5ರಂದು ನಡೆಯಲಿರುವ ಉಪಚುನಾವಣೆಗೆ ಕೊನೆಯ ಹಂತದ ಕಸರತ್ತು ನಡೆಸುತ್ತಿರುವ ರಾಜಕೀಯ ಪಕ್ಷಗಳು ಬೆಳಗಾವಿ ಜಿಲ್ಲೆಯ ಮೇಲೆ ಹಚ್ಚಿನ ಗಮನ ಕೇಂದ್ರೀಕರಿಸಿವೆ.
ಕಾಂಗ್ರೆಸ್ ನ ಸಿದ್ದರಾಮಯ್ಯ, ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಪ್ರಚಾರ ನಡೆಸಿ ತೆರಳಿದ್ದರೆ, ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನೂ ಬೆಳಗಾವಿ ಜಿಲ್ಲೆಯಲ್ಲಿ ಪ್ರಚಾರ ಸಭೆ ನಡೆಸುತ್ತಿದ್ದಾರೆ.
ಮೂರನೇ ಸುತ್ತಿನ ಪ್ರಚಾರ ನಡೆಸುತ್ತಿರುವ ಯಡಿಯೂರಪ್ಪ ಇಂದು ಮಾಧ್ಯಮಗಳ ಜೊತೆ ಮಾತನಾಡಿ. ಬೆಳಗಾವಿ ಜಿಲ್ಲೆಯ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಾಗಿದೆ, ಎಷ್ಟು ಅಂತರ ಎನ್ನುವುದಷ್ಟೇ ಗೊತ್ತಾಗಬೇಕಿದೆ ಎಂದಿದ್ದಾರೆ.

ಕಾಗವಾಡ ಕ್ಷೇತ್ರದಲ್ಲಿ ಗೆಲ್ಲುವ ದೃಷ್ಟಿಯಿಂದ ವಿವಿಧ ಸಮುದಾಯಗಳ ನಾಯಕರೊಂದಿಗೆ ಚರ್ಚಿಸಿದ್ದೇನೆ. ಎಲ್ಲೆಡೆ ಅನುಕೂಲಕರ ವಾತಾವರಣವಿದೆ. ಅಥಣಿಯಲ್ಲಿ ಈಗಾಗಲೇ ಗೆದ್ದಾಗಿದೆ. ಕಾಗವಾಡದಲ್ಲಿ ಎಷ್ಟು ಅಂತರದಲ್ಲಿ ಗೆಲ್ಲುತ್ತೇವೆ ಎಂಬುದು ಮುಖ್ಯ ಎಂದು ಹೇಳಿದರು.
ಕಾಗವಾಡ ತಾಲೂಕಿನ ಕೆಂಪವಾಡದಲ್ಲಿ ಸಿಎಂ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಚುನಾವಣೆ ದಾಖಲೆ ಚುನಾವಣೆ ಆಗಲಿದೆ. 15 ಕ್ಷೇತ್ರಗಳಲ್ಲಿ ನಾವು ಗೆಲ್ಲುವುದರಿಂದ ರಾಜ್ಯದಲ್ಲಿ ಬಹಳಷ್ಟು ಒಳ್ಳೆಯ ಪರಿಣಾಮ ಆಗಲಿದೆ. ಮೂರುವರೆ ವರ್ಷಗಳವರೆಗೆ ಸ್ಥಿರವಾದ ಉತ್ತಮ ಆಡಳಿತ ನೀಡಲು ಸಾಧ್ಯವಾಗಲಿದೆ. ರಾಜ್ಯದ ಅಭಿವೃದ್ಧಿ ಮಾಡಲಾಗುವುದು. ರೈತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ನಿರುದ್ಯೋಗ ಸಮಸ್ಯೆ ನೀಗಿಸುವುದಕ್ಕೆ ಒತ್ತು ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ಮೂರುವರೆ ವರ್ಷಗಳ ನಂತರ ನಡೆಯುವ ಚುನಾವಣೆಯಲ್ಲಿ 150ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ಬೇಕಾದ ಸಿದ್ಧತೆಯನ್ನು ಈಗಿನಿಂದಲೇ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ. ಸಚಿವ ಸಂಪುಟದ ಸದಸ್ಯರ ಸಹಕಾರದೊಂದಿಗೆ ಈ ಗುರಿ ಹಾಕಿಕೊಂಡಿದ್ದೇನೆ. ಅದನ್ನು ಮುಟ್ಟುವ ವಿಶ್ವಾಸವಿದೆ ಎಂದೂ ಹೇಳಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಸಿ.ಸಿ.ಪಾಟೀಲ, ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ, ಶಾಸಕರಾದ ಬಸವರಾಜ ಪಾಟೀಲ ಯತ್ನಾಳ, ಪಿ.ರಾಜು ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ