ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಸಾರಥ್ಯದಲ್ಲಿ ಭಾರತೀಯ ಪರಂಪರೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠ
ಪ್ರಗತಿವಾಹಿನಿ ಸುದ್ದಿ, ಗೋಕರ್ಣ: ಶ್ರೀಸಂಸ್ಥಾನ ಗೋಕರ್ಣ- ಶ್ರೀರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಮಾರ್ಗದರ್ಶನದಲ್ಲಿ ಭಾರತೀಯ ಪರಂಪರೆಯನ್ನು ಮುಂದಿನ ಪೀಳಿಗೆಯಲ್ಲಿ ಉಳಿಸಿ, ಬೆಳೆಸುವ ಉದ್ದೇಶದಿಂದ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸುವ ಪ್ರಕ್ರಿಯೆ ಆರಂಭವಾಗಿದೆ.
ಇದು ಉತ್ತರ ಕನ್ನಡ ಜಿಲ್ಲೆಯ ಮೊದಲ ವಿಶ್ವವಿದ್ಯಾಲಯವೂ ಆಗಲಿದೆ.
ಈಗಾಗಲೆ ಮಹಾನ್ ಪರಿಕಲ್ಪನೆಯೊಂದಿಗೆ ಆರಂಭವಾಗಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆಶ್ರಯದಲ್ಲಿ, ತಕ್ಷಶಿಲಾ ಮಾದರಿಯ ವಿಶ್ವವಿದ್ಯಾಲಯವನ್ನು ರೂಪಿಸುವ ಹಾಗೂ ಶಿಶುವಿಹಾರದಿಂದ ಪಿಎಚ್ ಡಿ ಶಿಕ್ಷಣದವರೆಗಿನ ಪರಿಕಲ್ಪನೆಯನ್ನಿಟ್ಟುಕೊಂಡು ಮಹಾನ್ ವಿದ್ಯಾಸಂಸ್ಥೆಯನ್ನು ಕಟ್ಟುವ ಕಾಯಕ ನಡೆಯುತ್ತಿದೆ.
ಗುರುಕುಲ ಪದ್ಧತಿಯಲ್ಲಿ ಈಗಾಗಲೆ ಬಾಲಕ ಮತ್ತು ಬಾಲಕಿಯರಿಗಾಗಿ ಸದ್ವಿದ್ಯೆ ನೀಡುವ ಕೆಲಸವನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮಾಡುತ್ತಿದೆ. ಇದಕ್ಕೆ ಇನ್ನಷ್ಟು ಸೇರ್ಪಡೆಯೊಂದಿಗೆ ವಿಸ್ತರಿಸುವ ಪರಿಕಲ್ಪನೆ ರಾಘವೇಶ್ವರ ಭಾರತೀ ಶ್ರೀಗಳದ್ದು. ಹಾಗಾಗಿ ಬೃಹತ್ ಯೋಜನೆಯೊಂದನ್ನು ಹಾಕಿಕೊಂಡಿದ್ದು, ಎಲ್ಲವೂ ಭಾರತೀಯ ಪರಂಪರೆಯ ತಳಹದಿಯ ಮೇಲೆಯೇ ರೂಪುಗೊಳ್ಳಲಿದೆ. ಶ್ರೀಗಳ ಮಾರ್ಗದರ್ಶನದಲ್ಲಿ ತಜ್ಞರ ತಂಡವೊಂದು ಈ ಕೆಲಸವನ್ನು ಶುರುಮಾಡಿದೆ.
ಇಂದಿನ ಭಾರತದಲ್ಲಿ ಶಿಕ್ಷಣವಿದೆ; ಇಂದಿನ ಶಿಕ್ಷಣದಲ್ಲಿ ಭಾರತವಿಲ್ಲ!
ಶಿಕ್ಷಣದಲ್ಲಿ ಭಾರತೀಯತೆಯಿಲ್ಲದಿದ್ದರೆ ಮುಂದೊಂದು ದಿನ ಭಾರತವು ಭಾರತವಾಗಿ ಉಳಿಯದು. ನಮ್ಮ ಮಕ್ಕಳೂ ಭಾರತೀಯರಾಗಿ ಉಳಿಯಲಾರರು. ಈ ಧರ್ಮಸಂಕಟಕ್ಕೆ ಪರಿಹಾರ ಎಂಬಂತೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಅಸ್ಥಿತ್ವಕ್ಕೆ ಬಂದಿದೆ. ಇಲ್ಲಿ ಸಮಯುಗದ ಶಿಕ್ಷಣದ ಜೊತೆಜೊತೆಯಾಗಿಯೇ ಯೋಗ, ಆಯುರ್ವೇದ, ವಾಸ್ತು, ಜ್ಯೋತಿಷ್ಯ, ಸಂಗೀತ, ನೃತ್ಯ ಮೊದಲಾದ ಶ್ರೇಷ್ಠ ಭಾರತೀಯ ವಿದ್ಯೆ -ಕಲೆಗಳನ್ನು ಅಧ್ಯಯನ ಮಾಡುವ ಅಪೂರ್ವ ಅವಕಾಶವು ಪರಿಕಲ್ಪಿತವಾಗಿದೆ.
ಶಿಶುವಿಹಾರದಿಂದ ಪಿಎಚ್ ಡಿ ವರೆಗಿನ ವ್ಯಾಸಂಗದ ಪರಿಕಲ್ಪನೆಯ ವಿವಿವಿ(ವಿಷ್ಣುಗುಪ್ತ ವಿಶ್ವವಿದ್ಯಾಪೀಠ) ಇದಾಗಿದೆ. ಒಂದನೆಯ ತರಗತಿಯಿಂದ ದ್ವಿತೀಯ ಪಿಯುಸಿಯವರೆಗಿನ ಶಿಕ್ಷಣವನ್ನು ನೀಡಲು ಸಾರ್ವಭೌಮ ಗುರುಕುಲಮ್ (ಬಾಲಕರಿಗಾಗಿ) ಮತ್ತು ರಾಜರಾಜೇಶ್ವರೀ ಗುರುಕುಲಮ್ (ಬಾಲಕಿಯರಿಗಾಗಿ) ಸಂಸ್ಥಾಪನೆಗೊಂಡಿವೆ.
ಭಾರತೀಯ ಭವ್ಯಪರಂಪರೆಯನ್ನು ಭಾವೀ ಪೀಳಿಗೆಯಲ್ಲಿ ಉಳಿಸಿ, ಬೆಳೆಸುವ ಸತ್ಸಂಕಲ್ಪದಲ್ಲಿ ಋಷಿಯುಗ -ನವಯುಗಗಳ ಸಮನ್ವಯ ಶಿಕ್ಷಣದ ಶ್ರೇಷ್ಠ ಪರಿಕಲ್ಪನೆಯಲ್ಲಿ ಶ್ರೀರಾಮಚಂದ್ರಾಪುರಮಠವು ಗೋಕರ್ಣಗಳಲ್ಲಿ ಪರಿಸರದಲ್ಲಿ ನಿರ್ಮಿಸಿ, ನಿರ್ವಹಿಸುತ್ತಿರುವ ಅಪೂರ್ವ ಗುರುಕುಲಗಳು ಇವು.
“ಸಮಸ್ತ ಭಾರತೀಯರಿಗೂ ತಮ್ಮದೇ ಆದ ಭಾಷೆ-ಸಂಸ್ಕೃತಿಗಳಿವೆ; ಪದ್ಧತಿ-ಪರಂಪರೆಗಳಿವೆ; ಅನ್ಯತ್ರ ದುರ್ಲಭವಾದ ಆಹಾರ-ಆಚಾರ, ವಿಹಾರ-ವಿಚಾರಗಳಿವೆ. ಆದರೆ ಸಮಯುಗದ ಯಾವ ಶಾಲೆಯಲ್ಲಿಯೂ ಬಾಲಕ -ಬಾಲಕಿಯರಿಗೆ ಇವುಗಳ ಶಿಕ್ಷಣವು ಲಭಿಸುತ್ತಿಲ್ಲ. ಪರಿಣಾಮವಾಗಿ ಭಾರತೀಯತೆಯನ್ನು ಕಳೆದುಕೊಳ್ಳುತ್ತಾ ಬೆಳೆಯುತ್ತಿದ್ದಾರೆ ಅಥವಾ ಬೆಳೆಯುತ್ತಾ ಬೆಳೆಯುತ್ತಾ ಕಳೆದುಕೊಳ್ಳುತ್ತಿದ್ದಾರೆ. ಕಾರಣ ಹಿಂದೂ ಸಂಸ್ಕೃತಿಯನ್ನು ಅತ್ಯುಚ್ಚಮಟ್ಟದ ಸಮಕಾಲೀನ ಶಿಕ್ಷಣದೊಂದಿಗೆ ನೀಡಲು ಶ್ರೀರಾಮಚಂದ್ರಾಪುರಮಠವು ಗುರುಕುಲಗಳನ್ನು ಸಂಸ್ಥಾಪಿಸಿದೆ’’ ಎನ್ನುತ್ತಾರೆ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು.
ಗುರುಕುಲಗಳ ಪ್ರಮುಖ ಅಂಶಗಳು:
* ಅತ್ಯುತ್ತಮವಾದ ಆಧುನಿಕ ಶಿಕ್ಷಣದ ಜೊತೆಯಲ್ಲಿ ಭಾರತೀಯವಾದ 18 ವಿದ್ಯಾಸ್ಥಾನಗಳ ಮತ್ತು 64 ಕಲೆಗಳ ಪರಿಚಯ-ಶಿಕ್ಷಣ.
* ಸುಮಾರು 80 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿತಗೊಂಡ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮೂರು ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳ ವಾಸ -ವಿದ್ಯಾಭ್ಯಾಸ.
* ಶ್ರೀರಾಮಾಯಣದ ಮತ್ತು ಮಹಾಪುರುಷರ ಚರಿತೆಗಳ ಮೂಲಕ ಜೀವನಮೌಲ್ಯಗಳ ಪಾಠ ಸ್ವತಃ ಶ್ರೀಗುರುಗಳಿಂದ.
* ದೇಶ, ದೇವರು, ಧರ್ಮ, ಗುರು-ಹಿರಿಯರ ಕುರಿತು ನಿಷ್ಠೆ-ಗೌರವಗಳನ್ನು ಎಳವೆಯಿಂದಲೇ ಬೆಳೆಸುವ ಅನೇಕ ಉಪಕ್ರಮಗಳು.
* ಯೋಗ, ಆಯುರ್ವೇದ, ವಾಸ್ತು, ಜ್ಯೋತಿಷ, ಸಂಗೀತ, ನೃತ್ಯ, ಚಿತ್ರ, ಪಾರಂಪರಿಕ ಪಾಕಗಳ ಜೊತೆಯಲ್ಲಿ ಕುದುರೆಸವಾರಿ, ಈಜು, ಕಳರಿಪಯಟ್, ಮಲ್ಲಯುದ್ಧ ಮೊದಲಾದ ಸಾಹಸಪ್ರಧಾನವಾದ ಮತ್ತು ಆತ್ಮರಕ್ಷಣೆಗೆ ಸಲ್ಲುವ ವಿದ್ಯೆಗಳ ಶಿಕ್ಷಣ.
* ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಗತಿ-ಪರಿಣತಿ ನೀಡುವ ಸಂಕಲ್ಪ.
* ಭಾರತೀಯರ ಪಾರಂಪರಿಕವಾದ ಹಬ್ಬ-ಹರಿದಿನಗಳ ವ್ಯವಸ್ಥಿತವಾದ ಆಚರಣೆ
* ನುರಿತ ಶಿಕ್ಷಕರಿಂದ ಅತ್ಯುನ್ನತವಾದ ಸಮಕಾಲೀನ ಶಿಕ್ಷಣ
* ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಅಡಿಯಲ್ಲಿ ಶ್ರೇಷ್ಠ ಆಚಾರ್ಯರುಗಳಿಂದ ಸಮಸ್ತ ಭಾರತೀಯ ವಿದ್ಯೆ-ಕಲೆಗಳ ಪರಿಚಯ-ಶಿಕ್ಷಣ
* ಮಕ್ಕಳನ್ನು ಮಮತೆಯಿಂದ ತಿದ್ದುವ, ಓದಿಸುವ ಮೆಂಟರುಗಳು
* ಶಿಕ್ಷಣದಲ್ಲಿ ಅತ್ಯಾಧುನಿಕವಾದ ತಂತ್ರಜ್ಞಾನಗಳ ಬಳಕೆ; ಸ್ಮಾರ್ಟ್ ಕ್ಲಾಸ್ ಮತ್ತಿತರ ಅಪರೂಪದ ಸೌಲಭ್ಯಗಳು
ಸಿಇಟಿ/ಜೆಇಇ/ಎನ್ಇಇಟಿ/ಸಿಎ/ಸಿಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ಶಿಕ್ಷಣತಜ್ಞರಿಂದ ಅಂತರ್ಜಾಲ ಹಾಗೂ ಸಮ್ಮುಖ ಪಾಠಗಳು
* ನಾಡಿನ ಮೂಲೆಮೂಲೆಗಳ ವಿವಿಧ ಕ್ಷೇತ್ರಗಳ ದಿಗ್ಗಜರಿಂದ ಸನಾತನ/ವಿನೂತನ ವಿಚಾರಗಳಲ್ಲಿ ಮುಖಾಮುಖಿ/ ಆನ್ ಲೈನ್ ಪಾಠಗಳು
* ಯೋಗ-ಧ್ಯಾನ-ಭಜನೆ-ಕ್ರೀಡೆಗಳಿಗೆ ಸಮಾನ ಅವಕಾಶ
* ಪ್ರಕೃತಿಯ ಮಡಿಲ ಕುಟೀರಗಳಲ್ಲಿ ಪಾಠ
* ಭಾರತ ಸರಕಾರದ NIOS ಪಠ್ಯಕ್ರಮದಂತೆ ಸಮಕಾಲೀನ ಶಿಕ್ಷಣದ ಪಾಠ-ಪರೀಕ್ಷೆ-ಪದವಿಗಳು
* ಮಧ್ಯಮವರ್ಗದವರ ಕೈಗೆಟಕುವ ಶುಲ್ಕ; ಅದೂ ಅಸಾಧ್ಯವಾದವರಿಗೆ ವಿದ್ಯಾರ್ಥಿವೇತನದ ಸಹಾಯಹಸ್ತ
* ತರಗತಿಗಳು-
A – ಲೆವೆಲ್- 1, 2, 3ನೆಯ ತರಗತಿಗಳು, (ವಸತಿಯ ವ್ಯವಸ್ಥೆಯಿಲ್ಲ, ಪರಿಸರದ ಬಾಲಕ-ಬಾಲಕಿಯರಿಗಾಗಿ).
B – ಲೆವೆಲ್ – 4, 5ನೆಯ ತರಗತಿಗಳು, (ವಸತಿಸಹಿತ)
C – ಲೆವೆಲ್ – 6, 7, 8ನೆಯ ತರಗತಿಗಳು, (ವಸತಿಸಹಿತ)
ಸೆಕೆಂಡರಿ – 9, 10ನೆಯ ತರಗತಿಗಳು, (ವಸತಿಸಹಿತ)
ಸೀನಿಯರ್ ಸೆಕೆಂಡರಿ – 11, 12ನೆಯ ತರಗತಿಗಳು- ಕಲೆ, ವಿಜ್ಞಾನ, ವಾಣಿಜ್ಯ ವಿಭಾಗಗಳು (ವಸತಿಸಹಿತ)
* ನವಯುಗ ಅಧ್ಯಯನ ವಿಷಯಗಳು-
ಕನ್ನಡ, ಇಂಗ್ಲೀಷ್, ಹಿಂದಿ, ಗಣಿತ, ಪರಿಸರವಿಜ್ಞಾನ, ಕಂಪ್ಯೂಟರ್, ಸಮಾಜವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇವುಗಳನ್ನು ಪ್ರಾಥಮಿಕ ಮತ್ತು ಪ್ರೌಢ ತರಗತಿಗಳಿಗೆ NIOS ಕಲಿಕಾ ಕ್ರಮದಂತೆ ಬೋಧಿಸಲಾಗುತ್ತದೆ. ಸೀನಿಯರ್ ಸೆಕೆಂಡರಿ (ಪದವಿ ಪೂರ್ವ) ತರಗತಿಗಳಿಗೆ ಆಯಾ ವಿಭಾಗದ ವಿಷಯಗಳೊಂದಿಗೆ ಭಾಷೆಗಳನ್ನು ಬೋಧಿಸಲಾಗುತ್ತದೆ. ಈ ಎಲ್ಲ ವಿಷಯಗಳನ್ನೂ ಮಕ್ಕಳ ಆಯ್ಕೆಯನ್ನು ಅನುಲಕ್ಷಿಸಿ ಸಂದರ್ಶನ ಕಾಲದಲ್ಲಿ ತಿಳಿಸಲಾಗುತ್ತದೆ.
* ಪಾರಂಪರಿಕ ಅಧ್ಯಯನ ವಿಷಯಗಳು-
ಸಂಸ್ಕೃತ, ವೇದಪಥ, ಯೋಗ, ಜ್ಯೋತಿಷ, ವಾಸ್ತು, ಆಯುರ್ವೇದ, ಭಗವದ್ಗೀತೆ, ಮಹಾಪುರುಷರ ಚರಿತೆಗಳು, ವ್ಯಾಯಾಮಕೀ, ಸದಾಚಾರ ಹಾಗೂ ವಿವಿಧ ಸ್ತೋತ್ರಗಳು. ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಭಾವಸಂಗೀತ, ನೃತ್ಯ, ಯಕ್ಷಗಾನ, ಕರಕುಶಲಕಲೆ ಮತ್ತು ರಂಗೋಲಿ-ಕಸೂತಿಗಳು, ಪಾರಂಪರಿಕ ಪಾಕಶಾಸ್ತ್ರ, ಗೃಹನಿರ್ವಾಹ, ಪಾಠಗಳು ನಡೆಯುತ್ತವೆ.
ಸಮಾಜಹಿತದ ಸತ್ಯಸಂಕಲ್ಪ
* ಮಾನವತೆ, ಭಾರತೀಯತೆ, ಹಿಂದುತ್ವ, ಸಹಬಾಳ್ವೆಗಳನ್ನು ಉದ್ಬೋಧಗೊಳಿಸುತ್ತವೆ ಈ ಗುರುಕುಲಗಳು.
* ಮಕ್ಕಳ ಮನಸ್ಸೆಂಬ ಬಿಳಿ ಹಾಳೆಯ ಮೇಲೆ ಆದರ್ಶ ಮಾನವತೆಯ ಸುಚಿತ್ರವನ್ನು ಚಿತ್ರಿಸುತ್ತವೆ ಈ ಗುರುಕುಲಗಳು.
* ಜ್ಞಾನ-ವಿಜ್ಞಾನಗಳಿಂದ ಸಮನ್ವಿತವಾದ ಭಾರತೀಯ ವಿದ್ಯೆ-ಕಲೆಗಳ ದ್ವಾರಾ ನೈಜ ಭಾರತೀಯರನ್ನು ಸೃಷ್ಟಿಸುತ್ತವೆ ಈ ಗುರುಕುಲಗಳು.
* ದೇಶಪ್ರೇಮ, ಸ್ವಾವಲಂಬನೆ, ಕಲಾಕೌಶಲ, ನಾಯಕತ್ವದ ಗುಣಗಳು ಹಾಗೂ ಸಮರ್ಪಣಾಭಾವಗಳನ್ನಿತ್ತು ನಮ್ಮ ಮನೆಯ ಮಗುವನ್ನು ಪರಿಪೂರ್ಣತೆಯತ್ತ ಕೈಹಿಡಿದು ಕರೆದೊಯ್ಯುತ್ತವೆ ಈ ಗುರುಕುಲಗಳು.
* ಸಂಪರ್ಕ
ಆಡಳಿತಾಧಿಕಾರಿಗಳು, ವಿವಿವಿ ಅಶೋಕೆ, ಗೋಕರ್ಣ, 9449595207, ವರಿಷ್ಠಾಚಾರ್ಯರು- 9449595248, 9448755969; ಪ್ರಾಚಾರ್ಯರು- 9846101519; ಕಾರ್ಯಾಲಯ- 9449595247.
ಸಾರ್ವಭೌಮ/ರಾಜರಾಜೇಶ್ವರೀ ಗುರುಕುಲಗಳ ಪ್ರವೇಶಕ್ಕೆ ಲಿಂಕ್: https://forms.gle/ Sk4atmZkcynC6FCm7
e-mail: [email protected]
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ