Kannada NewsKarnataka NewsLatest

*ಮಾಧ್ಯಮ ಕ್ಷೇತ್ರಕ್ಕೇ ಕಾವಲು ನಾಯಿ ಬೇಕಾ: ಕೆ.ವಿ.ಪಿ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ: ಮಾಧ್ಯಮ ಕ್ಷೇತ್ರ ವೃತ್ತಿ ಧರ್ಮ ಪಾಲಿಸದಿದ್ದರೆ, ರಾಜ ಧರ್ಮ ಪಾಲಿಸಿ ಎಂದು ಅಧಿಕಾರಸ್ಥರಿಗೆ ಹೇಳುವ ನೈತಿಕ ಸ್ಥೈರ್ಯವನ್ನು ಕಳೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ವಾರ್ಷಿಕ ದತ್ತಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಿ ಮಾತನಾಡಿದರು.

ನಾವು ಇಂದು ಪತ್ರಿಕಾ ದಿನಾಚರಣೆ ಆಚರಿಸುತ್ತಿರುವ ಸಂದರ್ಭದಲ್ಲಿ ಸಂಭ್ರಮದ ಬದಲಿಗೆ ಒಂದು ರೀತಿಯ ಅಳುಕು ಕಾಡುತ್ತಿದೆ. “ವೃತ್ತಿ ಧರ್ಮ” ಎನ್ನುವುದು ಸಾರ್ವಜನಿಕ‌ ಕಟಕಟೆಗೆ ಬಂದು ನಿಂತಿದೆ. ಜನ ಸಾಮಾನ್ಯರಿಂದ ಹಿಡಿದು ಮಾಧ್ಯಮ ಕ್ಷೇತ್ರದ ದಿಗ್ಗಜರು, ಹಿರಿಯರು ಎಲ್ಲಿದೆ ವೃತ್ತಿ ಧರ್ಮ‌ ಎಂದು ಪ್ರಶ್ನಿಸುತ್ತಿದ್ದಾರೆ. ಇಂಥಾ ಹೊತ್ತಲ್ಲಿ ಅಧಿಕಾರಸ್ಥರನ್ನು ಪ್ರಶ್ನಿಸುವ ನೈತಿಕ ಸ್ಥೈರ್ಯ ನಮ್ಮ ವೃತ್ತಿಗೆ ಉಳಿಯುತ್ತದೆಯೇ ಎಂದು ಪ್ರಶ್ನಿಸಿದರು.

Home add -Advt

ದೇಶದಲ್ಲಿ 188 ಕ್ಕೂ ಅಧಿಕ ಭಾಷೆಗಳಲ್ಲಿ ಪತ್ರಿಕೆಗಳು ಮತ್ತು ನಾನಾ ಮಾಧ್ಯಮಗಳು ಪ್ರಕಟಗೊಳ್ಳುತ್ತಾ ಬೃಹತ್ ಮಾಧ್ಯಮ ವ್ಯಾಪ್ತಿ ಹೊಂದಿರುವ ಎರಡನೇ ದೇಶ ನಮ್ಮದಾಗಿದೆ. ಆದರೆ ಪತ್ರಿಕಾ ಸ್ವಾತಂತ್ರ್ಯದಲ್ಲಿ ಭಾರತ 181 ದೇಶಗಳ ಪೈಕಿ 151 ನೇ ಸ್ಥಾನದಲ್ಲಿದೆ. ಈ ಶೋಚನೀಯ ಸ್ಥಿತಿ ಏಕೆ ಬಂತು ಎನ್ನುವುದನ್ನು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ.

ಒಂದು ಕಾಲದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗೆ, ಜನರ ಹಕ್ಕುಗಳ ರಕ್ಷಣೆಗೆ, ಸಂವಿಧಾನದ ರಕ್ಷಣೆಗೆ, ಮಾನವ ಹಕ್ಕುಗಳ ರಕ್ಷಣೆಗೆ ಮಾಧ್ಯಮ ಕ್ಷೇತ್ರವನ್ನು ಕಾವಲು ನಾಯಿ ಎಂದು ಕರೆಯುತ್ತಿದ್ದರು. ಈ ಮಾತನ್ನು ನಾವುಗಳೇ ಕಳೆದ 30-40 ವರ್ಷಗಳಿಂದ ಕೇಳುತ್ತಾ ಬಂದಿದ್ದೇವೆ.

ಆದರೆ, ಈಗ ಏನಾಗಿದೆ ? ಮಾಧ್ಯಮ ಕ್ಷೇತ್ರಕ್ಕೇ ಒಂದು ಕಾವಲು ನಾಯಿ ಬೇಕಾ ಎನ್ನುವ ಪರಿಸ್ಥಿತಿ ಬಂದಿಲ್ಲವೇ ? ಈ ಬಗ್ಗೆ ನಾವು ನೀವೆಲ್ಲಾ ಗಂಭೀರವಾಗಿ ಮೌಲ್ಯಮಾಪನ ನಡೆಸಬೇಕಲ್ಲವೇ ?

ನಾನು ಏಕೆ ಈ ಪ್ರಶ್ನೆ ಕೇಳುತ್ತಿದ್ದೇನೆ ಎಂದರೆ, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳು ಪದೇ ಪದೇ ಮಾಧ್ಯಮಗಳ ವೃತ್ತಿಪರತೆ ಮತ್ತು ವೃತ್ತಿ ನಿಷ್ಠೆಯನ್ನು ಪ್ರಶ್ನಿಸುತ್ತಿವೆ. ಚಾಟಿ ಬೀಸುತ್ತಿವೆ. ಮತ್ತೊಂದು ಕಡೆ ಮಾಧ್ಯಮ ಕ್ಷೇತ್ರದ ಎಲ್ಲಾ ಸೂಚ್ಯಂಕಗಳಲ್ಲೂ ನಾವು ಕುಸಿಯುತ್ತಿದ್ದೇವೆ ಎನ್ನುವ ಕಾರಣಕ್ಕೆ ನಮಗೆ ನಾವೇ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ.

ಇವೆಲ್ಲಾ ಪಕ್ಕಕ್ಕೆ ಇಡಿ. “ಪತ್ರಕರ್ತರಿಗೆ ಮೊದಲಿದ್ದ ಬೆಲೆ, ಗೌರವ ಈಗ ಇಲ್ಲ ಸಾರ್” ಅಂತ ನನ್ನ ಬಳಿಯೇ ನೂರಾರು ಮಂದಿ ಪದೇ ಪದೇ ಬೇಸರ ತೋಡಿಕೊಂಡಿದ್ದಾರೆ. ನಮ್ಮ ವೃತ್ತಿಯ ಬೆಲೆ, ಘನತೆ, ಗೌರವವನ್ನು ಕಳೆದವರು ಯಾರು ? ಬೇರೆ ವೃತ್ತಿಯವರು ನಮ್ಮ ವೃತ್ತಿ ಘನತೆಯನ್ನು ಕೊಲ್ಲಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಘನತೆಯನ್ನು, ನಮಗೆ ಅನ್ನ-ಅವಕಾಶ ನೀಡಿರುವ ವೃತ್ತಿಯ ಘನತೆಯನ್ನು ನಮಗೆ ನಾವೇ ಕಾಪಾಡಿಕೊಳ್ಳಬೇಕಿದೆ. ನಮ್ಮ ಹಿಂದಿನವರು ನಮ್ಮ ವೃತ್ತಿಗೆ ಘನತೆಯನ್ನು ತುಂಬಿ ನಮ್ಮ ಕೈಗೆ ಒಪ್ಪಿಸಿದ್ದಾರೆ. ನಾವು ನಮ್ಮ ಮುಂದಿನ ಪೀಳಿಗೆಗೆ ಅದೇ ಘನತೆಯಿಂದಲೇ ವಿಸ್ತರಿಸಬೇಕಿದೆ.

ಕೇವಲ “Statement oriented” ಪತ್ರಿಕೋದ್ಯಮ ವೃತ್ತಿಪರತೆ ಆಗಲಾರದು. ಇದರ ಆಚೆಗೆ ಜನಮುಖಿ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದ ಬಗ್ಗೆ ಚಿಂತಿಸಿ, ಕಾರ್ಯೋನ್ಮುಖರಾಗಬೇಕಿದೆ ಎಂದು ಕರೆ ನೀಡಿದರು.

ಪತ್ರಕರ್ತರ ಎಲ್ಲಾ ಬೇಡಿಕೆಗಳನ್ನೂ ಸರ್ಕಾರ ಹಂತ ಹಂತವಾಗಿ ಈಡೇರಿಸುತ್ತಿದೆ. ಗ್ರಾಮೀಣ ಪತ್ರಕರ್ತರ ಬಸ್ ಪಾಸ್, ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಿದ ಮುಖ್ಯಮಂತ್ರಿಗಳಿಗೆ ಕೆ.ವಿ.ಪ್ರಭಾಕರ್ ಅವರು ಅಭಿನಂದಿಸಿದರು.

ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Related Articles

Back to top button