*ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಬೆಲೆ ಏರಿಕೆ*: *ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಜೇಬಿಗೆ ಕನ್ನ ಹಾಕಿದೆ*: *ಪ್ರಲ್ಹಾದ್ ಜೋಶಿ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಭಾರಿ ಬೆಲೆ ಏರಿಕೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಜೇಬಿಗೆ ಕನ್ನ ಹಾಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ತನ್ನ ಆರ್ಥಿಕ ದುರಾಡಳಿತ ಹಾಗೂ ಖಾಲಿ ಬೊಕ್ಕಸವನ್ನು ಮುಚ್ಚಿಕೊಳ್ಳಲು ಕೆಎಂಎಫ್ (KMF) ಮೂಲಕ ಮೊಸರಿನ ದರವನ್ನು ಅತಿರೇಕದ ಮಟ್ಟಕ್ಕೆ ಏರಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
- ಅರ್ಧ ಲೀಟರ್ ಮೊಸರು: ₹28 ರಿಂದ ₹34 ಕ್ಕೆ ಏರಿಕೆ (₹6 ಅಂದರೆ ಶೇ. 21.43% ಏರಿಕೆ)
- ಒಂದು ಲೀಟರ್ ಮೊಸರು: ₹54 ರಿಂದ ₹68 ಕ್ಕೆ ಏರಿಕೆ (₹14 ಅಂದರೆ ಶೇ. 25.93% ಭಾರಿ ಏರಿಕೆ)
ಇತ್ತೀಚೆಗಷ್ಟೇ ಹಾಲಿನ ದರವನ್ನು ಲೀಟರ್ಗೆ ₹8 ರಷ್ಟು ಹೆಚ್ಚಿಸಿದ್ದ ಸರ್ಕಾರ, ಈಗ ಒಂದೇ ಬಾರಿಗೆ ಶೇ. 21% ರಿಂದ 26% ರಷ್ಟು ಮೊಸರಿನ ಬೆಲೆ ಏರಿಸಿ ಬಡ ಹಾಗೂ ಕೆಳ-ಮಧ್ಯಮ ವರ್ಗದ ಕುಟುಂಬಗಳ ಹೊಟ್ಟೆಯ ಮೇಲೆ ನೇರ ದಾಳಿ ಮಾಡಿದೆ.
ಮೊಸರು ಐಷಾರಾಮಿ ವಸ್ತುವಲ್ಲ, ಅದು ದಿನನಿತ್ಯದ ಆಹಾರ. ಅಭಿವೃದ್ಧಿ ಕೆಲಸಗಳಿಗೆ ಅನುದಾನವಿಲ್ಲದೆ, ಆಡಳಿತಾತ್ಮಕ ವೈಫಲ್ಯದಿಂದ ಬೊಕ್ಕಸ ಬರಿದಾಗಿಸಿಕೊಂಡಿರುವ ಸರ್ಕಾರ, ತನ್ನ ರಾಜಕೀಯ ತಪ್ಪುಗಳಿಗೆ ಬಡವರಿಂದ ದಂಡ ವಸೂಲಿ ಮಾಡುತ್ತಿದೆ. ಇದು ಸಂಪೂರ್ಣ ಜನವಿರೋಧಿ ಹಾಗೂ ದುಬಾರಿ ಸರ್ಕಾರದ ನೀತಿಗೆ ಹಿಡಿದ ಕೈಗನ್ನಡಿ ಎಂದು ಗುಡುಗಿದ್ದಾರೆ.



