ಪ್ರಗತಿವಾಹಿನಿ ಸುದ್ದಿ, ಬೆಂಗಳೂರು/ಬೆಳಗಾವಿ: ಕೊರೋನಾ ಮತ್ತು ಅದರಿಂದಾಗಿ ಲಾಕ್ ಡೌನ್ ಮಧ್ಯೆಯೇ ರಾಜ್ಯದಲ್ಲಿ ಶಕ್ಷಣಿಕ ಚಟುವಟಿಕೆ ಆರಂಭಿಸಲು ಸಿದ್ಧತೆ ಆರಂಭವಾಗಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೊಸ ಮಾರ್ಗಸೂಚಿಯೊಂದನ್ನು ಶುಕ್ರವಾರ ಬಿಡುಗಡೆಗೊಳಿಸಿದೆ. ಮಾರ್ಗಸೂಚಿಯಲ್ಲಿ ಶಾಲೆಗಳು ಯಾವಾಗ ಆರಂಭವಾಗುತ್ತವೆ ಎನ್ನುವ ಯಾವುದೇ ಪ್ರಸ್ತಾಪವಿಲ್ಲ. ಆದರೆ ಆರಂಭವಾದ ನಂತರ ಹೇಗಿರಬೇಕು? ಅನುಸರಿಸಬೇಕಾದ ನಿಯಮಾವಳಿಗಳೇನು ಎನ್ನುವ ಕುರಿತು ಸೂಚನೆಗಳನ್ನು ನೀಡಲಾಗಿದೆ.
ಶಾಲಾ ತರಗತಿ ಕೊಠಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಂದು ಡೆಸ್ಕ್ ನಲ್ಲಿ 3 ವಿದ್ಯಾರ್ಥಿಗಳಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ ಕಲ್ಪಿಸಬೇಕು. ಕೊಠಡಿಗಳ ಕೊರತೆ ಕಂಡುಬಂದರೆ ಶಾಲಾ ಗ್ರಂಥಾಲಯ ಕೊಠಡಿ, ಕ್ರೀಡಾ ಕೊಠಡಿ ಮತ್ತು ಕಂಪ್ಯೂಟರ್ ಕೊಠಡಿಗಳನ್ನು ಬಳಸಿಕೊಳ್ಳಬಹುದು.
ಜನವಸತಿ ಪ್ರದೇಶಗಳಲ್ಲಿ ಲಭ್ಯವಿರುವ ಸಮುದಾಯ ಭವನಗಳು, ಸರ್ಕಾರಿ ಕಟ್ಟಡಗಳು ಹಾಗೂ ಮಧ್ಯಾಹ್ನದ ಬಳಿಕ ಲಭ್ಯವಿರುವ ಅಂಗನವಾಡಿ ಕಟ್ಟಡಗಳನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.
ರಾಜ್ಯದಲ್ಲಿ 1ರಿಂದ 5ನೇ ತರಗತಿವರೆಗಿನ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಇವುಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಪಾಳಿ ವ್ಯವಸ್ಥೆಯಲ್ಲಿ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ. 1ರಿಂದ 7ನೇ ತರಗತಿವರಗಿನ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ತರಗತಿ ನಡೆಸಲು ಲಭ್ಯ ಎಲ್ಲಾ ವ್ಯವಸ್ಥೆಗಳು ಸಾಲದಾದಲ್ಲಿ ಪಾಳಿ ಪದ್ಧತಿಯಲ್ಲಿ ತರಗತಿಗಳನ್ನು ನಡೆಸಲು ತಿಳಿಸಲಾಗಿದೆ.
1 ಮತ್ತು 2ನೇ ತರಗತಿ ನಲಿ ಕಲಿ ಮಕ್ಕಳನ್ನು ಒಟ್ಟಿಗೆ ಸೇರ್ಪಡೆ ಮಾಡಿ ಬೋಧನೆಗೆ ಅವಕಾಶ ಕಲ್ಪಿಸಬಹುದು. 1ರಿಂದ 7ನೇ ತರಗತಿಯವರೆಗೆ ಶಿಕ್ಷಕರ ಕೊರತೆ ಇದ್ದಲ್ಲಿ ಸ್ಥಳೀಯವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಪ್ರಾಥಮಿಕ ಶಾಲೆಗಳಲ್ಲೂ ಪದವಿ ಪಡೆದಿರುವ ಶಿಕ್ಷಕರು ಲಭ್ಯವಿರುವುದರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಪರಸ್ಪರ ಸಮಾಲೋಚನೆ ನಡೆಸಿ ಪ್ರೌಢಶಾಲಾ ಶಿಕ್ಷಕರು 6 ಮತ್ತು 7ನೇ ತರಗತಿಗಳಿಗೂ ಪ್ರಾಥಮಿಕ ಶಾಲೆಗಳಲ್ಲಿ ಪದವಿ ಹೊಂದಿರುವ ಶಿಕ್ಷಕರು 8 ಮತ್ತು 9ನೇ ತರಗತಿಗಳಿಗೂ ಬೋಧಿಸಲು ಅವಕಾಶ ನೀಡಲಾಗಿದೆ.
ಪಿಯು ತರಗತಿಗಳು 10 ಗಂಟೆಯಿಂದ 3.30ರವರೆಗೆ ನಡೆಯುತ್ತಿವೆ. ಆದರೆ ಈ ತರಗತಿಗಳನ್ನು ಬೆಳಗ್ಗೆ 8.30 ರಿಂದ 12.30ರವರೆಗೆ ನಡೆಸಿ, ಪ್ರೌಢಶಾಲಾ ಕೊಠಡಿಗಳನ್ನು ಬಳಸಿಕೊಂಡು ಪಿಯು ತರಗತಿಗಳನ್ನು ಸೂಕ್ತ ಸಾಮಾಜಿಕ ಅಂತರದೊಂದಿಗೆ ನಡೆಸಲು ಸೂಚನೆ ನೀಡಲಾಗಿದೆ.
ರಾಜ್ಯದ ತಾಲೂಕು/ಹೋಬಳಿ ಕೇಂದ್ರಗಳಲ್ಲಿ ಕೆಲವು ಶಾಲೆಗಳು ಮಕ್ಕಳ ಕೊರತೆಯಿಂದ ಮುಚ್ಚಲ್ಪಟ್ಟಿದ್ದು, ಅವುಗಳನ್ನು ಅಗತ್ಯ ದುರಸ್ತಿ ಮಾಡಿಸಿ ಪ್ರೌಢಶಾಲೆಯ ಕೆಲವು ತರಗತಿಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಸೂಚನೆ ನೀಡಿದೆ.
ಪಾಳಿ ಪದ್ಧತಿಯಲ್ಲಿ ತರಗತಿ:
ಮೊದಲನೇ ಪಾಳಿ ಸಮಯ ಬೆಳಗ್ಗೆ 7.50ರಿಂದ ಆರಂಭಗೊಂಡು ಮಧ್ಯಾಹ್ನ 12.20ರವರೆಗೆ ನಡೆಸುವುದು ಹಾಗೂ ಎರಡನೇ ಪಾಳಿಯನ್ನು ಮಧ್ಯಾಹ್ನ 12.10ರಿಂದ ಸಂಜೆ 5 ಗಂಟೆಯವರೆಗೆ ನಡೆಸಲು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಆದರೆ ಬಹುತೇಕ ಕಡೆ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರು ಉಳಿದುಕೊಳ್ಳಲು ವ್ಯವಸ್ಥೆ ಇಲ್ಲ. ಹಾಗಾಗಿ ಶಿಕ್ಷಕರು ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಕ್ಕೆ ಪ್ರಯಾಣಿಸುವುದರಿಂದ ಬೆಳಗ್ಗೆ 7.50ರಿಂದ ಶಾಲೆಗಳನ್ನು ಆರಂಭಿಸುವುದು ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಷ್ಟೆ.
ಎಸ್ಎಸ್ಎಲ್ ಸಿ ಪರೀಕ್ಷೆ
ಪ್ರಗತಿವಾಹಿನಿಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಜೂನ್ 10ರಿಂದ ಎಸ್ಎಸ್ಎಲ್ ಸಿ ಪರೀಕ್ಷೆಗಳನ್ನು ಆರಂಭಿಸಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಿದ್ಧತೆ ನಡೆಸಿದೆ. ಜೂನ್ 10ರಿಂದ ಜೂನ್ 18ರ ಹೊತ್ತಿಗೆ ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕೆನ್ನುವ ಚಿಂತನೆ ನಡೆದಿದೆ.
ಸೋಮವಾರ ಶಿಕ್ಷಣ ಸಚಿವ ಸುರೇಶ ಕುಮಾರ ಪತ್ರಿಕಾಗೋಷ್ಠಿ ನಡೆಸಿ ಎಸ್ಎಸಎಲ್ಸಿ ಪರೀಕ್ಷೆ ದಿನಾಂಕ ಘೋಷಿಸಲಿದ್ದಾರೆ.
ಲಾಕ್ ಡೌನ್ ಮುಗಿಯುವ ಮತ್ತು ಬಸ್ ಸಂಚಾ ಆರಂಭವಾಗುವುದರ ಮೇಲೆ ಇದು ಅವಲಂಭಿಸಿದೆ.
ಶಾಲೆಗಳ ಆರಂಭ
ಇದೇ ವೇಳೆ ಜೂನ್ 15ರಿಂದ ಪ್ರಾಥಮಿಕ 1 ರಿಂದ 7ನೇ ತರಗತಿಗಳನ್ನು ಆರಂಭಿಸಲು ಯೋಚಿಸಲಾಗಿದೆ. ಪ್ರೌಢ ಶಾಲೆಯ 8 ರಿಂದ 10ನೇ ತರಗತಿಗಳನ್ನು ಜುಲೈ 1ರಿಂದ ನಡೆಸಲು ಸಿದ್ಧತೆ ನಡೆಸಲಾಗಿದೆ.
ಜೂನ್ 18ಕ್ಕೆ ಎಸ್ಎಸ್ ಎಲ್ ಸಿ ಪರೀಕ್ಷೆಗಳು ಮುಕ್ತಾಯವಾದರೆ ಜೂನ್ 20ರಿಂದ 30ರೊಳಗೆ ಮೌಲ್ಯಮಾಪನ ನಡೆಸಬೇಕು ಎಂದು ಯೋಚಿಸಲಾಗಿದ್ದು, ಪ್ರೌಢ ಶಾಲೆ ಶಿಕ್ಷಕರು ಮೌಲ್ಯಮಾಪನದಲ್ಲಿ ಪಾಲ್ಗೊಳ್ಳುವುದರಿಂದ ಪ್ರೌಢ ಶಾಲೆಗಳನ್ನು ಜುಲೈ 1ರಿಂದ ಆರಂಭಿಸಬೇಕು ಎಂದು ನಿರ್ಧರಿಸಲಾಗಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಬೇರೆ ಗ್ರುಪ್ ಗಳಿಗೆ ಕಳಿಸಿ)
—————————————————————-
ಈ ಕೆಳಗಿನ ಲಿಂಕ್ ಓಪನ್ ಮಾಡಿ, ಪೇಜ್ ಲೈಕ್ ಮಾಡಿ.
Please open the link and like the Face book page.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ