Belagavi NewsBelgaum NewsKannada NewsKarnataka NewsLatest

ಘಟಪ್ರಭಾ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಲು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

ಅಮೃತ ಭಾರತ ಸ್ಟೇಷನ್ ಯೋಜನೆಯಡಿ ರವಿವಾರ ಘಟಪ್ರಭಾ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆರಿಸಲು ಶಂಕುಸ್ಥಾಪನೆ/ಪುನರಾಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಸಂಸದ ಕಡಾಡಿ.

ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ : ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಘಟಪ್ರಭಾ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಲು ಶಂಕುಸ್ಥಾಪನೆ/ಪುನರಾಭಿವೃದ್ಧಿ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚ್‌ವಲ್ ಮೂಲಕ ರವಿವಾರ ನೆರವೇರಿಸಿದರು.


ವರ್ಚ್‌ವಲ್ ಕಾರ್ಯಕ್ರಮದ ನಿಮಿತ್ಯ ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ಬೃಹತ್ ವೇದಿಕೆ ಹಾಕಲಾಗಿತ್ತು. ಈ ವರ್ಚ್‌ವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯಸಭಾ ಸಂಸದ ಈರಣ್ಣಾ ಕಡಾಡಿ, ಮುಂಬರುವ ದಿನಗಳಲ್ಲಿ ಘಟಪ್ರಭಾ ರೈಲು ನಿಲ್ದಾಣ ಭಾರತ ರೈಲ್ವೆ ಭೂಪಟದಲ್ಲಿ ರಾರಾಜಿಸಲಿದೆ ಎಂದು ಹೇಳಿದರು. ಈ ಯೋಜನೆಯಡಿ ಘಟಪ್ರಭಾ ರೈಲ್ವೆ ನಿಲ್ದಾಣ ೧೮ ಕೋ.ರೂ. ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನಿಲ್ದಾಣದ ಕಟ್ಟಡವನ್ನು ಸುಧಾರಿಸಲಾಗುವುದು. ೧೨ ಮೀಟರ್ ಅಗಲದ ಫುಟ್ ಓವರ್ ಬ್ರಿಡ್ಜ್ ಅನ್ನು ೨ ಲಿಫ್ಟ್‌ಗಳೊಂದಿಗೆ ನಿರ್ಮಿಸಲಾಗುತ್ತದೆ ಎಂದರು.

ಪ್ಲಾಟ್‌ಫಾರ್ಮ್-೧ರ ಶೆಲ್ಟರ್, ಗ್ರಾನೈಟ್ ನೆಲಹಾಸನ್ನು ಹಾಕಲಾಗುವುದು. ವೇಟಿಂಗ್ ಹಾಲ್, ಶೌಚಾಲಯಗಳನ್ನು ಆಧುನಿಕ ಶೈಲಿಗೆ ಮೇಲ್ದರ್ಜೆಗೇರಿಸಲಾಗುವುದು. ನಿಲ್ದಾಣವು ಸುಧಾರಿತ ಸಂಚಾರ ಪ್ರದೇಶ, ಭೂ ದೃಶ್ಯ ಮತ್ತು ಪಾಕಿಂಗ್ ಸೌಲಭ್ಯಗಳನ್ನು ಹೊಂದಿರುತ್ತದೆ. ಪ್ರಯಾಣಿಕರ ಸ್ನೇಹಿ ಸೂಚನಾ ಫಲಕಗಳು ಮತ್ತು ಕೋಚ್ ಮಾರ್ಗದರ್ಶನ ಫಲಕಗಳನ್ನು ಒದಗಿಸಲಾಗುವುದು ಎಂದು ಸಂಸದರು ಹೇಳಿದರು.

ಸಂಸದ ಕಡಾಡಿ ಅವರು ಜಿಲ್ಲೆಯ ಎರಡು ರೈಲು ನಿಲ್ದಾಣಗಳನ್ನು ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಆಯ್ಕೆ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ ಹಾಗೂ ರೇಲ್ವೆ ಸಚಿವರಾದ ಅಶ್ವೀನಿ ವೈಷ್ಣವಿ ಅವರನ್ನು ಮತ್ತು ರೈಲ್ವೆ ಅಧಿಕಾರಿಗಳನ್ನು ಸ್ಮರಿಸಿದರು. ಕಳೆದ ೯ ವರ್ಷಗಳಲ್ಲಿ ಭಾರತದಲ್ಲಿ ಕೇಂದ್ರ ಸರಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಇದೇ ಸಂದರ್ಭದಲ್ಲಿ ಸಂಸದರು ವಿವರಿಸಿದರು.

ಇನ್ನು ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೋಸ್ಕರ ೧೦೦ ಹಾಸಿಗೆಗಳ ಇಎಸ್‌ಆಯ್ ಆಸ್ಪತ್ರೆ, ಉಡಾಣ ಯೋಜನೆಯಡಿಯಲ್ಲಿ ಬೆಳಗಾವಿ ವಿಮಾನ ನಿಲ್ದಾಣ ಸೇರ್ಪಡೆ ಮತ್ತು ೧೯೦ ಕೋ.ರೂ. ವೆಚ್ಚದಲ್ಲಿ ಬೆಳಗಾವಿ ರೈಲು ನಿಲ್ಧಾಣದ ಅಭಿವೃದ್ದಿ ಸೇರಿದಂತೆ ಇನ್ನು ಅನೇಕ ಯೋಜನೆಗಳಿಗೆ ಪ್ರಧಾನಿ ಮೋದಿಯವರು ಸಾಕಷ್ಟ ಅನುದಾನ್ನು ನೀಡಿದ್ದಾರೆ ಎಂದು ಕಡಾಡಿ ತಿಳಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಮಾತನಾಡಿ, ಮಾಜಿ ಸಂಸದ ದಿ. ಸುರೇಶ ಅಂಗಡಿಯವರ ಪ್ರಯತ್ನದಿಂದ ಪಟ್ಟಣದ ರೈಲು ನಿಲ್ದಾಣ ಮೇಲ್ದರ್ಜೆಗೇರಿತ್ತು, ಈಗ ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಘಟಪ್ರಭಾ ರೈಲು ನಿಲ್ದಾಣ ಆಯ್ಕೆಯಾಗಿರುವುದರಿಂದ ನಿಲ್ದಾಣ ಮತ್ತಷ್ಟು ವೈಭವ ಪಡೆಯಲಿದೆ ಎಂದರು.

ಕಾರ್ಯಕ್ರಮದ ವೇದಿಕೆಯ ಮೇಲೆ ರಾಯಭಾಗ ಶಾಸಕರಾದ ದುರ್ಯೋಧನ ಐಹೋಳೆ, ಖಾನಾಪೂರ ಶಾಸಕರಾದ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಎಮ್.ಎಲ್.ಮುತ್ತೇನ್ನವರ, ಪುರಸಭೆ ಮುಖ್ಯಾಧಿಕಾರಿ ಎಮ್ ಎನ್. ಪಾಟೀಲ, ರೈಲ್ವೆ ಇಲಾಖೆಯ ಚೀಫ್ ಕಮರ್ಷಿಯಲ್ ಇನ್ಸ್‌ಸ್ಪೆಕ್ಟರ್ ಅನೂಪ ಸಾಧು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button