Latest

20 ಲಕ್ಷ ಕೋಟಿ ರೂ. ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ -ಪ್ರಧಾನಿ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಲಘು ಉದ್ಯೋಗ ಸೇರಿದಂತೆ ಎಲ್ಲ ವಲಯಗಳಿಗೂ ಅನ್ವಯವಾಗುವ ಮೆಘಾ ಆರ್ಥಿಕ ಪ್ಯಾಕೇಜ್ ಒಂದನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಒಟ್ಟಾರೆ 20 ಲಕ್ಷ ಕೋಟಿ ರೂ. ಮೊತ್ತದ ಪ್ಯಾಕೇಜ್ ನ್ನು ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಘೋಷಿಸಲಾಗಿದೆ.

ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಇಡೀ ವಿಶ್ವವೇ ಭಾರತದೆಡೆಗೆ ನೋಡುತ್ತಿರುವ ಈ ಸಂದರ್ಭದಲ್ಲಿ, ಭಾರತದ ಭವಿಷ್ಯ ಬದಲಾದರೆ ವಿಶ್ವದ ಭವಿಷ್ಯ ಬದಲಾಗಲಿದೆ ಎನ್ನುವ ಸತ್ಯದ ಹಿನ್ನೆಲೆಯಲ್ಲಿ ಇಂತಹ ಪ್ಯಾಕೇಜ್ ಘೋಷಿಸಲಾಗುತ್ತಿದೆ ಎಂದಿದ್ದಾರೆ.

ಬಡವರು, ಸ್ರಮಿ ವರ್ಗ ಸೇರಿದಂತೆ ಎಲ್ಲ ವರ್ಗದವರಿಗೂ ಈ ಆರ್ಥಿಕ ಪ್ಯಾಕೇಜ್ ಶಕ್ತಿ ನೀಡಲಿದೆ. ಸಣ್ಣ ಉದ್ಯಮಕ್ಕೂ ಬಲಸಿಗಲಿದೆ. ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ನೆರವಾಗಲಿದೆ. 2020ರಲ್ಲಿ 20 ಲಕ್ಷ ರೂ. ಪ್ಯಾಕೇಜ್ ನೀಡುವುದಾಗಿ ಪ್ರಧಾನಿ ಹೇಳಿದರು.

ಪ್ಯಾಕೇಜ್ ವಿವರವನ್ನು ವಿತ್ತ ಸಚಿವರು ವಿವರಿಸಲಿದ್ದಾರೆ ಎಂದರು.

ಇಂದು ವಿಶ್ವದ ಬೇರೆ ಬೇರೆ ರಾಷ್ಟ್ರಗಳ ನಡುವೆ ಭಾರತವು ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಲಿದೆ. ಕೊರೊನಾ ವೈರಸ್ ವಿರುದ್ಧ ಭಾರತ ಹೋರಾಟವನ್ನು ಕಂಡು ವಿಶ್ವವೇ ನಿಬ್ಬೆರಗಾಗಿ ನೋಡುತ್ತಿದೆ. ಟಿಬಿ, ಪೋಲಿಯೋ ಅಪೌಷ್ಟಿಕತೆ ನಿರ್ಮೂಲನೆ ಇಲ್ಲಿಂದ ಮೊದಲುಗೊಂಡಿದೆ. ಜೀವನ್ಮರಣ ಹೋರಾಟ ನಡೆಸುತ್ತಿರುವವರಿಗೆ ಭಾರತ ಔಷಧಿ ಒದಗಿಸಿದೆ.

ಭಾರತದ ಹಣೆಬರಹ ಬದಲಾದಲ್ಲಿ ವಿಶ್ವದ ಹಣೆಬರಹವೇ ಬದಲಾಗಲಿದೆ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಗುಲಾಮಿ ಮನಸ್ಥಿತಿಯಿಂದ ಹೊರ ಬಂದ ಭಾರತವು ಇಂದು ಅಭಿವೃದ್ಧಿ ಪಥದಲ್ಲಿ ಸಾಗಲು ಹಾತೊರೆಯುತ್ತಿದೆ ಎಂದು ಅವರು ಹೇಳಿದರು.

ಆತ್ಮ ಬಲ ಮತ್ತು ಆತ್ಮ ವಿಶ್ವಾಸದಿಂದ ನಾವು ಮುನ್ನಡೆಯಲು ಸಾಧ್ಯವಿದೆ. ಭಾರತವು ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಲಿದೆ. ಯಾರೂ ಆತಂಕಪಡಬೇಕಾದ ಅಗತ್ಯವಿಲ್ಲ. ವಿಶ್ವದ ನೇತಾರನಾಗಿ, ಮಾರ್ಗದರ್ಶಕನಾಗಿ ಮುನ್ನಡೆಯಲಿದೆ ಎಂದು ಅವರು ಹೇಳಿದರು.

ಕೊರೋನಾ ಸಂಕಷ್ಟದಿಂದ ವಿಶ್ವದ 42 ಲಕ್ಷ ಜನ ನಲುಗಿದ್ದಾರೆ. ವೈದ್ಯಕೀಯ ಹಾಗೂ ವಯಕ್ತಿಕ ರಕ್ಷಣಾ ಸಾಮಗ್ರಿಗಳ ಕೊರತೆ ಆರಂಭದಲ್ಲಿ ಕಾಡಿದರೂ ಈಗ ಸ್ವಾವಲಂಬನೆ ಸಾಧಿಸಲಾಗಿದೆ ಎಂದು ಅವರು ಹೇಳಿದರು.
ಸಮಯ ನಮಗೆ ಪಾಠ ಕಲಿಸಿದೆ. ಇದರಲ್ಲಿ ಭಾರತ ಗೆಲುವು ಸಾಧಿಸಲಿದೆ. ಭಾರತ ಮಾತ್ರ ಗೆಲುವು ಸಾಧಿಸಲಿದೆ ಎಂದರು.

4ನೇ ಹಂತದ ಲಾಕ್ ಡೌನ್ ಮುನ್ಸೂಚನೆ ನೀಡಿದ ಪ್ರಧಾನಿ, ಅದರ ಸ್ವರೂಪ ಸಂಪೂರ್ಣ ಹೊಸ ರೀತಿಯಲ್ಲಿರಲಿದೆ ಎಂದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button