Kannada NewsNationalPolitics

*ಎಲ್ಲಾ ಸಂಸದರಿಗೆ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ*

ಪ್ರಗತಿವಾಹಿನಿ ಸುದ್ದಿ : ಮಹಿಳಾ ಮೀಸಲಾತಿ ಕಾಯ್ದೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಬೆಂಬಲ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಸಂಸದರಿಗೆ ಪತ್ರ ಬರೆದಿದ್ದಾರೆ.

ಏಪ್ರಿಲ್ 16ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಮಸೂದೆಗೆ ಒಮ್ಮತದ ಅನುಮೋದನೆ ನೀಡುವಂತೆ ಅವರು ಮನವಿ ಮಾಡಿದ್ದಾರೆ. ಇದಲ್ಲದೆ, 2029ರ ಲೋಕಸಭಾ ಚುನಾವಣೆ ಹಾಗೂ ಮುಂಬರುವ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಜಾರಿಗೆ ತರುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. 

ಈ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿರುವ ಪ್ರಧಾನಿ, ಮಹಿಳೆಯರಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶ ಸಿಕ್ಕಾಗ ಮಾತ್ರ ಸಮಾಜ ಪ್ರಗತಿ ಹೊಂದಲು ಸಾಧ್ಯ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಸಾಕಾರಗೊಳ್ಳಲು ಮಹಿಳಾ ಶಕ್ತಿಯ ಪಾಲ್ಗೊಳ್ಳುವಿಕೆ ಅತಿ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.

ಈ ಮಹತ್ವದ ಬೆಳವಣಿಗೆಯ ಹಿನ್ನೆಲೆಯಲ್ಲಿ ಏಪ್ರಿಲ್ 16, 17 ಮತ್ತು 18ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದೆ. ಈ ಮೂರೂ ದಿನಗಳ ಕಾಲ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಬಿಜೆಪಿ ತನ್ನ ಎಲ್ಲಾ ಸಂಸದರಿಗೆ ವಿಪ್ ಜಾರಿ ಮಾಡಿದೆ. 2023ರಲ್ಲಿ ಎಲ್ಲಾ ಪಕ್ಷಗಳು ಈ ಕಾಯ್ದೆಯನ್ನು ಬೆಂಬಲಿಸಿದ್ದನ್ನು ಸ್ಮರಿಸಿರುವ ಮೋದಿ, ಈ ಬಾರಿಯೂ ಅದೇ ಒಗ್ಗಟ್ಟನ್ನು ಪ್ರದರ್ಶಿಸಿ ಸರ್ವಾನುಮತದಿಂದ ತಿದ್ದುಪಡಿ ಅಂಗೀಕರಿಸಲು ಕರೆ ನೀಡಿದ್ದಾರೆ.

Home add -Advt

ಬಾಹ್ಯಾಕಾಶದಿಂದ ಕ್ರೀಡೆಯವರೆಗೆ, ಸಶಸ್ತ್ರ ಪಡೆಗಳಿಂದ ಸ್ಟಾರ್ಟ್‌ ಅಪ್‌ಗಳವರೆಗೆ ಮಹಿಳೆಯರು ತಮ್ಮ ಛಾಪು ಮೂಡಿಸುತ್ತಿದ್ದಾರೆ. ದಶಕಗಳಿಂದ ಬಾಕಿ ಉಳಿದಿದ್ದ ಈ ಬೇಡಿಕೆಯನ್ನು ಈಡೇರಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಲು ಇದೊಂದು ಸುವರ್ಣ ಅವಕಾಶ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಸರ್ಕಾರ 2029ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಈ ನಿರ್ಧಾರ ಕೈಗೊಂಡಿದೆ. ಏಪ್ರಿಲ್ 16ರಿಂದ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನವು ಭಾರತದ ಮಹಿಳಾ ಸಬಲೀಕರಣದ ಹಾದಿಯಲ್ಲಿ ಒಂದು ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

Related Articles

Back to top button