Belagavi NewsBelgaum News

*ಹೆಣ್ಣು ಮಕ್ಕಳ, ಆರೋಗ್ಯ, ಸುರಕ್ಷತೆಗೆ ಆದ್ಯತೆ; ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳಕರ್*

ಬೆಳಗಾವಿಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ-2024

ಪ್ರಗತಿವಾಹಿನಿ ಸುದ್ದಿ; ರಾಜ್ಯದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ, ಸುರಕ್ಷತೆಗೆ ಸರ್ಕಾರ ಹೆಚ್ಚಿನ ಅದ್ಯತೆ ನೀಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳಕರ್ ಹೇಳಿದ್ದಾರೆ.

ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ – 2024 ” ರ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಸರ್ಕಾರ ಹೆಣ್ಣು ಮಕ್ಕಳಿಗೆ ಬಹಳ ಪ್ರೋತ್ಸಾಹ ನೀಡುತ್ತಿದೆ. ಹೆಣ್ಣು ಮಕ್ಕಳ ಒಳಿತಿಗಾಗಿಯೇ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಪ್ರತಿ ಮನೆಯಲ್ಲೂ ಗೃಹಲಕ್ಷ್ಮೀಯಾದ ಹೆಣ್ಣು ಮಗಳು ಇರಬೇಕೆನ್ನುವುದು ಸರ್ಕಾರದ ಆಶಯವಾಗಿದೆ . ಇತ್ತೀಚೆಗೆ ಹೆಚ್ಚುತ್ತಿರುವ ಹೆಣ್ಣು ಭ್ರೂಣಹತ್ಯೆ ತಡೆಗೆ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಬೇರೆಲ್ಲ ಇಲಾಖೆಗಳಿಂತ ಭಿನ್ನ..!!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ತಾವು ಕಾರ್ಯನಿರ್ವಹಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ತಮ್ಮ ಇಲಾಖೆಯು ಬೇರೆಲ್ಲ ಇಲಾಖೆಗಳಿಗಿಂತ ತುಂಬಾ ಭಿನ್ನವಾದುದು. ಇದು ಮನುಷ್ಯನಿಗಾಗಿ ಮನುಷ್ಯತ್ವದಿಂದ ಕೆಲಸ ಮಾಡುವ ಇಲಾಖೆಯಾಗಿದ್ದು, ತಾನೂ ಹೆಣ್ಣಾಗಿ, ಹೆಣ್ಣು ಮಕ್ಕಳ ಭಾವನೆಗಳನ್ನು ಅರಿತು ಕೆಲಸ ಮಾಡಲು ನೆರವಾಗಿದೆ ಎಂದು ತಿಳಿಸಿದರು.

ಪೋಷಕರೇ, ಮಕ್ಕಳಿಗೆ ಮನುಷ್ಯತ್ವ ಕಲಿಸಿ
ಜಗತ್ತಿನ ಮೇಲೆ 16 ಸಾವಿರ ಜೀವರಾಶಿ ಇವೆಯಂತೆ; ಈ ಜೀವರಾಶಿಗಳಲ್ಲೇ ಅತ್ಯಂತ ಶ್ರೇಷ್ಠವಾದುದು ಮನುಷ್ಯ ಜೀವರಾಶಿ. ಇದನ್ನರಿತು ಮನುಷ್ಯ ಮನುಷ್ಯತ್ವದಿಂದ ವರ್ತಿಸಬೇಕು. ಪರಸ್ಪರ ಪ್ರೀತಿ-ವಿಶ್ವಾಸ-ಭಾತೃತ್ವದಿಂದ ಬದುಕಬೇಕು. ಸಮಾಜದಲ್ಲಿ ಜನರ ಜೀವನ ಹೇಗಿದೆ? ಅವರ ದುಃಖ-ದುಮ್ಮಾನಗಳೇನು? ಜೀವನದ ಸವಾಲುಗಳೇನು? ಎನ್ನುವುದನ್ನು ಪೋಷಕರಾದ ತಂದೆ ತಾಯಿಯಂದಿರು ಮಕ್ಕಳಿಗೆ ತಿಳಿ ಹೇಳಬೇಕು ಎಂದು ಸಲಹೆ ನೀಡಿದರು.

ಹೆಣ್ಣು ಮಕ್ಕಳೇ..ಗುಂಪಿನಲ್ಲಿ ಗೋವಿಂದ ಆಗಬೇಡಿ
ಹೆಣ್ಣು ಮಕ್ಕಳು ಬದುಕಿನಲ್ಲಿ ಹಿಂಜರಿಯಬಾರದು. ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲು ಹಾಕಬೇಕು. ಮೊದಲಿಗೆ ಹೆತ್ತವರಿಗೆ ಒಳ್ಳೆಯ ಹೆಸರು ತರಬೇಕು. ಗುಂಪಿನಲ್ಲಿ ಗೋವಿಂದ ಆಗಬಾರದು. ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಬದುಕಿನಲ್ಲಿ ಬರೀ ಓದು ಮುಖ್ಯವಲ್ಲ. ಬದುಕಿನ ಪಾಠವನ್ನು ಕಲಿಯಬೇಕು. ಎಲ್ಲರಿಗಿಂತ ಭಿನ್ನವಾಗಿ ಅಲೋಚನೆ ಮಾಡಬೇಕು. ಹಾಗಾದಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ, ಯುವರಾಜಣ್ಣ ಕದಂ, ಬಾಳು ದೇಸೂರಕರ್ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮಕ್ಕಳಾದ ಸಚಿವೆ ಹೆಬ್ಬಾಳಕರ್..!!
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳಕರ್ ಅವರು ಮಕ್ಕಳೊಂದಿಗೆ ಲವಲವಿಕೆಯಿಂದ ಕೆಲಕಾಲ ಬೆರೆತು, ಸಂಭ್ರಮಿಸಿದರು. ಮುದ್ದು ಮುದ್ದಾದ ಕಂದಮ್ಮಗಳನ್ನು ಎತ್ತಿಕೊಂಡು ಮುಂದಾಡಿದರು. ಪುಟ್ಟ ಪುಟ್ಟ ಮಕ್ಕಳೊಂದಿಗೆ ಆಟವಾಡಿದರು. ಮಕ್ಕಳಂತೆಯೇ ಚಟಪಟನೆ ಮಾತನಾಡಿ ಹುರಿದುಂಬಿಸಿದರು. ಎಲ್ಲರಿಗೂ ಸಿಹಿ ತಿನ್ನಿಸಿ ಖುಷಿ ಪಟ್ಟರು.

Related Articles

Back to top button