
ಪ್ರಗತಿವಾಹಿನಿ ಸುದ್ದಿ: ಖಾಸಗಿ ಬಸ್ಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಈ ಘಟನೆ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಹನುಮಂತಪುರ ಗೇಟ್ ಬಳಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.
ಸಂಜನಾ ಟ್ರಾವೆಲ್ಸ್ಗೆ ಸೇರಿದ ಖಾಸಗಿ ಬಸ್ ಬೆಂಗಳೂರಿನಿಂದ ಕಲಬುರಗಿಗೆ ಹೊರಟಿದ್ದ ವೇಳೆ, ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಈ ಅಗ್ನಿ ಅವಘಡ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯ ಕಾರಣದಿಂದ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ
ಘಟನೆಯ ಸಮಯದಲ್ಲಿ ಬಸ್ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಚಾಲಕನ ಸಮಯಪ್ರಜ್ಞೆಯಿಂದ ಹಾಗೂ ಪ್ರಯಾಣಿಕರ ತ್ವರಿತ ಪ್ರತಿಕ್ರಿಯೆಯಿಂದ ಎಲ್ಲರೂ ಬಸ್ನಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಹೊಡೆಯುತ್ತಿದ್ದಂತೆ ಬಸ್ ರಸ್ತೆ ಬಿಟ್ಟು ಕೆಳಕ್ಕೆ ಹೋಗಿದೆ. ಈ ವೇಳೆ ನೋಡು ನೋಡುತ್ತಿದ್ದಂತೆ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಕ್ಷಣಾರ್ಧದಲ್ಲಿ ಬೆಂಕಿ ಬಸ್ ಪೂರ್ತಿ ವ್ಯಾಪಿಸಿದ್ದು, ಸುಟ್ಟು ಭಸ್ಮವಾಗಿದೆ.




