Belagavi NewsBelgaum NewsEducationKannada NewsKarnataka NewsNationalPolitics

*ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ: ಸಚಿವ ಮಧು ಬಂಗಾರಪ್ಪ ಫುಲ್ ಖುಷ್*

ಪ್ರಗತಿವಾಹಿನಿ ಸುದ್ದಿ: ಇಂದು ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿ ರಾಜ್ಯದಲ್ಲಿ ಶೇ. 86.48 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ರಾಜ್ಯದ ಪಿಯುಸಿ ಇತಿಹಾಸದಲ್ಲೇ ಇದು ಅತ್ಯುತ್ತಮ ಫಲಿತಾಂಶವಾಗಿದ್ದು, ಇದೊಂದು ಐತಿಹಾಸಿಕ ದಿನ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ವರ್ಷ ಒಟ್ಟು 6,32,200 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 5,46,698 ವಿದ್ಯಾರ್ಥಿಗಳು ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ. ಪ್ರತಿಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಶೇ. 88.70 ರಷ್ಟು ಬಾಲಕಿಯರು ಹಾಗೂ ಶೇ. 83.65 ರಷ್ಟು ಬಾಲಕರು ಪಾಸ್ ಆಗಿದ್ದಾರೆ. ವಿಶೇಷವೆಂದರೆ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚು ಸಾಧನೆ ಮಾಡಿದ್ದು ಹಳ್ಳಿಗಳಲ್ಲಿ ಶೇ. 87.62 ರಷ್ಟು ಫಲಿತಾಂಶ ಬಂದಿದೆ.

ವಿಭಾಗವಾರು ಫಲಿತಾಂಶವನ್ನು ಗಮನಿಸಿದರೆ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ 2,66,071 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 1,82,317 ಹಾಗೂ ಕಲಾ ವಿಭಾಗದಲ್ಲಿ 98,310 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಸುಮಾರು 1.70 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು ಕಡಿಮೆ ಅಂಕ ಬಂದಿದ್ದ 5,577 ವಿದ್ಯಾರ್ಥಿಗಳಿಗೆ ಪಾಸಿಂಗ್ ಅಂಕಗಳನ್ನು ನೀಡಿ ಉತ್ತೀರ್ಣ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇಂದಿನಿಂದಲೇ ವೆಬ್‌ಸೈಟ್ ಮತ್ತು ಡಿಜಿ ಲಾಕರ್‌ನಲ್ಲಿ ಅಂಕಪಟ್ಟಿಗಳು ಲಭ್ಯವಿದ್ದು, ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಾರಿ ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿನಿ ದಿಶಾ 600ಕ್ಕೆ 600 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಆದರೆ ಈ ಅಮೋಘ ಸಾಧನೆಯ ಹಿಂದೆ ನೋವಿನ ಕಥೆಯೊಂದಿದೆ. 

ಪರೀಕ್ಷೆ ನಡೆಯುತ್ತಿರುವಾಗಲೇ ತನ್ನ ತಾಯಿಯನ್ನು ಕಳೆದುಕೊಂಡ ದಿಶಾ, ಅತೀವ ದುಃಖದ ನಡುವೆಯೂ ಧೃತಿಗೆಡದೆ ಪರೀಕ್ಷೆ ಬರೆದು ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮೊದಲ ಮೂರು ಪರೀಕ್ಷೆಗಳು ಮುಗಿದ ಬೆನ್ನಲ್ಲೇ ದಿಶಾ ಅವರ ತಾಯಿ ಆಕಸ್ಮಿಕವಾಗಿ ನಿಧನರಾಗಿದ್ದರು. 

ತಾಯಿಯ ಅಗಲಿಕೆಯಿಂದ ಕಂಗಾಲಾಗಿದ್ದ ದಿಶಾಗೆ ಉಳಿದ ಮೂರು ಪರೀಕ್ಷೆಗಳನ್ನು ಎದುರಿಸುವುದು ದೊಡ್ಡ ಸವಾಲಾಗಿತ್ತು. ಆದರೆ, ತನ್ನ ಮಗಳು ದೊಡ್ಡ ಸಾಧನೆ ಮಾಡಬೇಕು ಎಂಬ ತಾಯಿಯ ಆಸೆಯನ್ನು ಈಡೇರಿಸಲು ನಿರ್ಧರಿಸಿದ ದಿಶಾ, ಕಣ್ಣೀರನ್ನು ಎದೆಯಲ್ಲೇ

ಅದುಮಿಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಹಾಜರಾದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button