ಸರ್ಕಾರ ನಿಗದಿಪಡಿಸಿದ ವೆಚ್ಚದಲ್ಲಿ ಚಿಕಿತ್ಸೆ – ಸಂಸದ ಅಣ್ಣಾಸಾಹೇಬ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಚಿಕ್ಕೋಡಿ ತಾಲೂಕಿನ ಮಜಲಟ್ಟಿಯಲ್ಲಿ ಚಿಕ್ಕೋಡಿ ಪಟ್ಟಣದ ಖಾಸಗಿ ವೈಧ್ಯರ ಸಹಕಾರದಿಂದ ೨೦ ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನು ಬರುವ ಎರಡ್ಮೂರು ದಿನಗಳಲ್ಲಿ ಪ್ರಾಂಭಿಸಲಾಗುವುದೆಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಶುಕ್ರವಾರ ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಖಾಸಗಿ ವೈದ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಿದಲ್ಲಿ ಅವರಿಗೆ ಸರ್ಕಾರ ನಿಗದಿಪಡಿಸಿದ ವೆಚ್ಚ ನೀಡಲು ನಿರ್ಧರಿಸಿದೆ.ಆದ್ದರಿಂದ ಖಾಸಗಿ ವೈದ್ಯರು ಮುಂದೆ ಬಂದು ಕೋವಿಡ್ ಆಸ್ಪತ್ರೆಯನ್ನು ಪ್ರಾಂಭಿಸಬೇಕು ಸರ್ಕಾರ ಜಾಗ ನೀಡಲು ಸಿದ್ದವಿದೆ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಒತ್ತಡವನ್ನು ಕಡಿಮೆಮಾಡಲು ಖಾಸಗಿ ವೈದ್ಯರು ಸಹ ಮುಂದೆ ಬಂದು ಕೊವಿಡ್ ಆಸ್ಪತ್ರೆ ಪ್ರಾರಂಭಿಸಿ ಸರ್ಕಾರದೊಂದಿಗೆ ಕೈಜೊಡಿಸಬೇಕು. ಅಗತ್ಯ ಮೂಲ ಸೌಲಭ್ಯ ಸೇರಿದಂತೆ ಸರ್ಕಾರದಿಂದ ಆಸ್ಪತ್ರೆ ತೆರೆಯಲು ಅನುಮತಿಯನ್ನು ನೀಡಲಾಗುವುದು ಎಂದರು.
ಬಳಿಕ ಅಧಿಕಾರಿಗಳು ಹಾಗೂ ವೈದ್ಯರೊಂದಿಗೆ ತಾಲೂಕಿನ ಮಜಲಟ್ಟಿಯಲ್ಲಿರುವ ವಸತಿ ನಿಲಯಕ್ಕೆ ಭೇಟಿ ನೀಡಿ ಕೋವಿಡ್ ಆಸ್ಪತ್ರೆ ಪ್ರಾರಂಭಿಸಲು ಸೂಕ್ತವಾದ ಜಾಗ ಇದೆ. ಪ್ರಶಾಂತ ವಾತಾವರಣ ಹತ್ತಿರದಲ್ಲಿಯೇ ಕೋವಿಡ್ ಕೇರ್ ಸೆಂಟರ್ ಇದೆ. ಆದ್ದರಿಂದ ವೈದ್ಯರು ತೀವ್ರತರವಾದ ಚಿಕಿತ್ಸೆಯನ್ನು ಈ ಕೊವಿಡ್ ಆಸ್ಪತ್ರೆಯಲ್ಲಿ ನೀಡಲಿದ್ದಾರೆ. ಈಗಾಗಲೇ ಆಕ್ಸಿಜನ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ವೈದ್ಯರು ಮಾಡಿಕೊಳ್ಳುತ್ತಿದ್ದಾರೆ ಎಂದರು.
ಚಿಕ್ಕೋಡಿ ಉಪವಿಭಾಗಾಧಿಕಾರಿ ರವಿಂದ್ರ ಕರಲಿಂಗನ್ನವರ ಮಾತನಾಡಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಖಾಸಗಿ ವೈದ್ಯರ ಮನವೊಲಿಸಿ ಖಾಸಗಿ ಕೊವಿಡ್ ಆಸ್ಪತ್ರೆಯನ್ನು ಪ್ರಾರಂಭಿಸಲು ಮುತುವರ್ಜಿ ವಹಿಸಿದ್ದಾರೆ. ಆದ್ದರಿಂದ ಸರ್ಕಾರ ಈ ಆಸ್ಪತ್ರೆ ನಿರ್ಮಾಣಕ್ಕೆ ಮಜಲಟ್ಟಿಯಲ್ಲಿರುವ ವಸತಿನಿಲಯವನ್ನು ಗುರುತಿಸಲಾಗಿದ್ದು, ಇಲ್ಲಿ ವೈದ್ಯರು ತೀವ್ರತರವಾದ ಕೋವಿಡ್ ಚಿಕಿತ್ಸೆಯನ್ನು ನೀಡಲಿದ್ದಾರೆ ಎಂದರು.
ಸಭೆಯಲ್ಲಿ ತಹಸೀಲ್ದಾರ ಸುಭಾಷ ಸಂಪಗಾವಿ ಟಿಎಚ್‌ಓ ಡಾ. ವಿ.ವಿ. ಶಿಂಧೆ, ಪೌರಾಯುಕ್ತ ಮಹಾವೀರ, ಪುರಸಭೆ ಮುಖ್ಯಾಧಿಕಾರಿ ಡಾ.ಸುಂದರ ಆರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಡಿವೈಎಸ್‌ಪಿ ಮನೋಜ ಪಾಟೀಲ, ಸಂಜಯ ಅರಗೆ ಹಾಗೂ ಚಿಕ್ಕೋಡಿ ಪಟ್ಟಣದ ಖಾಸಗಿ ವೈದ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ