ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿದ್ದ ಬಂದ್ ವಾಪಸ್ ಪಡೆಯಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಖಾಸಗಿ ಸಾರಿಗೆ ಒಕ್ಕೂಟಗಳ ಬಹುತೇಕ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂಪಡೆಯಲಾಗಿದೆ.
ಆಟೋ, ಟ್ಯಾಕ್ಸಿ, ಖಾಸಗಿ ಬಸ್, ಓಲಾ, ಊಬರ್, ಏರ್ ಪೋರ್ಟ್ ಟ್ಯಾಕ್ಸಿ ಸೇರಿದಂತೆ ಖಾಸಗಿ ಸಾರಿಗೆ ವಾಹನ ಒಕ್ಕೂಟ ಇಂದು ಬೆಂಗಳೂರು ಬಂದ್ ಗೆ ಕರೆ ನೀಡಿತ್ತು. ನಿನ್ನೆ ಮಧ್ಯರಾತ್ರಿ 12 ಗಂಟೆಯಿಂದ ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ಬಂದ್ ಗೆ ಕರೆ ಕೊಡಲಾಗಿತ್ತು. ಅಲ್ಲದೇ ಬೆಳಿಗ್ಗೆಯಿಂದ ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ವಾಹನ ಚಾಲಕರು 32 ಬೇಡಿಕೆ ಮುಂದಿಟ್ಟು ಸರ್ಕಾರದ ವಿರುದ್ಧ ಮುಷ್ಕರ ಆರಂಭಿಸಿದ್ದರು. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪ್ರತಿಭಟನಾ ಪಾದಯಾತ್ರೆ ಆರಂಭಿಸಿದ್ದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಖಾಸಗಿ ಸಾರಿಗೆ ಚಾಲಕರ ಅಹವಾಲು ಸ್ವೀಕರಿಸಿದ ಸಚಿವ ರಾಮಲಿಂಗಾ ರೆಡ್ಡಿ, ಬಹುತೇಕ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ, ನಮ್ಮ 32 ಬೇಡಿಕೆಗಳಲ್ಲಿ 27 ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಂದ್ ತಾತ್ಕಲೈಕವಾಗಿ ವಾಪಸ್ ಪಡೆಯುತ್ತಿದ್ದೇವೆ. ನಾಳೆ ಸಂಜೆವರೆಗೆ ಕಾದು ನೋಡುತ್ತೇವೆ. ಒಂದು ವೇಳೆ ನಾಳೆ ಸಂಜೆಯೊಳಗೆ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ