ಪ್ರಗತಿವಾಹಿನಿ ಸುದ್ದಿ; ಘಟಪ್ರಭಾ: ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ ಬೇಡಿ, ಇನ್ಪೋಸಿಸ್ ನ ಸುಧಾ ಮೂರ್ತಿ ಅವರಂತಹ ಸಾಧಕಿಯರನ್ನು ಆದರ್ಶವಾಗಿಟ್ಟುಕೊಂಡರೆ ಮಹಿಳೆಯರ ಸಾಧನೆಯ ಹಾದಿ ಸುಲಭವಾಗುತ್ತದೆ ಎಂದು ಯುವ ನಾಯಕಿ ಪ್ರಿಯಂಕಾ ಸತೀಶ್ ಜಾರಕಿಹೊಳಿ ಹೇಳಿದರು.
ಘಟಪ್ರಭ ಸೇವಾದಳದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ನಿಂದ ಹಮ್ಮಿಕೊಂಡಿದ್ದ ಆರ್ಮಿ, ಪೊಲೀಸ್ ಕಾನ್ಸ್‌ಟೇಬಲ್ ಮಹಿಳಾ ಆಕಾಂಕ್ಷಿಗಳ ಉಚಿತ ತರಬೇತಿಯ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನದಲ್ಲಿ ದೇಶದ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಮರ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತಿಚೀನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆ ಸೇರ್ಪಡೆಯಾಗುತ್ತಿದ್ದು, ನಿವು ಕೂಡ ಇಲ್ಲಿನ ತರಬೇತಿ ಲಾಭ ಪಡೆದು ಪೊಲೀಸ್ ಇಲಾಖೆ ಸೇರ್ಪಡೆಯಾಗಿ ಎಂದು ಕರೆ ನೀಡಿದರು.
ಮಹಿಳೆಯರು ಎಂದರೆ ಒಂದು ಶಕ್ತಿ ಇದ್ದ ಹಾಗೆ. ಮನಸ್ಸು ಮಾಡಿದರೇ ಏನು ಬೇಕಾದರೂ ಸಾಧಿಸಬಹುದು, ಜತೆಗೆ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಮುಖ್ಯವಾಗಿ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಮಹಿಳೆಗೆ ಕುಟುಂಬದ ಸಹಕಾರ ಅತ್ಯಗತ್ಯವಾಗಿದೆ. ಮನೆಯವರ ಪ್ರೋತ್ಸಾಹ ಸಿಕ್ಕರೆ ಯಾವುದೇ ಉದ್ಯಮದಲ್ಲಾದರೂ ಸುಲಭವಾಗಿ ಗುರುತಿಸಿಕೊಳ್ಳಬಹುದು. ಉದ್ಯಮ ಬೆಳೆಯಲು ಜನರ ಸಂಪರ್ಕ ಮುಖ್ಯವಾಗಿರುತ್ತದೆ. ಆದ್ದರಿಂದ ತಾಂತ್ರಿಕತೆ ಜತೆಗೆ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಬೇಕು ಎಂದು ಸೂಚಿಸಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕರಾದ ರವೀಂದ್ರ ನಾಯ್ಕರ್ ಮಾತನಾಡಿ, ಮಹಿಳೆಯರು ಇಲ್ಲಿ ಬಂದು ತರಬೇತಿ ಪಡೆಯುತ್ತಿರುವುದಕ್ಕೆ ಬುದ್ಧ, ಬಸವ ಅಂಬೇಡ್ಕರ್ ಅವರ ಸಾಮಾಜಿಕ ಚಳುವಳಿಯೇ ಕಾರಣ. ಅವರು ಮಾಡಿದ ಸಾಮಾಜಿಕ ಕ್ರಾಂತಿಯಿಂದಲೇ ಇಂದು ಭಾರತದಲ್ಲಿ ಮಹಿಳೆಯರು ಮುನ್ನೆಲೆಗೆ ಬರುತ್ತಿದ್ದಾರೆ. ಹೀಗಾಗಿ ಅವರ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸೇವೆಯನ್ನು ನಿಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಘಟಪ್ರಭ ಸೇವಾದಳದ ಸಿಬ್ಬಂದಿ ಉಷಾ ನಾಯಕ ಸೇರಿದಂತೆ ಆರ್ಮಿ, ಪೊಲೀಸ್ ಕಾನ್ಸ್‌ಟೇಬಲ್ ತರಬೇತಿ ಪಡೆಯಲು ಆಗಮಿಸಿದ ಮಹಿಳಾ ಆಕಾಂಕ್ಷಿಗಳು ಇದ್ದರು.
ಮಹಿಳಾ ವಿಶ್ವಕಪ್; ಪಾಕಿಸ್ತಾನ ಬಗ್ಗು ಬಡಿದ ಕನ್ನಡತಿ; ಗೆದ್ದು ಬೀಗಿದ ಭಾರತ
ಅಮೆರಿಕಾ ಬ್ಯಾಸ್ಕೆಟ್ ಬಾಲ್ ಆಟಗಾರ್ತಿಯನ್ನು ಅರೆಸ್ಟ್ ಮಾಡಿದ ರಷ್ಯಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ