Kannada NewsLatest

ವಿನಾಯಕನ ಹಬ್ಬಕ್ಕೆ ಮೊದಲು ವಿಘ್ನನಿವಾರಣೆ?

ವಿನಾಯಕನ ಹಬ್ಬಕ್ಕೆ ಮೊದಲು ವಿಘ್ನನಿವಾರಣೆ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ರಾಜ್ಯದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಕವಿದಿರುವ ಕಾರ್ಮೋಡ ಗಣೇಶ ಚತುರ್ಥಿಗೆ ಮೊದಲು ನಿವಾರಣೆಯಾಗುವ ಲಕ್ಷಣ ಕಾಣುತ್ತಿದೆ.

ವಿಘ್ನವಿನಾಶಕನ ಹಬ್ಬಕ್ಕೆ ಮುಂಚೆ ವಿಘ್ನ ನಿವಾರಣೆಗೆ ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲ್ಯಾನ್ ರೂಪಿಸಿವೆ. ಮುನಿಸಿಕೊಂಡಿರುವ ಉಮೇಶ ಕತ್ತಿ ಮತ್ತು ಜಾರಕಿಹೊಳಿ ಸಹೋದರರನ್ನು ಸಮಾಧಾನಪಡಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ – ಕರ್ನಾಟಕದ ಸರಕಾರ ಬಿಜೆಪಿ ಹೈಕಮಾಂಡ್ ಗೆ ಬೇಡದ ಕೂಸೆ?

ಬಾಲಚಂದ್ರ ಜಾರಕಿಹೊಳಿಗೆ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಅಧ್ಯಕ್ಷ  ಸ್ಥಾನ ನೀಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕೆಎಂಎಫ್ ಗೆ ನಾಮನಿರ್ದೇಶನ ಮಾಡಲಾಗಿದೆ. ಈ ಹಿಂದೆ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಿದ್ದೂ ಇದೇ ಕಾರಣದಿಂದ.

ಇದರಿಂದಾಗಿ ಜೆಡಿಎಸ್ ನ ಎಚ್.ಡಿ.ರೇವಣ್ಣ ಹಿಡಿತದಲ್ಲಿದ್ದ ಕೆಎಂಎಫ್ ಬಿಜೆಪಿ ತೆಕ್ಕೆಗೆ ಜಾರುವ ಲಕ್ಷಣ ಇದೆ.

ಇನ್ನು ಸಚಿವ ಸ್ಥಾನ ನೀಡದಿದ್ದರೆ ರಾಜಿನಾಮೆ ನೀಡುವುದಾಗಿ ಗಡುವು ನೀಡಿದ್ದ ಉಮೇಶ ಕತ್ತಿಗೆ ಇನ್ನು 2-3 ದಿನದಲ್ಲಿ ಸಚಿವಸ್ಥಾನ ನೀಡಲು ನಿರ್ಧರಿಸಲಾಗಿದೆ. ಖಾತೆ ಹಂಚಿಕೆ ಜೊತೆಗೇ ಉಮೇಶ ಕತ್ತಿ ಪ್ರಮಾಣವಚನಕ್ಕೂ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ. ಇವರ ಜೊತೆಗೆ ಇನ್ನೂ ಒಂದಿಬ್ಬರಿಗೆ ಸಚಿವಸ್ಥಾನ ನೀಡಲೂಬಹುದು.

ಇದನ್ನೂ ಓದಿ – ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷ?

ಇನ್ನು ಅಸಮಾಧಾನಗೊಂಡಿರುವ ಬೆಳಗಾವಿ ಶಾಸಕ ಅಭಯ ಪಾಟೀಲ ಸೇರಿದಂತೆ ಇತರ ಹಿರಿಯ ಶಾಸಕರಿಗೆ ನಿಗಮ, ಮಂಡಳಿ, ಸಂಸದೀಯ ಕಾರ್ಯದರ್ಶಿಯಂತಹ ಹುದ್ದೆ ನೀಡಿ ಸಮಾಧಾನಪಡಿಸಲು ನಿರ್ಧರಿಸಲಾಗಿದೆ.

ಈ ಮೂಲಕ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತ ತಾತ್ಕಾಲಿಕವಾಗಿ ಶಮನವಾಗುವ ಸಾಧ್ಯತೆ ಇದೆ.

ನಾಳೆ ಸಚಿವಸಂಪುಟ ಸಭೆ

ಸೋಮವಾರ ಸಂಜೆ ಸಚಿವಸಂಪುಟ ಸಭೆ ನಡೆಯಲಿದೆ. ಔಪಚಾರಿಕವಾಗಿ ನಡೆದ ಮೊದಲ ಸಭೆ ಹಾಗೂ ಪ್ರವಾಹ ಪರಿಹಾರ ಸಂಬಂಧ ಒಂದು ಸಭೆ ನಡೆದಿದ್ದು ಬಿಟ್ಟರೆ ಪೂರ್ಣಪ್ರಮಾಣದ ಸಚಿವಸಂಪುಟ ಸಭೆ ನಡೆದಿಲ್ಲ.

ಹಾಗಾಗಿ ಬಿಜೆಪಿ ಸರಕಾರದ ಪೂರ್ಣಪ್ರಮಾಣದ ಮೊದಲ ಸಚಿವಸಂಪುಟ ಸಭೆ ಇದಾಗಲಿದೆ. ಸರಕಾರ ಸಾಗುವ ದಿಕ್ಕನ್ನು ಈ ಸಭೆ ನಿರ್ಧರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ – ಸರಕಾರ ಪತನವಾಗಿ ತಿಂಗಳಲ್ಲೇ ಬೀದಿ ಜಗಳಕ್ಕಿಳಿದ ಕಾಂಗ್ರೆಸ್ -ಜೆಡಿಎಸ್

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button