ವಿದ್ಯಾರ್ಥಿಗಳು ವಿಜ್ಞಾನ, ಸಂಶೋಧನ ಹಾಗೂ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದರೆ ದೇಶ ಪ್ರಗತಿ ಸಾಧಿಸಲು ಸಾಧ್ಯ – ಡಾ. ಅತುಲ್ ದೇಶಪಾಂಡೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ವಿದ್ಯಾರ್ಥಿಗಳು ವಿಜ್ಞಾನ, ಸಂಶೋಧನ ಹಾಗೂ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದರೆ ದೇಶದ ಪ್ರಗತಿ ಸಾಧಿಸಲು ಸಾಧ್ಯ. ಶಿಕ್ಷಣವು ಸ್ವಾವಲಂಬನೆಯ ಆಧಾರವಾಗಿದೆ ಆದ್ದರಿಂದ ಪ್ರತಿಯೊಬ್ಬರು ಉಚ್ಛಶಿಕ್ಷಣದ ಗುರಿ ಹೊಂದಿರಬೇಕು. ವಿಜ್ಞಾನದ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆ ಮಾಡಿ ಪರಿಸರ ಕಾಪಾಡುವ ಜೊತೆಗೆ ದೇಶದ ಪ್ರಗತಿ ಸಾಧಿಸಲು ಪ್ರಯತ್ನಿಸಬೇಕು.
ತಾಂತ್ರಿಕ ಯುಗದಲ್ಲಿ ಈಗಿನ ವಿದ್ಯಾಭ್ಯಾಸದ ಜೊತೆಗೆ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವುದು ಕೇವಲ ವಿದ್ಯಾರ್ಥಿನಿಯರಿಂದ ಮಾತ್ರ ಸಾಧ್ಯವಾಗುತ್ತದೆ. ಸಾಧನೆ ಮಾಡಲು ಈಗಿನ ವೈಜ್ಞಾನಿಕ ಯುಗದಲ್ಲಿ ಹಲವಾರು ಶಿಕ್ಷಣ ಕ್ಷೇತ್ರಗಳಿವೆ. ತಮ್ಮ ಆಸಕ್ತಿಗೆ ಅನುಗುಣವಾಗಿ ಆಯ್ಕೆಮಾಡಿ ಉಚ್ಛ ಹಾಗೂ ಗುಣಮಟ್ಟ ಶಿಕ್ಷಣ ಪಡೆದು ಯಶಸ್ವಿ ಜೀವನ ಸಾಗಿಸಲು ವಿದ್ಯಾರ್ಥಿನಿಯರು ವಿಶಿಷ್ಟ ಕ್ಷೇತ್ರಗಳನ್ನು ಆಯ್ಕೆಮಾಡಿ ತಮ್ಮ ಗುರಿಯನ್ನು ಮುಟ್ಟುವುದರಲ್ಲಿ ಸಫಲರಾಗಬೇಕು.
ಇಂದು ತಾಂತ್ರಿಕ, ವೈಜ್ಞಾನಿಕ, ವೈಮಾನಿಕ ಕ್ಷೇತ್ರಗಳಲ್ಲಿ ಸ್ತ್ರೀಯರು ಸಾಧನೆಗೈದು ಹಲವಾರು ವಿದ್ಯಾರ್ಥಿನಿಯರಿಗೆ ಮಾದರಿಯಾಗಿದ್ದಾರೆ ಎಂದು ಬೆಳಗಾವಿಯ ಆಯ್.ಎಮ್.ಇ.ಆರ್.ನ ನೀರ್ದೇಶಕರಾದ ಡಾ. ಅತುಲ್ ದೇಶಪಾಂಡೆ ಹೇಳಿದರು. ಶ್ರೀಮತಿ. ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಿದ ‘ವಾರ್ಷಿಕ ಬಹುಮಾನ ವಿತರಣಾ ಸಮಾರಂಭ’ ಉದ್ಘಾಟಿಸಿ ಮಾತನಾಡಿದರು.
ವಿದ್ಯಾಮಂದಿರದಲ್ಲಿ ಗುರುಗಳು ಪಠ್ಯಪುಸ್ತಕ ಬೋಧಿಸುವಾಗ ಸಂಸ್ಕೃತಿ ಹಾಗೂ ನೀತಿಪಾಠ ಬೋಧಿಸುವುದು ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಪಠ್ಯಪುಸ್ತಕ ಜೊತೆಯಲ್ಲಿ ಇನ್ನಿತರ ಪುಸ್ತಕಗಳನ್ನು ಓದಿ ಜ್ಞಾನ ವೃದ್ಧಿಸಿಕೊಳ್ಳಬೇಕು. ಶಿಕ್ಷಕರು ನೀಡುವ ಬೋಧನೆ ಕಡೆಗೆ ಗಮನವಿಟ್ಟು ಅಧ್ಯಯನ ಮಾಡಬೇಕು ಮತ್ತು ಸದ್ಗುಣವನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ಪರೀಕ್ಷೆಯಲ್ಲಿ ಅಂಕ ಪಡೆಯಲು ಅಧ್ಯಯನ ಮಾಡದೇ ಜ್ಞಾನ ವೃದ್ಧಿಗಾಗಿ ಓದಬೇಕು ಜೊತೆಯಲ್ಲಿ ಸುಸಂಸ್ಕೃತತೆ, ಪ್ರಾಮಾಣಿಕತೆ, ಒಳ್ಳೆಯ ವ್ಯಕ್ತಿತ್ವ ಮುಂತಾದ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಸುಧೀರ ಕುಲಕರ್ಣಿ ಮಾತನಾಡಿ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ಉನ್ನತ ಶಿಕ್ಷಣ ಪಡೆದು ಯಾವುದೇ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಹೇಳಿದರು.
ಇವರು ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಪ್ರತಿಶತ 100 ರಷ್ಟು ಫಲಿತಾಂಶ ನೀಡಿದ ವಿಷಯ ಶಿಕ್ಷಕರಿಗೆ ಕಾಣಿಕೆ ನೀಡಿ ಸನ್ಮಾನಿಸಿದರು. ಶ್ರೀಮತಿ. ಲಲಿತಾ ಮದಿಹಳ್ಳಿ, ಶ್ರೀ. ವಿಜೇಂದ್ರ ಗುಡಿ, ಶ್ರೀ. ಎಮ್. ಕೆ. ಮಾದಾರ, ಶ್ರೀಮತಿ. ಶ್ರೀದೇವಿ ಕುಲಕರ್ಣಿ ಉಪಸ್ಥಿತರಿದ್ದರು. ಶಾಲೆಯ 26 ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಸುಧಾಕರ ಶಾನಬಾಗ, ವಾಮನ್ ಹುಯಿಲಗೊಳ, ಸುಧಾಮೂರ್ತಿ (ಬೆಂಗಳೂರು), ಸುನೀತಾ ಮಠದ, ಲಲಿತಾ ಮದಿಹಳ್ಳಿ, ವಿಜೇಂದ್ರ ಗುಡಿ, ವೃಂದಾ ಹುಯಿಲಗೊಳ, ಸಂಗೀತಾ ಶಾಲದಾರ, ನೀತಾ ರಾವ, ಸತೀಶ ದೇಶಪಾಂಡೆ ಮುಂತಾದ 60 ಕ್ಕಿಂತ ಹೆಚ್ಚು ಶಿಕ್ಷಣ ಪ್ರೇಮಿಗಳು ನೀಡಿದ ಬಹುಮಾನ ನೀಡಿ ಗೌರವಿಸಲಾಯಿತು.
ಶ್ರೀದೇವಿ ಇಟಗಿಕರ, ಕಾವ್ಯಾ ಬಸರಗಿ, ಪ್ರಿಯಂಕಾ ಗಾವಡೆ, ಅಕ್ಷತಾ ಕೊಚರಗಿ, ಕಾವೇರಿ ತವಗದ, ಅಂಕಿತಾ ದೇಶಪಾಂಡೆ, ಪ್ರೇರಣಾ ನಾಡಗೀರ, ಸಾಕ್ಷತಾ ಬನೊಶಿ, ಶೃತಿ ತಮ್ಮನಾಚೆ, ವಿದ್ಯಾಶ್ರೀ ಕಾರಭಾರಿ, ಖುಶಿ ಗುಂಡಪ್ಪನವರ ಮುಂತಾದ ‘28’ ವಿದ್ಯಾರ್ಥಿನಿಯರನ್ನು ಕಾರ್ಯಕ್ರಮದಲ್ಲಿ ನಗದು ಬಹುಮಾನ ವಿತರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಮ್. ಕೆ. ಮಾದಾರ ಸ್ವಾಗತಿಸಿ, ಸರಸ್ವತಿ ದೇಸಾಯಿ ನಿರೂಪಿಸಿ, ಎಲ್.ಡಿ ಮದಿಹಳ್ಳಿ ವಂದನಾರ್ಪಣೆ ಮಾಡಿದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ