Kannada NewsKarnataka News

ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ; ಮದ್ಯ ಮಾರಾಟ ನಿಷೇಧ

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ: ಜಿಲ್ಲೆಯಾದ್ಯಂತ ನಿಷೇಧಾಜ್ಷೆ ಜಾರಿ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ -೨೦೨೩ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ೧೮ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಮೇ.೧೩ ೨೦೨೩ ರಂದು ರಾಣಿ ಪಾರ್ವತಿ ದೇವಿ ಮಹಾವಿದ್ಯಾಲಯದಲ್ಲಿ ಜರುಗಲಿದೆ.
ಮತ ಎಣಿಕೆ ಕಾರ್ಯದ ಪಾವಿತ್ರ್ಯತೆಯನ್ನು ಕಾಪಾಡುವ ಹಿತ ದೃಷ್ಟಿಯಿಂದ ಹಾಗೂ ಆಯ್ಕೆಯಾದ ಅಭ್ಯರ್ಥಿಗಳು ವಿಜಯೋತ್ಸವ ಆಚರಣೆ ಮಾಡುವುದು, ಬಣ್ಣ ಏರಚುವುದು ಹಾಗೂ ಮೆರವಣಿಗೆ ಮಾಡುವ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ಇತರೆ ಅಭ್ಯರ್ಥಿಗಳು ಹಾಗೂ ಆ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ತಂಟೆ ತಕರಾರು ಮಾಡುವ ಸಾಧ್ಯತೆ ಇರುತ್ತದೆ. ಸಾರ್ವಜನಿಕ ಸಭೆ ಸಮಾರಂಭಗಳನ್ನು ಮಾಡಿ ವಿಜಯೋತ್ಸವ ಆಚರಣೆ ಮಾಡುವ ಸಂಭವ ಇರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತ ದೃಷ್ಟಿಯಿಂದ ಮೇ.೧೨ ೨೦೨೩ ರ ಸಂಜೆ ೫ ಗಂಟೆ ಯಿಂದ ಮೇ.೧೪ ರ ಬೆಳಗ್ಗೆ ೭ ಗಂಟೆಯವರೆಗೆ ಸಿ.ಆರ್.ಪಿ.ಸಿ ೧೯೭೩ ರ ಕಲಂ ೧೪೪ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ ೧೯೬೩ ರ ಕಲಂ ೩೫ ರನ್ವಯ ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ನಿತೇಶ್ ಕೆ ಪಾಟೀಲ್ ನಿಷೇಧಾಜ್ಷೆ ಹೊರಡಿಸಿ ಆದೇಶಿಸಿದ್ದಾರೆ.
ನಿಷೇಧಾಜ್ಞೆಯ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ೫ ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮರವಣಿಗೆ ಅಥವಾ ಸಾರ್ವಜನಿಕ/ರಾಜಕೀಯ ಸಭೆ ಸಮಾರಂಭ ಜರುಗುಸುವುದನ್ನು ನಿಷೇಧಿಸಲಾಗಿದೆ.
ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗಧೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕೂ ಅಥವಾ ದೇಹಕ್ಕೆ ಅಪಾಯವನ್ನುಂಟು ಮಾಡಲು ಉಪಯೋಗಿಸಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ.
ಕಲ್ಲುಗಳನ್ನು ಕ್ಷಾರ ಪದಾರ್ಥ ಇಲ್ಲವೇ ಸ್ಪೋಟಕ ವಸ್ತುಗಳು ಯಾವುದೇ ದಹನಕಾರಿ ವಸ್ತುಗಳು ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಮತ್ತು ಶೇಖರಿಸುವುದನ್ನು ನಿಷೇಧಿಸಲಾಗಿದೆ.
ಮನುಷ್ಯ ಶವಗಳ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳನ್ನು ಪ್ರದರ್ಶನ ಮಾಡುವುದನ್ನು ಪ್ರತಿಬಂಧಿಸಲಾಗಿದೆ.
ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕರ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.
ಯಾವುದೇ ವ್ಯಕ್ತಿ ಸಾರ್ವಜನಿಕರಾಗಲಿ ಮೇಲೆ ವಿವರಿಸಿದ ಮಾರಕಾಸ್ತ್ರಗಳು, ಸ್ಪೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರೆ ಆಕ್ಷೇಪಾರ್ಹ ವಸ್ತುಗಳು ಹೊಂದಿದ್ದು ಕಂಡುಬಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಅಂಥಹ ಮಾರಕಾಸ್ತ್ರಗಳನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಅಲ್ಲದೆ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.
ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ. ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳು ಯಾವತ್ತೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಾನೂನು ಮತ್ತು ಸುವ್ಯವಸ್ಥೆ ಧಕ್ಕೆ ತರದಂತೆ ನಿಯಮಗಳನ್ನು ಪಾಲಿಸುವುದು.
ಸದರಿ ಆಜ್ಞೆಯನ್ನು ಉಲ್ಲಂಘಿಸುವವರ ವಿರುದ್ದ ಕಲಂ ೧೮೮ ಭಾರತೀಯ ದಂಡ ಸಂಹಿತೆಯ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತ ಎಣಿಕೆ: ಮದ್ಯ ಮಾರಾಟ ನಿಷೇಧ

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ -೨೦೨೩ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ೧೮ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಮೇ.೧೩ ೨೦೨೩ ರಂದು ಜರುಗಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಚುನಾವಣಾ ಪ್ರಕ್ರಿಯೆಗಳ ಮುಕ್ತ ಹಾಗೂ ನಿಷ್ಪಕ್ಷಪಾತ ರೀತಿಯಲ್ಲಿ ಶಾಂತಿಯುತವಾಗಿ ನಡೆಯಬೇಕೆಂಬ ದೃಷ್ಟಿಯಿಂದ ಹಾಗೂ ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮೇ.೦೮ ೨೦೨೩ ರಂದು ಸಂಜೆ ೫ ಗಂಟೆಯಿಂದ ಮೇ.೧೧ ರ ಬೆಳಿಗ್ಗೆ ೧೧ ಗಂಟೆಯವರೆಗೆ ಹಾಗೂ ಮೇ.೧೩ ಮತ ಎಣಿಕೆಯ ದಿನದಂದು ಬೆಳಿಗ್ಗೆ ೬ ಗಂಟೆಯಿಂದ ಮೇ.೧೪ ೨೦೨೩ ರ ಬೆಳಿಗ್ಗೆ ೬ ಗಂಟೆಯವರೆಗೆ ಬೆಳಗಾವಿ ಜಿಲ್ಲೆಯಾದ್ಯಂತ ಎಲ್ಲ ಮದ್ಯದ ಅಂಗಡಿ/ಬಾರ್‌ಗಳನ್ನು ಬಂದ್ ಇಡಲು ಹಾಗೂ ಎಲ್ಲ ರೀತಿಯ ಮದ್ಯ ತಯಾರಿಕಾ ಘಟಕಗಳು/ಸಾಗಾಣಿಕೆ/ಸಂಗ್ರಹಣೆಯನ್ನು/ಮಾರಾಟ ಮಳಿಗೆಗಳನ್ನು ಬಂದ್ ಇಡಲು ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ನಿತೇಶ್ ಕೆ ಪಾಟೀಲ್ ಅವರು ಆದೇಶಿಸಿದ್ದಾರೆ.

ಆದೇಶದಲ್ಲಿಯ ಸೂಚನೆಯನ್ನು ಉಲ್ಲಂಘಿಸಿದಲ್ಲಿ ಅಂಥವರು ಪ್ರಜಾ ಪ್ರತಿನಿಧಿ ಕಾಯ್ದೆ ೧೯೫೧ ರ ಕಲಂ ೧೩೫ ಅ (೨) ಮತ್ತು (೩) ರನ್ವಯ ಶಿಕ್ಷೆಗೆ ಒಳಪಡುವರು ಎಂದು ತಿಳಿಸಿದ್ದಾರೆ.

https://pragati.taskdun.com/important-notice-regarding-traffic-and-parking-in-belgaum-on-saturday/
https://pragati.taskdun.com/karnatakaheavy-raincyclone-2/
https://pragati.taskdun.com/view-election-results-from-where-you-are-here-is-the-link/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button