ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಉತ್ತೇಜನಕ್ಕೆ ಯೋಜನೆ – ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದ 5 ವರ್ಷದಲ್ಲಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 105ಕ್ಕೂ ಹೆಚ್ಚು ದೇವಸ್ಥಾನಗಳ ನಿರ್ಮಾಣ ಇಲ್ಲವೇ, ಜೀರ್ಣೋದ್ಧಾರ ಮಾಡಲಾಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಮಂಗಳವಾರ ಕ್ಷೇತ್ರದ ಸುಳಗಾ (ವೈ) ಗ್ರಾಮದ ಶ್ರೀ ಭಾವಕೇಶ್ವರಿ ದೇವಿ ಮಂದಿರದ ವಾಸ್ತುಶಾಂತಿ, ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಕ್ಷೇತ್ರ ಧಾರ್ಮಿಕವಾಗಿ ಅತ್ಯಂತ ಜಾಗ್ರತ ಕ್ಷೇತ್ರವಾಗಿದೆ. ಜನರ ಭಾವನೆಗೆ ಅನುಗುಣವಾಗಿ ಎಲ್ಲ ಜಾತಿ, ಧರ್ಮಗಳ ಧಾರ್ಮಿಕ ಕಾರ್ಯಗಳಿಗೆ ಹಣ ಒದಗಿಸಲಾಗಿದೆ. ಸ್ವಂತ ಆಸಕ್ತಿ ವಹಿಸಿ ಅತ್ಯಂತ ಗುಣಮಟ್ಟದ ಕಾಮಗಾರಿ ನಡೆಯುವಂತೆ ಗಮನಹರಿಸಲಾಗಿದೆ. ಜನರ ಸಹಕಾರವನ್ನು ಎಂದಿಗೂ ನಾನು ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಕ್ಷೇತ್ರದ ಅನೇಕ ದೇವಸ್ಥಾನಗಳನ್ನು ಧಾರ್ಮಿಕ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಅವಕಾಶವಿದೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಜನರ ಜೊತೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಎಮ್ ಆಯ್ ಪಾಟೀಲ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಅರವಿಂದ ಪಾಟೀಲ, ಯುವರಾಜ ಕದಂ, ಎಸ್ ಎಮ್ ಬೆಳವಟ್ಕರ್, ಜಯದೇವ ಕುಕಡೋಳ್ಕರ್, ಯಮುನಾತಾಯಿ ಪಾಟೀಲ, ರವಿ ಹಜಗೊಳ್ಕರ್, ಕಿರಣ ವಾಲೇಕರ್, ಯಲ್ಲಪ್ಪ ಕಣಬರ್ಕರ್, ಗೋಪಾಲ ಕುಕಡೋಳ್ಕರ್, ಸಂತೋಷ ಪಾಟೀಲ, ಬಿ ಬಿ ಪಾಟೀಲ, ಪಿ ಜಿ ಪಾಟೀಲ, ವಿಜಯ ಧಾಮಣೆಕರ್, ಕೃಷ್ಣ ಬಸ್ತವಾಡ್ಕರ್, ಸಂಪತ್ ಪಾಟೀಲ ಹಾಗೂ ದೇವಸ್ಥಾನ ಕಮೀಟಿಯ ಎಲ್ಲ ಪದಾಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ