ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ಅಂತಾರಾಜ್ಯ ಪ್ರವಾಹ ನಿರ್ವಹಣಾ ಸಮಿತಿ ರಚನೆ ಮಾಡಲು ಮಹಾರಾಷ್ಟ್ರ ಸರಕಾರ ಕರ್ನಾಟಕದ ಮುಂದೆ ಪ್ರಸ್ತಾವನೆ ಸಲ್ಲಿಸಿದೆ. ಕಳೆದ ಆಗಸ್ಟ್ 19ರಂದೇ ಈ ಸಂಬಂಧ ಮಹಾರಾಷ್ಟ್ರ ಪ್ರಸ್ತಾವನೆ ಸಲ್ಲಿಸಿದ್ದು, ಇದನ್ನು ಒಪ್ಪಬೇಕೋ ಬೇಡವೋ ಎನ್ನುವ ವಿಷಯ ಕರ್ನಾಟಕ ಸರಕಾರದ ಪರಿಶೀಲನೆಯಲ್ಲಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಪರಿಷತ್ತಿನಲ್ಲಿ ಮಹಾಂತೇಶ ಕವಟಗಿಮಠ ಎತ್ತಿದ ಪ್ರಸ್ತಾವನೆಗೆ ಉತ್ತರ ನೀಡಿದರು. ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ, ದೂಧಗಂಗಾ, ಘಟಪ್ರಭಾ, ಮಲಪ್ರಭಾ ನದಿಗಳು ಉಕ್ಕಿ ಹರಿದು ಅಪಾರ ಪ್ರಮಾಣದ ಆಸ್ತಿಗಳು, ಬೆಳೆಗಳು, ವಾಸದ ಮನೆಗಳು ಹಾನಿಗೊಳಗಾಗಿವೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ನದಿ ನೀರಿನ ಸದ್ಭಳಕೆ ಮಾಡುವ ಹಿನ್ನೆಲೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಜಂಟಿ ನರ್ವಹಣಾ ಸಮಿತಿ ರಚಿಸಲು ಕವಟಗಿಮಠ ಪ್ರಸ್ತಾವನೆ ಮುಂದಿಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಜಲಾಶಯಗಳ ನಿರ್ವಹಣೆಗೆ ಮಹಾರಾಷ್ಟ್ರ ಪ್ರಸ್ತಾವ ಇಟ್ಟಿದೆ. ಕೇಂದ್ರ ಸರಕಾರದ ಕಾರ್ಯದರ್ಶಿಗಳು ಸಹ ಈ ಬಗ್ಗೆ ಸಲಹೆ ನೀಡಿದ್ದರು. ಹಾಗಾಗಿ ಮಹಾರಾಷ್ಟ್ರ ಸರಕಾರದ ಜಲಸಂಪನ್ಮೂಲ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯಲ್ಲಿ ಮಹಾರಾಷ್ಟ್ರದ ವಿವಿಧ ಅಧಿಕಾರಿಗಳ ಜೊತೆಗೆ ಕರ್ನಾಟಕದ ಆಲಮಟ್ಟಿ ಮುಖ್ಯ ಎಂಜಿನಿಯರ್, ಬೆಳಗಾವಿಯ ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್, ಸೆಂಟ್ರಲ್ ವಾಟರ್ ಕಮಿಶನ್ ಕಾರ್ಯದರ್ಶಿ ಸಹ ಇದ್ದಾರೆ. ಒಟ್ಟೂ 8 ಸದಸ್ಯರ ಸಮಿತಿ ಪ್ರಸ್ತಾಪಿಸಲಾಗಿದೆ.
ಈ ಸಮಿತಿ ರಚನೆಗೆ ಒಪ್ಪಿಗೆ ನೀಡುವ ವಿಷಯ ಕರ್ನಾಟಕದ ಸರಕಾರದ ಪರಿಶೀಲನೆಯಲ್ಲಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಈ ಕುರಿತು ಮಹಾಂತೇಶ ಕವಟಗಿಮಠ ಪ್ರಗತಿವಾಹಿನ ಜೊತೆ ಮಾತನಾಡಿ, ಈ ವಿಷಯದಲ್ಲಿ ಮಹಾರಾಷ್ಟ್ರದ ಜೊತೆ ಮಾತುಕತೆ ನಡೆದಿದೆ. ಕೆಲವು ತಿದ್ದುಪಡಿ ಮಾಡಬೇಕಾಗಿದೆ. ಆದರೆ ಮಹಾರಾಷ್ಟ್ರ ಚುನಾವಣೆ ಇರುವುದರಿಂದ ಹೊಸ ಸರಕಾರ ರಚನೆಯ ನಂತರವೇ ಇದು ಚಾಲನೆ ಪಡೆಯಲಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ