ಡಿ.ಕೆ.ಶಿವಕುಮಾರ ಬಂಧನ ವಿರೋಧಿಸಿ ಪ್ರತಿಭಟನೆ; ಹಿರಿಯ ಅಧಿಕಾರಿಗಳ ಸಭೆ ಕರೆದ ಗೃಹ ಸಚಿವ ಬೊಮ್ಮಾಯಿ
ಡಿ.ಕೆ.ಶಿವಕುಮಾರ ಬಂಧನ ವಿರೋಧಿಸಿ ಪ್ರತಿಭಟನೆ; ಹಿರಿಯ ಅಧಿಕಾರಿಗಳ ಸಭೆ ಕರೆದ ಗೃಹ ಸಚಿವ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ ಬೆನ್ನಲ್ಲೇ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ. ಡಿ.ಕೆ.ಶಿವಕುಮಾರ ಅಭಿಮಾನಿಗಳು ಕನಕಪುರ, ರಾಮನಗರ ಮೊದಲಾದೆಡೆ ಭಾರಿ ಪ್ರತಿಭಟನೆ ನಡೆಸುತ್ತಿದ್ದು, ಬೆಳಗಾವಿ ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲೂ ಪ್ರತಿಭಟನೆ ಕಾವೇರುತ್ತಿದೆ.
ಶಿವಕುಮಾರ ಬಂಧನ ವಿರೋಧಿಸಿ ಇಂದು ಕನಕಪುರ ಮತ್ತು ರಾಮನಗರ ಬಂದ್ ಕರೆ ಕೊಡಲಾಗಿದೆ. ರಾತ್ರಿಯಿಂದಲೇ ಅವರ ಅಭಿಮಾನಿಗಳು ಪ್ರತಿಭಟನೆಗಿಳಿದಿದ್ದಾರೆ. ಕೆಲವಡೆ ಬಸ್ ಗಳಿಗೆ ಕಲ್ಲು ತೂರಾಟ, ಬೆಂಕಿ ಹಚ್ಚುವ ಕೃತ್ಯವೂ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಲಾಗಿದೆ.
ಮುಂಜಾಗ್ರತೆ ಕ್ರಮವಾಗಿ ಕನಕಪುರದಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೆಲವೆಡೆ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬೆಳಗಾವಿಯಲ್ಲೂ ಇಂದು ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ಹಿರೇಬಾಗೇವಾಡಿಯಲ್ಲಿ ನಿನ್ನೆ ರಾತ್ರಿ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ಅಡಿವೇಶ ಇಟಗಿ ನೇತೃತ್ವದಲ್ಲಿ ಪ್ರತಿಭಟಿಸಲಾಗಿದೆ.
ಅಧಿಕಾರಿಗಳ ಸಭೆ
ಡಿ.ಕೆ.ಶಿವಕುಮಾರ ಬಂಧನದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಪ್ರತಿಭಟನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮಮ್ಮಾಯಿ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ.
ಇನ್ನು ಕೆಲವೇ ಹೊತ್ತಿನಲ್ಲಿ ಸಭೆ ನಡೆಸುವುದಾಗಿ ಬೊಮ್ಮಾಯಿ ತಿಳಿಸಿದ್ದು, ಶಾಂತ ರೀತಿಯಿಂದ ಪ್ರತಿಭಟನೆ ನಡೆಸುವಂತೆ, ಸಾರ್ವಜವನಿಕರಿಗೆ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ವಿನಂತಿಸಿದ್ದಾರೆ.
ಈವರೆಗಿನ ಮಾಹಿತಿ ಪ್ರಕಾರ 5-6 ಬಸ್ ಗಳಿಗೆ ಕಲ್ಲು ತೂರಾಟವಾಗಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಮುಂಜಾಗ್ರತೆ ಕ್ರಮವಾಗಿ ಮುಖ್ಯಮಂತ್ರಿ ನಿವಾಸ, ಜಾರಿ ನಿರ್ದೇಶನಾಲಯದ ಕಚೇರಿ ಸೇರಿದಂತೆ ಹಲವೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಈ ಮಧ್ಯೆ ಡಿ.ಕೆ.ಶಿವಕುಮಾರ ಅವರನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತಿದೆ. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆಯೋ, ಕಸ್ಟಡಿಗೆ ನೀಡಲಾಗುತ್ತದೆಯೋ ಕಾದುನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ