Latest

ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರ ಕುರಿತ ವಿವಾದಾತ್ಮಕ ಹೇಳಿಕೆ: ಬಿಜೆಪಿ ವಕ್ತಾರ ಮಹೇಶ ಉಚ್ಚಾಟನೆಗೆ ಆಗ್ರಹಿಸಿ ಕರವೇ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡುವ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡಿರುವ ಬಿಜೆಪಿ ವಕ್ತಾರ ಎಂ.ಮಹೇಶ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಚನ್ನಮ್ಮ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.

ಚನ್ನಮ್ಮ ವೃತ್ತದಲ್ಲಿ ಕೆಲ ಕಾಲ ಧರಣಿ ನಡೆಸಿದ ಪ್ರತಿಭಟನಾಕಾರರು ಮಹೇಶ ವಿರುದ್ಧ ಘೋಷಣೆಗಳನ್ನು ಕೂಗಿ ಅವರ ಉಚ್ಚಾಟನೆಗೆ ಆಗ್ರಹಿಸಿದರು.  ಈ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ್ ಕಟೀಲ್ ಅವರಿಗೆ ಮನವಿ ರವಾನಿಸಲಾಯಿತು.

ಬೆಳಗಾವಿಯ ಸುವರ್ಣ ವಿಧಾನಸೌಧ ಉತ್ತರ ಕರ್ನಾಟಕದ ಶಕ್ತಿ ಕೇಂದ್ರ, ಇದು ಉತ್ತರ ಕರ್ನಾಟಕದ ಅಭಿವೃದ್ಧಿಗೆ ದಿಕ್ಸೂಚಿ ಆಗಬೇಕೆನ್ನುವುದು ಉತ್ತರ ಕರ್ನಾಟಕದ ಜನತೆಯ ಆಶಯವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗಾಗಿ ರಾಜ್ಯಮಟ್ಟದ ಕಚೇರಿಗಳನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಉತ್ತರ ಕರ್ನಾಟಕದ ಮಠಾಧೀಶರ ಎದುರು ಪ್ರಮಾಣ ಮಾಡಿದ್ದರು. ಆದರೆ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ ಅವರು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ.ಸುವರ್ಣ ವಿಧಾನಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರ ಮಾಡಿದರೆ  ಈ ಭಾಗದ ಅಭಿವೃದ್ಧಿ ಆಗುತ್ತೆ ಎನ್ನುವದು ತಪ್ಪು ಎಂದು ಹೇಳಿಕೆ ನೀಡುವ ಮೂಲಕ ಉತ್ತರ ಕರ್ನಾಟಕದ ಜನತೆಯ ಆಶೋತ್ತರಗಳಿಗೆ ಅವಮಾನಿಸಿದ್ದಾರೆ.

ಅವರ ಹೇಳಿಕೆಯಿಂದ ಬೆಳಗಾವಿಯಲ್ಲಿ ನಿರ್ಮಿಸಲಾಗಿರುವ ಸುವರ್ಣವಿಧಾನ ಸೌಧದ ಅಸ್ತಿತ್ವಕ್ಕೆ ಧಕ್ಕೆಯಾಗಿದೆ.ಈ ಭಾಗದ ಶಕ್ತಿ ಕೇಂದ್ರದ ಘನತೆ ಗೌರವ ಹಾಳಾಗಿದ್ದು ,ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿರುವ ಬಿಜೆಪಿ ವಕ್ತಾರ ಎಂ ಮಹೇಶ್ ಅವರನ್ನು ಕೂಡಲೇ ಬಿಜೆಪಿಯಿಂದ ಉಚ್ಛಾಟಿಸಿ,ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡುವ ನಿರ್ಧಾರ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ  ಕಟೀಲ್ ಅವರು ಕನಿಷ್ಠ ಮೂರು ತಿಂಗಳಿಗೊಮ್ಮೆ ಸುವರ್ಣ ವಿಧಾನಸೌಧದಲ್ಲಿ ಸಚಿವ ಸಂಪುಟದ ಸಭೆ ನಡೆಸುವಂತೆ, ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.

ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ,  ಮಹಾದೇವ ತಳವಾರ, ಸುರೇಶ್ ಗವನ್ನವರ, ಗಣೇಶ್ ರೋಖಡೆ, ದೇವೇಂದ್ರ ತಳವಾರ, ಸತೀಶ ಗುಡ್ಡದವರ, ವಿನಾಯಕ ಬೋವಿ, ಗೋಪಿ ರಾಠೋಡ, ಸತೀಶ ಗಾಡಿವಡ್ಡರ, ರಮೇಶ ಯರಗಣ್ಣವರ, ಅಭಿ ಅಗಸಗಿ, ಚೇತನ ಮಾಸ್ತಿಹೊಳಿ, ಮಹೇಶ ಶಿಗ್ಗಿಹಳ್ಳಿ, ವಾಸು ಬಸನಾಯ್ಕ, ಸಂತೋಷ ತೆಲಿಮನಿ, ಹೊಳೆಪ್ಪಾ ಸುಲಧಾಳ, ಪ್ರಕಾಶ ಲಮಾಣಿ ಮತ್ತಿತರರು ಭಾಗವಹಿಸಿದ್ದರು.

ಗ್ರಾಹಕರಿಗೆ ಸಿಹಿ ಸುದ್ದಿ; ವಾಣಿಜ್ಯ ಸಿಲಿಂಡರ್ ದರ ಮತ್ತಷ್ಟು ಇಳಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button