ಸ್ವಾಮಿನಾಥನ್ ವರದಿ ಜಾರಿ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ಸರಕಾರ ದೇಶದ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದು, ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು, ಕೆಪಿಆರ್ ಎಸ್ ಎಐಎಡಬ್ಯೂಯು ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ಲೇಬರ್ ಕೋಡ್ ರದ್ದು ಮಾಡಬೇಕು ಮತ್ತು ಖಾಸಗೀಕರಣದ ನೀತಿಯನ್ನು ನಿಲ್ಲಿಸಿ ಯಥಾ ಪ್ರಕಾರ ಮುಂದುವರೆಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಕೇಂದ್ರ ಸರಕಾರ ದೇಶದ ಕಾರ್ಪೋರೇಟ್ ಕಂಪನಿಗಳ ಪರವಾಗಿ ನಿಂತು ಭಾರತದಲ್ಲಿ ದುಡಿಯುವ ಜನರಿಗೆ ಕನಿಷ್ಠ ವೇತನ ನಿಗದಿ ಪಡಿಸದೆ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡದೆ ರೈತ ಕಾರ್ಮಿಕರನ್ನು ಅಧೋಗತಿಗೆ ತೆಗೆದುಕೊಂಡು ಹೋಗುತ್ತಿರುವುದು ಖಂಡನೀಯ.
ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುತ್ತಿರುವ ಕೇಂದ್ರ ಸರಕಾರ ದೇಶದ ಅಧಃಪತನಕ್ಕೆ ಕಾರಣವಾಗುತ್ತಿದೆ. ಜನತೆಯ ಬದುಕು ದುಸ್ತರವಾಗುತ್ತಿರುವ ಸಂದರ್ಭದಲ್ಲಿ ಜನರ ದಿಕ್ಕನ್ನು ಬದಲಾಯಿಸುವ ನಿಟ್ಟಿನಲ್ಲಿ ಕೋಮುವಾದಿ ಶಕ್ತಿಗಳು ಧರ್ಮದ ಆಧಾರದಲ್ಲಿ ಜನರ ಏಕತೆಯನ್ನು ಒಡೆಯುವ ಮೂಲಕ ದೇಶಕ್ಕೆ ಧಕ್ಕೆ ಉಂಟು ಮಾಡುವ ಹುನ್ನಾರ ನಡೆಸುತ್ತಿದ್ದರೂ ಕೇಂದ್ರ ಸರಕಾರ ಮೌನ ವಹಿಸಿದ್ದು ಸರಿಯಲ್ಲ ಎಂದು ದೂರಿದ್ದಾರೆ.
ಸಿಐಟಿಯು ಗೌರವಾಧ್ಯಕ್ಷ ಸಿ.ಎ.ಖರಾಡೆ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಜಿ.ಎಂ.ಜೈನೆಖಾನ, ಎಲ್.ಎಸ್.ನಾಯಕ, ದಿಲೀಪ್ ವಾರ್ಕೆ, ದೊಡ್ಡವ್ವಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ