![](https://pragativahini.com/wp-content/uploads/2019/11/Nekar2.jpg)
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಕಳೆದ ಅಗಷ್ಟ ತಿಂಗಳಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ಹಾನಿಗೊಳಗಾದ ವಿದ್ಯುತ್ ಮಗ್ಗಗಳಿಗೆ ತಲಾ 25 ಸಾವಿರ ರೂ.ಪರಿಹಾರ ನೀಡಲು ಮುಖ್ಯಮಂತ್ರಿಗಳು ಕೈಕೊಂಡ ನಿರ್ಧಾರ ಮತ್ತು ಆದೇಶಕ್ಕೆ ತಿದ್ದುಪಡಿ ಆದೇಶ ಹೊರಡಿಸಿ ತಲಾ ಕುಟುಂಬಕ್ಕೆ 25 ಸಾವಿರ ರೂ.ಪರಿಹಾರ ಕೊಡಲು ತಿದ್ದುಪಡಿ ಆದೇಶ ಹೊರಡಿಸಿದ ಕಂದಾಯ ಇಲಾಖೆಯ ವಿರುದ್ಧ ಇಂದು ಬೆಳಗಾವಿಯಲ್ಲಿ ನೇಕಾರರ ಪ್ರತಿಭಟನೆ ನಡೆಯಿತು.
![](https://pragati.taskdun.com/wp-content/uploads/2019/11/Nekar1-350x188.jpg)
ಅಕ್ಟೋಬರ್ 3 ರಂದು ಬೆಳಗಾವಿಗೆ ಬಂದು ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಹಾನಿಗೊಳಗಾದ ಪ್ರತಿ ಮಗ್ಗಕ್ಕೆ 25 ಸಾವಿರ ರೂ.ಪರಿಹಾರ ನೀಡಲು ತೀರ್ಮಾನ ಕೈಕೊಂಡಿದ್ದರು. ಅದೇ ಪ್ರಕಾರ ಅಕ್ಟೋಬರ್ 18 ರಂದು ಅಧಿಕೃತ ಆದೇಶವನ್ನೂ ಸರಕಾರ ಹೊರಡಿಸಿತ್ತು. ಆದರೆ ಅಕ್ಟೋಬರ 24 ರಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿದ್ದುಪಡಿ ಆದೇಶ ಹೊರಡಿಸಿ ಪ್ರತಿ ಕುಟುಂಬಕ್ಕೆ 25 ಸಾವಿರ ರೂ.ಕೊಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದರು.
ಸಾವಿರಾರು ನೇಕಾರರು ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರಲ್ಲದೇ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಸಭೆ ನಡೆಸಿದರು. ಅಲ್ಲಿ ಸ್ವಾಮೀಜಿದ್ವಯರು ಅಪರ್ ಜಿಲ್ಲಾಧಿಕಾರಿ ಶ್ರೀ ಅಶೋಕ ದುಡಗುಂಟಿ ಅವರಿಗೆ ಮನವಿ ಅರ್ಪಿಸಿದರು.
ನೇಕಾರರ ಸಾಲಮನ್ನಾ ಕೇವಲ ಸಹಕಾರಿ ಸಂಘಗಳಿಗೆ ಸೀಮಿತವಾಗದೇ ರಾಷ್ಟ್ರೀಕೃತ ಬ್ಯಾಂಕುಗಳಿಗೂ ವಿಸ್ತರಿಸಬೇಕು.
ಸಾಲ ಮನ್ನಾ ಅವಧಿಯಲ್ಲಿ ಮತ್ತೊಂದು ವರ್ಷಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆಗಳನ್ನು ಸಹ ಮನವಿಯಲ್ಲಿ ಸೇರಿಸಲಾಗಿದೆ.
ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇದು ಮೊದಲ ಹಂತದ ಹೋರಾಟವಾಗಿದ್ದು ಮುಂದಿನ ಹಂತದಲ್ಲಿ ಇದನ್ನು ತೀವ್ರಗೊಳಿಸುವುದಾಗಿ ಹೋರಾಟಗಾರರ ಮುಖಂಡರು ಎಚ್ಚರಿಕೆ ನೀಡಿದರು.
ವಿದ್ಯುತ್ ಮಗ್ಗಗಳಿಗೆ ಪರಿಹಾರ ಕೊಡುವಲ್ಲಿ ಆಗಿರುವ ಅನ್ಯಾಯದ ವಿರುದ್ಧ ನಡೆದ ಹೋರಾಟಕ್ಕೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಬೆಂಬಲ ನೀಡಿದೆ. ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ , ಸಾಗರ್ ಬೋರಗಲ್ಲ ಮುಂತಾದವರು ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಉಪಚುನಾವಣೆಯ ಪ್ರಚಾರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿಗಳನ್ನು ಭೆಟ್ಟಿಯಾಗಲೂ ಸಹ ಇಂದು ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ