ಕಾಂಗ್ರೆಸ್ ಸರ್ಕಾರದ ವಿರುದ್ಧ ಜೂ.೨೧ರಂದು ಪ್ರತಿಭಟನಾ ರ‍್ಯಾಲಿ – ಶಾಸಕಿ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯಿಂದ ರಾಜ್ಯವ್ಯಾಪಿ ಶುಕ್ರವಾರ (ಜೂ.೨೧ರಂದು) ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಅಂದು ಬೆಳಿಗ್ಗೆ ೯.೩೦ಕ್ಕೆ ನಗರದ ಸಂಭಾಜಿ ವೃತ್ತದಿಂದ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗುವುದು ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಸ್ಥಳೀಯ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಸುಮಾರು ಒಂದು ವರ್ಷ ಕಳೆದರೂ ಅಭಿವೃದ್ಧಿ ಪಡಿಸಲು ಇನ್ನೂವರೆಗೆ ಯಾವೊಬ್ಬ ಶಾಸಕರಿಗೆ ಅನುದಾನ ಬಂದಿಲ್ಲ. ಇದರಿಂದ ಕೆಲಸಗಳಾಗುತ್ತಿಲ್ಲ, ಅಭಿವೃದ್ಧಿಯಾಗುತ್ತಿಲ್ಲ, ಹೊರತಾಗಿ ರಾಜ್ಯದ ಜನತೆ ಮೇಲೆ ರಾಜ್ಯ ಸರ್ಕಾರವು ಹೆಚ್ಚುವರಿ ಶುಲ್ಕದ ಭಾರ ಹಾಕುತ್ತಿದೆ. ಈಚೆಗೆ ಹೊರಬಿದ್ದ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಪೆಟ್ರೋಲ್ ಮತ್ತು ಡೀಜೆಲ್ ದರ ಲೀಟರ್‌ಗೆ ರೂ.೩ ಮತ್ತು ರೂ.೩.೫೦ ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರವು ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ರೂ.೧೮೭ ಕೋಟಿಗಳ ಭ್ರಷ್ಟಾಚಾರ ಮಾಡಿದೆ. ನಿಗಮದ ಯೋಜನೆಗಳು ಪಂಗಡದ ಅರ್ಹ ಫಲಾನುಭವಿಗಳಿಗೆ ತಲುಪಲಿಲ್ಲ. ಈ ಕುರಿತು ರಾಜ್ಯದಲ್ಲಿ ಬಿಜೆಪಿ ಪಕ್ಷವು ಪ್ರತಿಭಟನೆ ನಡೆಸಿದ ನಂತರ ಸಚಿವರು ರಾಜಿನಾಮೆ ನೀಡಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳು ಸುವ್ಯವಸ್ಥಿತವಾಗಿ ಅನುಷ್ಠಾನಗೊಳಿಸುತ್ತಿದ್ದಲ್ಲಿ ನಾನು ಸ್ವಾಗತಿಸುತ್ತಿದ್ದೆ. ಆದರೆ ಅವುಗಳನ್ನು ಜಾರಿಗೊಳಿಸಲು ಕಾಂಗ್ರೆಸ್ ಸರ್ಕಾರ ಸ್ಟ್ಯಾಂಪ್ ಡ್ಯೂಟಿ, ವಿದ್ಯುತ್ ಬಿಲ್ ಹೆಚ್ಚಿಸಲಾಗಿದೆ. ರೈತರ ಪಂಪ್‌ಸೆಟ್‌ಗಳಿಗೆ ತಗಲುವ ವೆಚ್ಚವನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳ ಸಿಇಟಿ ಪ್ರವೇಶ ಶುಲ್ಕ ಹೆಚ್ಚಿಸಲಾಗಿದೆ. ಇಂತಹ ಹೊರೆಗಳನ್ನು ಕಾಂಗ್ರೆಸ್ ಸರ್ಕಾರವು ಜನಸಾಮಾನ್ಯರ ಮೇಲೆ ಹೇರಿದೆ ಎಂದರು.
ಸಂಭಾಜಿ ವೃತ್ತದಿಂದ ಆರಂಭಗೊಳ್ಳಲಿರುವ ಪ್ರತಿಭಟನಾ ರ‍್ಯಾಲಿಯು ಕಿತ್ತೂರ ರಾಣಿ ಚನ್ನಮ್ಮ ವೃತ್ತ, ಕೋಠಿವಾಲೆ ವೃತ್ತ, ನೆಹರು ಚೌಕ್, ಛತ್ರಪತಿ ಶಿವಾಜಿ ಮಹಾರಾಜ ಚೌಕ್, ಬೆಳಗಾವಿ ನಾಕಾ ಮೂಲಕ ಹಾಯ್ದು ತಹಶೀಲ್ದಾರ ಕಛೇರಿಗೆ ತೆರಳಿ ಕೊನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸೂರಜ ಖವರೆ, ಸಿದ್ಧು ನರಾಟೆ, ರಾಜೇಂದ್ರ ಗುಂದೇಶಾ, ಜಯವಂತ ಭಾಟಲೆ, ಕಾವೇರಿ ಮಿರ್ಜೆ, ಪ್ರಣವ ಮಾನವಿ, ಮೊದಲಾದವರು ಸೇರಿದಂತೆ ನಗರಸಭೆ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ