ಎಸ್ಪಿ ಫೋನ್- ಇನ್ ಕಾರ್ಯಕ್ರಮದಲ್ಲಿ ಅಹವಾಲಾಗಿ ಹರಿದುಬಂದ ಸಾರ್ವಜನಿಕ ಸಮಸ್ಯೆಗಳು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ನೇತೃತ್ವದ ತಂಡ ಶನಿವಾರ ನಡೆಸಿದ 14ನೇ ಫೋನ್- ಇನ್ ಕಾರ್ಯಕ್ರಮದಲ್ಲಿ ಒಟ್ಟು 64 ಕರೆಗಳ ಮೂಲಕ ಜನರ ಸಮಸ್ಯೆಗಳು ಅಹವಾಲಾಗಿ ಹರಿದು ಬಂದವು.
ನಗರ, ಜಿಲ್ಲೆ ಹಾಗೂ ಹೊರ ಜಿಲ್ಲೆಯಿಂದಲೂ ಜನ ಕರೆ ಮಾಡಿ ಸಮಸ್ಯೆ ಹೇಳಿಕೊಂಡಿದ್ದು ಈ ಬಾರಿಯ ವಿಶೇಷವಾಗಿತ್ತು.
ಸಾರ್ವಜನಿಕರ ಕರೆ ಸ್ವೀಕರಿಸಿದ ಎಸ್ಪಿ “ನಮಸ್ಕಾರ್ರೀ.. ನಾನ ಎಸ್ಪಿ ಮಾತಾಡೋದು ಏನ್ ಸಮಸ್ಯೆ ಇದೆ ನಿಮ್ದು..?” ಎನ್ನುತ್ತ ಸಾರ್ವಜನಿಕರ ಸಮಸ್ಯೆ ಆಲಿಸಿ ಸ್ಪಂದಿಸಿದರು.
ಕಾಗವಾಡ ಮೂಳೆ ಗ್ರಾಮದ ವ್ಯಕ್ತಿಯೊಬ್ಬರು ಕರೆ ಮಾಡಿ, ಗಂಗಾ ಕಲ್ಯಾಣ ಯೋಜನೆಯಲ್ಲಿ ಮಂಜೂರಾದ ಬೋರ್ ವೆಲ್ ನ 300 ಮೀಟರ್ ಕೇಬಲ್ ಕಳ್ಳತನ ಮಾಡಿದ್ದಾರೆ. ಸಂಬಂಧಿಸಿದ ಪೊಲೀಸರಿಗೆ ತಿಳಿಸಿದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಸಂಬಂಧಿಸಿದ ಪೊಲೀಸ್ ಠಾಣೆಗೆ ತಿಳಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಯಬಾಗ ತಾಲೂಕಿನ ಸುತ್ತಟ್ಟಿ ಗ್ರಾಮದ ವ್ಯಕ್ತಿಯೊಬ್ಬರು, ಗ್ರಾಮದ ಸರಕಾರಿ ಶಾಲೆಯಲ್ಲಿ ಸುಮಾರು 150 ರಿಂದ 200 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಫಿಲ್ಟರ್ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಎಸ್ಪಿ ಸಂಜೀವ ಪಾಟೀಲ ಜಿಪಂ ಸಿಇಒ ಗೆ ಪತ್ರ ಬರೆದು ನೀರಿನ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು.
ಟಿಳಕವಾಡಿ ಹಿರಿಯ ನಾಗರಿಕರೊಬ್ಬರು ಕರೆ ಮಾಡಿ ಟಿಳಕವಾಡಿಯ ಎರಡನೇ ರೈಲ್ವೆ ಗೇಟ್ ಬಳಿ ಬ್ಯಾರಿಕೇಡ್ ಅಳವಡಿಸಲಾಗಿದ್ದು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿರುವ ಬಗ್ಗೆ ಗಮನ ಸೆಳೆದರು. ಹಲವಾರು ಬಾರಿ ನಗರ ಪೊಲೀಸ್ ಆಯುಕ್ತರು, ಜಿಲ್ಲಾಡಳಿತ, ಪಾಲಿಕೆಗೆ ಮನವಿ ನೀಡಿದರೂ ಅದನ್ನು ತೆರವು ಮಾಡಿಲ್ಲ ಎಂದು ದೂರಿದರು. ಇದು ನಗರ ಪೊಲೀಸ್ ಇಲಾಖೆ ವ್ಯಾಪ್ತಿಯದಾಗಿದ್ದು, ಆಯುಕ್ತರಿಗೆ ತಿಳಿಸಲಾಗುವುದು ಎಂದು ಎಸ್ಪಿ ತಿಳಿಸಿದರು.
ಚಿಕ್ಕೋಡಿ, ಗೋಕಾಕ , ಸವದತ್ತಿ, ಬೈಲಹೊಂಗಲ ತಾಲೂಕಿನಲ್ಲಿ ಬಹಿರಂಗವಾಗಿ ಅಕ್ರಮ ಮದ್ಯ ಮಾರಾಟದ ದೂರು ಪ್ರಮುಖವಾಗಿ ಕೇಳಿಬಂತು. ಇಬ್ಬರು ಸಹೋದರರು ಹಾಗೂ ಮಹಿಳೆ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಇದನ್ನು ನಿಲ್ಲಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿ ಬಂದ್ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಸಂಚಾರ ಸಮಸ್ಯೆ, ಕೌಟುಂಬಿಕ ಕಲಹ, ಕುಡಿಯುವ ನೀರಿನ ಸಮಸ್ಯೆ, ಶಾಲಾ ರಸ್ತೆ ಇತ್ಯಾದಿಗಳ ಬಗ್ಗೆ ಹಲವರು ಫೋನ್ ಕರೆ ಮೂಲಕ ದೂರಿದರು. ಎಲ್ಲ ಕರೆಗಳಿಗೂ ಸ್ಪಂದಿಸಿದ ಎಸ್ಪಿ ಸಂಜೀವ ಪಾಟೀಲ ಪರಿಹಾರ ಕ್ರಮ ಸೂಚಿಸಿ ಕೆಲವು ಸಮಸ್ಯೆಗಳಿಗೆ ಸಲಹೆಗಳನ್ನು ನೀಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ, ಡಿಎಸ್ಪಿ ವೀರೇಶ ದೊಡಮನಿ, ನಿರೀಕ್ಷಕರಾದ ಬಿ.ಆರ್.ಗಡ್ಡೇಕರ, ಮಹಾದೇವ ಎಸ್.ಎಂ. ಬಾಳಪ್ಪ ತಳವಾರ, ವಿಠ್ಠಲ ಮಾದರ, ಶರಣಬಸಪ್ಪ ಅಂಜೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ