ಹೆಚ್ಚು ಅಂಕ ಗಳಿಸಿದ ಲಿಂಗರಾಜ ಕಾಲೇಜು ವಿದ್ಯಾರ್ಥಿಗಳಿಗೆ ಸತ್ಕಾರ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಪ್ರತಿಭೆ ಯಾರ ಸೊತ್ತು ಅಲ್ಲ. ಪರಿಶ್ರಮ ಹಾಗೂ ಶ್ರದ್ಧೆಯಿಂದ ಅಗಾಧವಾದುದನ್ನು ಸಾಧಿಸಲು ಸಾಧ್ಯವೆಂದು ಬೆಳಗಾವಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪ್ರೊ.ಎಸ್.ಎಸ್.ಹಿರೇಮಠ ನುಡಿದರು. ಅವರು ಲಿಂಗರಾಜ ಪದವಿಪೂರ್ವ ಕಾಲೇಜಿನಲ್ಲಿ 2018-19ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸತ್ಕರಿಸಿ ಮಾತನಾಡಿದರು.
ನಮ್ಮ ಬದುಕಿನಲ್ಲಿ ಗುರಿ ಇರಬೇಕು, ಆ ಗುರಿಯನ್ನು ಮುಟ್ಟುವಲ್ಲಿ ದಿಟ್ಟವಾದ ಹೆಜ್ಜೆಗಳನ್ನು ಇಡಬೇಕು. ಸಾಧನೆಯ ಶಿಖರವನ್ನು ತಲುಪಲು ಎಲ್ಲರಿಗೂ ಸಾಧ್ಯ. ಅದನ್ನು ಸವಾಲನ್ನಾಗಿ ಸ್ವೀಕರಿಸಬೇಕು. ಬದುಕಿನಲ್ಲಿ ಅಂಕಗಳೇ ಮುಖ್ಯವಲ್ಲ, ವಿದ್ಯಾರ್ಥಿಗಳು ಹಾಗೂ ಪಾಲಕರು ಅಂಕಗಳ ಭ್ರಮೆಯಿಂದ ಹೊರಬರಬೇಕು ಎಂದರು.
ಉತ್ತಮವಾದುದನ್ನು ಆಲೋಚಿಸುವ ಹಾಗೂ ಜೀವನವನ್ನು ಪ್ರೀತಿಸುವ ಮನೋಭಾವವನ್ನು ಪಡೆಯುವುದು ಮುಖ್ಯ. ನಾವು ಬೆಳೆಯಬೇಕು ಹಾಗೂ ಇತರರನ್ನು ಬದುಕಿಸಬೇಕು. ನಮ್ಮ ಬದುಕಿನ ಮೌಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಇದರೊಂದಿಗೆ ಇತರರ ಗುಣಗಳನ್ನು ಮೆಚ್ಚುವ ಸ್ವಭಾವಗಳನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು..
ನಾವು ನಡೆದುಬಂದ ದಾರಿಗಿಂತ ಮುಂದೆ ನಡೆಯಬೇಕಾದ ದಾರಿ ಬಹಳಷ್ಟಿದೆ, ಅದರೆಡೆಗೆ ವಿವೇಚಿಸಬೇಕು. ಪಿಯುಸಿ ದ್ವಿತೀಯ ವರ್ಷದಲ್ಲಿ ಉತ್ತಮವಾದ ಅಂಕಗಳನ್ನು ಪಡೆದು ನಿಮ್ಮ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಹೆಸರು ತಂದುಕೊಟ್ಟಿದ್ದೀರಿ, ಮುಂದಿನ ಜೀವನದಲ್ಲಿಯೂ ನೀವು ಉತ್ತಮವಾದುದನ್ನೇ ಆಯ್ಕೆಮಾಡಿಕೊಂಡು ಶ್ರೇಷ್ಠ ಭಾರತದ ಪ್ರಜೆಗಳೆನಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆನೀಡಿ, ರ‍್ಯಾಂಕ್ ವಿದ್ಯಾರ್ಥಿಗಳನ್ನು ಅಭಿನಂದಿಸಿದದರು.
ಮುಂದುವರೆದು ಮಾತನಾಡಿದ ಅವರು ಕೆಎಲ್‌ಇ ಸಂಸ್ಥೆಯು ಶಿಕ್ಷಣ ಕ್ಷೇತ್ರಕ್ಕೆ ಬಹುಮೌಲಿಕವಾದ ಕೊಡುಗೆಯನ್ನು ನೀಡಿದೆ. ಈ ಭಾಗದಲ್ಲಿ ಶೈಕ್ಷಣಿಕವಾದ ಹಸಿವು ನೀಗಿಸಿದೆ. ಕೇವಲ ಕಟ್ಟಡಗಳನ್ನು ಕಟ್ಟಿಲ್ಲ, ಅದರೊಂದಿಗೆ ಗುಣಾತ್ಮಕವಾದ ಶಿಕ್ಷಣವನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದೆ ಎಂದು ಹೇಳಿದರು.
ಪದವಿಪೂರ್ವ ಪ್ರಾಚಾರ್ಯೆ ಗಿರಿಜಾ ಹಿರೇಮಠ ಅವರು ಮಾತನಾಡುತ್ತ ಲಿಂಗರಾಜ ಪದವಿಪೂರ್ವ ಕಾಲೇಜಿನ ಫಲಿತಾಂಶ ಅತ್ಯುತ್ತಮವಾಗಿದ್ದು, ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ವರ್ಷ ಕಲಾ ವಿಭಾಗದಲ್ಲಿ 92.17 % ಹಾಗೂ ವಾಣಿಜ್ಯ ವಿಭಾಗದಲ್ಲಿ 92.43% ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಯಲ್ಲಿ ಅತ್ಯುತ್ತಮ ರ‍್ಯಾಂಕ ಪಡೆದಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಪದವಿ ವಿಭಾಗದ ಪ್ರಾಚಾರ್ಯರಾದ ಡಾ.ಆರ್.ಎಂ.ಪಾಟೀಲ ಅವರು ವಹಿಸಿದ್ದರು. ಕೆಎಲ್‌ಇ ಸಂಸ್ಥೆಯು ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಎಲ್ಲ ರೀತಿಯ ಸೌರ‍್ಯಗಳನ್ನು ನೀಡಿದೆ. ಕಾಲೇಜು ನೀಡಿರುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು, ಕಾಲೇಜಿಗೆ ಹಾಗೂ ತಂದೆತಾಯಿಗಳ ಕೀರ್ತಿಯನ್ನು ಹೆಚ್ಚಿಸಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರ‍್ಯಾಂಕ್ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಕು.ನಿಧಿ ಪ್ರಾರ್ಥಿಸಿದಳು. ಪ್ರೊ.ಶ್ರದ್ಧಾ ಪಾಟೀಲ ಸ್ವಾಗತಿಸಿದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ