ಪ್ರಗತಿವಾಹಿನಿ ಸುದ್ದಿ; ಪಟಿಯಾಲ: ಕೊರೊನಾ ಭೀತಿ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಆದಾಗ್ಯೂ ಜನರು ರಸ್ತೆಗಿಳಿಯುತ್ತ ಬೇಜವಾಬ್ದಾರಿ ಮುಂದುವರೆಸಿದ್ದಾರೆ. ಈ ನಡುವೆ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಪಾಸ್ ಇಲ್ಲದೆ ರಸ್ತೆಯಲ್ಲಿ ಬೇಕಾಬಿಟ್ಟಿ ಜಾಲಿ ರೈಡ್ ಮಾಡುತ್ತಿದ್ದ ಯುವಕರ ವಾಹನವನ್ನು ತಡೆದ ಪಂಜಾಬ್ ಎ ಎಸ್ ಐ ಕೈಯನ್ನೇ ತಲ್ವಾರ್ ನಿಂದ ಕತ್ತರಿಸಿ ಯುವಕರ ಗುಂಪು ಪರಾರಿಯಾಗಿದೆ.
ನಿಹಾಂಗ್ ಸಿಂಗ್ ಯುವಕರ ಗುಂಪಿನಿಂದ ತೀವ್ರವಾಗಿ ಹಲ್ಲೆಗೊಳಗಾದ ಪಂಜಾಬ್ ಪೊಲೀಸ್ ಅಧಿಕಾರಿ ಹರ್ಜಿತ್ ಸಿಂಗ್ ಕೈ ಎರಡು ತುಂಡಾಗಿತ್ತು. ಇಂದು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಕೈಯನ್ನು ಮರುಜೋಡಣೆ ಮಾಡಲಾಗಿದೆ.
ಭಾನುವಾರ ಬೆಳಗ್ಗೆ 6:15ಕ್ಕೆ ಪಟಿಯಾಲದ ಮಂಡಿ ಬೋರ್ಡ್ ಬಳಿ ನಿಹಾಂಗ್ ಸಿಖ್ ಯುವಕರು ಕಾರಿನಲ್ಲಿ ಹೋಗುತ್ತಿದ್ದರು. ಆಗ ಕಾರನ್ನು ಅಡ್ಡಹಾಕಿದ ಪೊಲೀಸರು ಲಾಕ್ ಡೌನ್ ಇದ್ದರೂ ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಯುವಕರು ಉತ್ತರಿಸಿಲ್ಲ. ಈ ವೇಳೆ ಪೊಲೀಸ್ ಅಧಿಕಾರಿ ಹರ್ಜಿತ್ ಸಿಂಗ್ ಪಾಸ್ ತೋರಿಸುವಂತೆ ಕೇಳಿದ್ದಾರೆ. ಇದರಿಂದ ಕೋಪಗೊಂಡ ಯುವಕರು ಚೆಕ್ಪೋಸ್ಟ್ಗೆ ಕಾರನ್ನು ನುಗ್ಗಿಸಿ, ಹರ್ಜಿತ್ ಸಿಂಗ್ ಅವರ ಮುಂಗೈಯನ್ನು ದುರುಳರು ತಲ್ವಾರ್‌ನಿಂದ ಕತ್ತರಿಸಿ ಹಾಕಿದ್ದರು. ಇನ್ನಿಬ್ಬರು ಅಧಿಕಾರಿಗಳ ಮೇಲೂ ಭೀಕರವಾಗಿ ದಾಳಿ ಮಾಡಿ ಪಾರಾರಿಯಾಗಿದ್ದರು.
ತಕ್ಷಣ ಗಾಯಾಳು ಪೊಲೀಸ್ ಅಧಿಕಾರಿಗಳನ್ನು ಸಮೀಪದ ರಾಜೀಂದ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಅದರಂತೆ ಸತತ ಏಳು ಗಂಟೆಗಳ ಸರ್ಜರಿ ಬಳಿಕ ಎಎಸ್‌ಐ ಹರ್ಜಿತ್ ಸಿಂಗ್ ಅವರ ಮುಂಗೈಯನ್ನು ಯಶಸ್ವಿಯಾಗಿ ಮರಳಿ ಜೋಡಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್, ನಮ್ಮ ಧೀರ ಪೊಲೀಸ್ ಅಧಿಕಾರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿರುವ ವೈದ್ಯ ಸಿಬ್ಬಂದಿಗೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ