Latest

ಜೀವನದ ಪಯಣ ಮುಗಿಸಿದ ಪವರ್ ಸ್ಟಾರ್; ಮುಗಿಲುಮುಟ್ಟಿದ ಅಭಿಮಾನಿಗಳ ಆಕ್ರಂದನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀವ್ರ ಹೃದಯಾಘಾತಕ್ಕೊಳಗಾಗಿ ವಿಧಿವಶರಾಗಿದ್ದಾರೆ. ಕೇವಲ 46ನೇ ವಯಸ್ಸಿಗೆ ತಮ್ಮ ಜೀವನದ ಪಯಣವನ್ನು ಮುಗಿಸಿದ್ದು, ಇಡೀ ಕನ್ನಡ ಚಿತ್ರರಂಗ, ಕೋಟ್ಯಂತರ ಅಭಿಮಾನಿಗಳಿಗೆ ಬರಸಿಡಿಲುಬಡಿದಂತಾಗಿದೆ.

ಹೃದಯಾಘಾತಕ್ಕೊಳಗಾಗಿದ್ದ ಪುನೀತ್ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಪುನೀತ್ ರಾಜ್ ಕುಮಾರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ವಿಕ್ರಂ ಆಸ್ಪತ್ರೆಯತ್ತ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜಕೀಯ ಗಣ್ಯರು ಹಾಗೂ ಚಿತ್ರರಂಗದ ಗಣ್ಯರು ಧಾವಿಸುವಷ್ಟರಲ್ಲಿ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಇನ್ನಿಲ್ಲ ಎಂಬ ಸುದ್ದಿ ಕೇಳಿಬಂದಿದೆ. ಕನ್ನಡ ಚಿತ್ರರಂಗ, ಕೋಟ್ಯಂತರ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ.

ವಿಕ್ರಂ ಆಸ್ಪತ್ರೆಗೆ ಚಾಲೇಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ನಟರಾದ ಗಣೇಶ್, ದ್ರುವ ಸರ್ಜಾ, ರವಿಚಂದ್ರನ್, ನೀನಾಸಂ ಸತೀಶ್, ಯೋಗರಾಜ್ ಭಟ್, ನಟಿಯರಾದ ಸುಧಾರಾಣಿ, ಶೃತಿ, ಜಯಮಾಲಾ, ಅನುಪ್ರಭಾಕರ್ ಸೇರಿದಂತೆ ಹಲವು ನಟ-ನಟಿಯರು ಭೇಟಿ ನೀಡಿದ್ದಾರೆ. ಇನ್ನೊಂದೆಡೆ ಪವರ್ ಸ್ಟಾರ್ ಅಭಿಮಾನಿಗಳು ಸಾಗರೋಪಾದಿಯಲ್ಲಿ ಆಸ್ಪತ್ರೆಯತ್ತ ಆಗಮಿಸಿದ್ದು, ಯುವರತ್ನನನ್ನು ಕಳೆದುಕೊಂಡ ಚಿತ್ರರಂಗ ಕಣ್ಣೀರಕಡಲಲ್ಲಿ ಮುಳುಗಿದೆ.

ಪುನಿತ್ ರಾಜಕುಮಾರ ಇನ್ನು ನೆನಪು ಮಾತ್ರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button