*ಏಷ್ಯನ್ ಗೇಮ್ಸ್ ಪದಕ ವಿಜೇತ ಕರ್ನಾಟಕದ ಕ್ರೀಡಾಪಟುಗಳಿಗೆ ಸನ್ಮಾನ: ಕೆಒಎ ಅಧ್ಯಕ್ಷ ಡಾ.ಕೆ.ಗೋವಿಂದರಾಜ್*

ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ ಇದುವರೆಗೂ 6 ಪದಕ
ಪ್ರಗತಿವಾಹಿನಿ ಸುದ್ದಿ: ಜಪಾನ್ನಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ವಿಜೇತ ಕರ್ನಾಟಕದ ಕ್ರೀಡಾಪಟುಗಳನ್ನು ಶೀಘ್ರವೇ ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ವತಿಯಿಂದ ಸನ್ಮಾನಿಸಲಾಗುವುದು ಎಂದು ಫಿಬಾ ಏಷ್ಯಾ ಅಧ್ಯಕ್ಷರು, ಕೆಒಎ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ.ಕೆ.ಗೋವಿಂದರಾಜ್ ತಿಳಿಸಿದರು.
ಪದಕ ವಿಜೇತ ಕರ್ನಾಟಕದ ಅಥ್ಲೀಟ್ಗಳಾದ ಎಂ.ಆರ್.ಪೂವಮ್ಮ (2 ಪದಕ, ಮಹಿಳೆಯರ 4/400 ಮೀಟರ್ ರಿಲೇಯಲ್ಲಿ ಸ್ವರ್ಣ, 4/400 ಮಿಶ್ರ ರಿಲೇಯಲ್ಲಿ ಬೆಳ್ಳಿ), ಶ್ರೇಯಾಂಕ ಪಾಟೀಲ್ (ಕ್ರಿಕೆಟ್ನಲ್ಲಿ ಸ್ವರ್ಣ), ಸ್ನೇಹಾ ಎಸ್ (ಒಂದು ಕಂಚು, ಮಹಿಳೆಯರ 4/100 ಮೀಟರ್ ರಿಲೇ ವಿಭಾಗದಲ್ಲಿ ಕಂಚಿನ ಪದಕ), ಆಯುಷ್ ಶೆಟ್ಟಿ (ಕಂಚು, ಬ್ಯಾಡ್ಮಿಂಟನ್ ತಂಡದ ವಿಭಾಗ) ಹಾಗೂ ತಿಲೋತ್ತಮ ಸೇನ್ (ಬೆಳ್ಳಿ, ರೈಫಲ್ ಶೂಟಿಂಗ್) ಏಷ್ಯನ್ ಗೇಮ್ಸ್ನಲ್ಲಿ ಪದಕ ಜಯಿಸುವ ಮೂಲಕ ರಾಜ್ಯದ ಕ್ರೀಡಾ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದು ಡಾ.ಕೆ.ಗೋವಿಂದರಾಜ್ ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಕರ್ನಾಟಕದಿಂದ 23 ಕ್ರೀಡಾಪಟುಗಳು ಏಷ್ಯಾಡ್ನಲ್ಲಿ ಭಾರತ ಪ್ರತಿನಿಧಿಸುತ್ತಿದ್ದು, ಇದುವರೆಗೂ ಎರಡು ಚಿನ್ನ ಸೇರಿದಂತೆ 6 ಪದಕಗಳನ್ನು ರಾಜ್ಯದ ಕ್ರೀಡಾಪಟುಗಳು ಜಯಿಸಿದ್ದಾರೆ. ಇದು ಇಡೀ ದೇಶ ಹಾಗೂ ರಾಜ್ಯ ಹೆಮ್ಮೆಪಡುವ ವಿಷಯ ಎಂದು ಕೆಒಎ ಅಧ್ಯಕ್ಷರಾದ ಡಾ.ಕೆ.ಗೋವಿಂದರಾಜ್ ತಿಳಿಸಿದ್ದಾರೆ.
ಬಿ.ಸಿ.ರಮೇಶ್, ಮಮತಾ, ಕುಟ್ಟಪ್ಪಗೆ ಅಭಿನಂದನೆ
ಏಷ್ಯಾಡ್ನಲ್ಲಿ ಸ್ವರ್ಣ ಪದಕ ಜಯಿಸಿದ ಭಾರತ ಪುರುಷರ ತಂಡದ ಸಹಾಯಕ ಕೋಚ್ ಆಗಿದ್ದ ಬಿ.ಸಿ.ರಮೇಶ್, ಮಹಿಳಾ ತಂಡದ ಸಹಾಯಕ ಕೋಚ್ ಮಮತಾ ಪೂಜಾರಿ ಹಾಗೂ ಬಾಕ್ಸಿಂಗ್ ಕೋಚ್ ಕುಟ್ಟಪ್ಪ ಅವರನ್ನು ಡಾ.ಕೆ.ಗೋವಿಂದರಾಜ್ ಅಭಿನಂದಿಸಿದ್ದಾರೆ. ಪದಕ ವಿಜೇತ ಕ್ರೀಡಾಪಟುಗಳೊಂದಿಗೆ ಕೋಚ್ಗಳನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



