ಗುಣಮಟ್ಟದ ಚಿಂತನೆಯು ಗುಣಮಟ್ಟದ ಕಲಿಕೆಗೆ ಕಾರಣವಾಗುತ್ತದೆ – ಡಾ.ಯು.ಚಂದ್ರಶೇಖರ್
ಜಿ ಐ ಟಿ ಯಲ್ಲಿ ಜರುಗಿದ ಏಳನೇಯ ಪದವಿ ಪ್ರದಾನ ಸಮಾರಂಭ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ(ಜಿ.ಐ.ಟಿ)ದಲ್ಲಿ 7 ನೇ ಪದವಿ ಪ್ರದಾನ ಸಮಾರಂಭ ಜರುಗಿತು.
ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬೆಂಗಳೂರಿನ ಜಿಎಂ ಸೈಂಟಿಫಿಕ್ ಇನ್ನೋವೇಶನ್ ಮತ್ತು ರಿಸರ್ಚ್ ಸೆಂಟರ್‌ನ ಸಿಇಒ ಡಾ. ಯು. ಚಂದ್ರಶೇಖರ್ ಅವರು ತಮ್ಮ ಭಾಷಣದಲ್ಲಿ, ಕರ್ತ್ಯವ್ಯ ನಿಷ್ಠ ವ್ಯಕ್ತಿಗಳ ಕಾರ್ಯಸಾಧನೆಯಿಂದಲೇ ಇಂದು ಕರ್ನಾಟಕ ಲಾ ಸೊಸೈಟಿಯ ಅಡಿಯಲ್ಲಿ ಜಿಐಟಿ ಯಶಸ್ಸನ್ನು ಪಡೆಯಲು ಸಾಧ್ಯವಾಗಿದೆ ಎಂದು ಶ್ಲಾಘಿಸಿದರು. ಇಂಜಿನಿಯರಿಂಗ್ ನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಕೆಯಿಂದ ಕ್ಷಮತೆ ಹಾಗೂ ಬಳಕೆಯಲ್ಲಿ ಅತ್ತ್ಯುತ್ತಮ ಕಾರ್ಯವಿಧಾನಗಳು ಸಾಮಾನ್ಯರ ಬಳಕೆಗೆ ದೊರೆಯಲಿದ್ದು , ಮುಂಬರುವ ದಿನಗಳಲ್ಲಿ ಇಂಜಿನಿಯರಿಂಗ್ ಜ್ಞಾನ ಇನ್ನು ಹೆಚ್ಚಿನ ವೈಜ್ಞಾನಿಕ ಕೊಡುಗೆ ನೀಡಲಿದೆ ಎಂದು ತಿಳಿಸಿದರು. ಯುವ ಉದ್ಯಮಿಗಳನ್ನು ಉಲ್ಲೇಖಿಸುತ್ತ, ಸ್ಕೈರೂಟ್‌ನಂತಹ ಚಿಕ್ಕ ಉದ್ದಿಮೆಗಳಿಂದು ಉತ್ತಮ ಸಾಧನೆ ಮಾಡಿದ ಉದಾಹರಣೆ ನೀಡಿದರು. ಕೊನೆಯಲ್ಲಿ, ಉತ್ತಮ ಗುಣಮಟ್ಟದ ಚಿಂತನೆಯು ಉತ್ತಮ ಗುಣಮಟ್ಟದ ಕಲಿಕೆಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.
ಪುಣೆಯ ಸ್ಪಾರ್ಕ್‌ಲೈನ್ ಇಕ್ವಿಪ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಎಂಡಿ ಶೀತಲ್‌ಕುಮಾರ್ ಎ. ದೋಷಿ ಅವರು, ಪ್ರಗತಿ ಮತ್ತು ಸಾಧನೆಯ ನಡುವಿನ ಪರಸ್ಪರ ಸಂಬಂಧವನ್ನು ಒತ್ತಿ ಹೇಳಿದರು. ಪ್ರಾಮಾಣಿಕತೆ, ನೈತಿಕತೆ ಮತ್ತು ಸಾಧನೆಗೆ ನಮ್ಮ ಮನಸ್ಥಿತಿ ಮತ್ತು ಭೌದ್ದಿಕ ಶಕ್ತಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಉದ್ಯಮ ಸ್ಥಾಪನೆಗೆ ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು.
ಕೆಎಲ್‌ಎಸ್ ಛೇರ್ಮನ್ ಪ್ರದೀಪ ಸಾವಕಾರ ಅವರು ವಿದ್ಯಾರ್ಥಿಗಳಿಗೆ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡುವಂಥ ಕಾರ್ಯಸಾಧನೆ ಮಾಡಲು ಕರೆ ಕೊಟ್ಟರು ಮತ್ತು ಹೆಮ್ಮೆಯ ಪೋಷಕರನ್ನು ಅಭಿನಂದಿಸಿದರು.
ಅನಂತ್ ಮಂಡಗಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಒಬ್ಬರನ್ನೊಬ್ಬರು ಬೆಂಬಲಿಸಲು ಕರೆ ನೀಡಿದರು. ನಿಜ ಜೀವನದ ಸವಾಲುಗಳನ್ನು ಎದುರಿಸಲು ಜ್ಞಾನ, ಬದ್ಧತೆ ಮತ್ತು ಕಲಿಕೆಯ ಮಹತ್ವವನ್ನು ತಿಳಿಸಿದರು. ಪೋಷಕರು ಮತ್ತು ಶಿಕ್ಷಕರು ನಿರ್ವಹಿಸಿದ ಪ್ರಮುಖ ಪಾತ್ರವನ್ನು ಗುರುತಿಸಬೇಕೆಂದು ಮಂಡಗಿ ಒತ್ತಾಯಿಸಿದರು.
ಜಿಐಟಿಯ ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಪ್ರಾಚಾರ್ಯ ಡಾ.ಎಂ.ಎಸ್.ಪಾಟೀಲ ಕಾಲೇಜು ವರದಿ ಮಂಡಿಸಿದರು. ಅಕಾಡೆಮಿಕ್ ಕೌನ್ಸಿಲ್ ಮತ್ತು ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಕೆಎಲ್‌ಎಸ್ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು, ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ