Belagavi NewsBelgaum NewsPolitics

*ಸಿದ್ದರಾಮಯ್ಯ ಸರ್ಕಾರದಿಂದ 17 ತಿಂಗಳಲ್ಲಿ 17 ಅವಾಂತರ: ವಿಪಕ್ಷ ನಾಯಕ ಆರ್‌.ಅಶೋಕ್ ಆರೋಪ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ 17 ತಿಂಗಳಲ್ಲಿ 17 ಅವಾಂತರಗಳನ್ನು ಮಾಡಿಕೊಂಡಿದೆ. ಇಡೀ ಸರ್ಕಾರ ನಿದ್ದೆಗೆ ಜಾರಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಕಿಡಿಕಾರಿದರು.

ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ನೀಡಿದ್ದ ರೀತಿಯ ಆಡಳಿತ ಈ ಬಾರಿ ನೀಡುತ್ತಿಲ್ಲ. ಸಿಎಂ ಮುಡಾ ಕೇಸ್‌ನಲ್ಲಿ ನರಳುತ್ತಿದ್ದರೆ, ಸರ್ಕಾರ ನಿದ್ದೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯೊಂದರಲ್ಲೇ 325 ಮಕ್ಕಳು ಮೃತರಾಗಿದ್ದಾರೆ. ಯಾವ ಇಲಾಖೆಯ ಮೇಲೆಯೂ ಸಿಎಂಗೆ ಹಿಡಿತ ಇಲ್ಲ. ಬಾಣಂತಿಯರು, ಮಕ್ಕಳು ಸಾಯುತ್ತಿದ್ದರೂ ಸರ್ಕಾರ ನಿದ್ದೆಗೆ ಜಾರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ಸರ್ಕಾರ 17 ತಿಂಗಳಲ್ಲಿ 17 ಅವಾಂತರಗಳನ್ನು ಮಾಡಿಕೊಂಡಿದೆ. ಅಭಿವೃದ್ದಿ ಕಾರ್ಯ ಮರೆತಿರುವುದು, ವಕ್ಫ್‌ ಅವಾಂತರ, ಬಾಣಂತಿಯರ ಸಾವು, ಲಿಕ್ಕರ್ ಹಗರಣದ ಜೊತೆ ಈಗ ಮೆಡಿಕಲ್ ಮಾಫಿಯಾ ಸೇರಿಕೊಂಡಿದ್ದು ಎಲ್ಲ ವಿಚಾರಗಳನ್ನು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದರು.

Home add -Advt

ಸಿಎಂಗೆ ಇಲಾಖೆಯ ಮೇಲೆ ಹಿಡಿತ ಕೈ ತಪ್ಪಿದ ಕಾರಣದಿಂದ ಎಲ್ಲ ಇಲಾಖೆಗಳಲ್ಲಿ ಅನಾಹುತವಾಗುತ್ತಿದೆ. ಎಲ್ಲ ಸಚಿವರು ಹಣ ಮಾಡುವುದರಲ್ಲಿ ನಿರತರಾಗಿದ್ದಾರೆ. ಮಂತ್ರಿಗಳು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ಇದು ಗುರುವಾರದ ಸರ್ಕಾರವಾಗಿದೆ. ಹಣ ಮಾಡಲು ಮಾತ್ರ ಸಚಿವರು ಗುರುವಾರ ವಿಧಾನಸೌಧಕ್ಕೆ ಆಗಮಿಸುತ್ತಾರೆ. ಹೊಸದಾಗಿ ಬಂದಾಗ ಧರ್ಮ ದರ್ಶನ ಮಾಡುತ್ತೇವೆ, ಜನಸಂಪರ್ಕ ಮಾಡುತ್ತೇವೆ ಎಂದು ಹೇಳಿದ್ದ ಮಾತನ್ನು ಮರೆತು ಹಣ ಮಾಡುವುದರಲ್ಲಿ ಇಡೀ ಸರ್ಕಾರ ನಿರತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕಕ್ಕೆ ಏನು ಕೊಟ್ಟಿದ್ದೀರಾ?

ಉತ್ತರ ಕರ್ನಾಟಕ ಅಭಿವೃದ್ದಿಗೆ ಹಿಂದೆ ಹೇಳಿದ್ದೇನು? ಈಗ ಮಾಡುತ್ತಿರುವುದೇನು? ಈ ವಿಚಾರವನ್ನು ಸಹ ನಾವು ಪ್ರಸ್ತಾಪ ಮಾಡಲಿದ್ದೇವೆ. ಉತ್ತರ ಕರ್ನಾಟಕವನ್ನು ಚಿನ್ನದ ನಾಡು ಮಾಡುತ್ತೇವೆ ಎಂದು ಹೇಳಿದ್ದವರು ಎಲ್ಲಿ ಹೋದರು? ಎಂದು ಪ್ರಶ್ನೆ ಮಾಡಿದ ಅವರು, ಕರ್ನಾಟಕದ ಇತಿಹಾಸದಲ್ಲೇ ಈ ಸರ್ಕಾರ ಅತ್ಯಂತ ಕಳಪೆ ಎಂದು ಕಿಡಿಕಾರಿದರು.

Related Articles

Back to top button