ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕ್ಷಮೆ ಕೋರಲಿ, ರಾಹುಲ್ ಗಾಂಧಿ ತಲೆಬಾಗಿ ಕ್ಷಮೆ ಕೇಳಲಿ ಎಂದು ಆಗ್ರಹ
ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ಅಪಚಾರ ಮಾಡಿದ ಕಾಂಗ್ರೆಸ್ ಜನರ ಕ್ಷಮೆ ಕೇಳಬೇಕು. ರಾಹುಲ್ ಗಾಂಧಿ ರಾಮ್‌ಲೀಲಾ ಮೈದಾನದಲ್ಲಿ ತಲೆಬಾಗಿ ನಿಂತು ಜನರ ಕ್ಷಮೆ ಕೇಳಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಜೆಪಿಯಿಂದ ನಡೆದ, ತುರ್ತು ಪರಿಸ್ಥಿತಿ ಸಂಬಂಧ ರಾಹುಲ್ ಗಾಂಧಿ ಕ್ಷಮೆ ಕೋರಬೇಕೆಂಬ ಆಗ್ರಹದ ಪೋಸ್ಟರ್ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಮೂಲೆಗೆ ತಳ್ಳಿ ಸರ್ವಾಧಿಕಾರಿ ಧೋರಣೆ ತೋರಿದ ಕಾಂಗ್ರೆಸ್ ಪಕ್ಷ ಹಾಗೂ ಇಂದಿರಾಗಾಂಧಿ ರಾತ್ರೋರಾತ್ರಿ ತುರ್ತು ಪರಿಸ್ಥಿತಿ ಹೇರಿದ್ದರು. ನ್ಯಾಯಾಂಗ ವ್ಯವಸ್ಥೆಯನ್ನು ಕಪಿಮುಷ್ಟಿಗೆ ತೆಗೆದುಕೊಂಡು, ಪತ್ರಕರ್ತರನ್ನು ಜೈಲಿಗೆ ಹಾಕಿದ್ದರು. ಎಲ್.ಕೆ.ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಮೊದಲಾದ ಘಟಾನುಘಟಿ ನಾಯಕರನ್ನು ಜೈಲಿಗೆ ತಳ್ಳಿದ್ದರು ಎಂದರು.
ಆಗ ನಾನು ವಿವಿ ಪುರ ಕಾಲೇಜಿನಲ್ಲಿ ಮೊದಲ ಪಿಯುಸಿ ವಿದ್ಯಾರ್ಥಿಯಾಗಿದ್ದೆ. ಯಶವಂತಪುರ ಸರ್ಕಲ್‌ನಲ್ಲಿ ಆರ್‌ಎಸ್‌ಎಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಇಂದಿರಾಗಾಂಧಿ ವಿರುದ್ಧ ಎರಡು ವಾಕ್ಯ ಘೋಷಣೆ ಕೂಗಿದ್ದೆ. ಆಗ ಯಶವಂತಪುರ ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡಿದ್ದರು. ನಮ್ಮ ಇಡೀ ಕುಟುಂಬದಲ್ಲಿ ಆರ್‌ಎಸ್‌ಎಸ್‌ನವರೇ ಇದ್ದರು. ಅವರು ಕೂಡ ತಲೆಮರೆಸಿಕೊಳ್ಳಬೇಕಾಯಿತು. ನಾನು ಒಂದು ತಿಂಗಳು ಸ್ವಾತಂತ್ರ್ಯ ಉದ್ಯಾನದ ಜೈಲಿನಲ್ಲಿದ್ದೆ. 200 ಜನರಿಗೆ ಒಂದು ಶೌಚಾಲಯವಿತ್ತು. ಊಟ ಕೂಡ ಕೊಡುತ್ತಿರಲಿಲ್ಲ. ಆ ಕಷ್ಟಗಳು ಈಗಲೂ ನೆನಪಿನಲ್ಲಿದೆ. ಜನರಿಗೆ ಅಷ್ಟು ಕಿರುಕುಳ ನೀಡಿದ ಕಾಂಗ್ರೆಸ್ ಈಗ ಅಧಿಕಾರದಲ್ಲಿದೆ ಎಂದರು.
ಸಂವಿಧಾನಕ್ಕೆ ಅಪಮಾನ ಮಾಡಿದ ಕಾಂಗ್ರೆಸ್ ಈಗ ಯಾವ ಮುಖ ಇಟ್ಟುಕೊಂಡು ಜನರ ಬಳಿ ಹೋಗುತ್ತಾರೆ ಎಂದು ಅರ್ಥವಾಗುತ್ತಿಲ್ಲ. ಆದ್ದರಿಂದ ರಾಹುಲ್ ಗಾಂಧಿ ಅವರಿಗೆ ಮಾನ, ಮರ್ಯಾದೆ ಇದ್ದರೆ ರಾಮ್‌ಲೀಲಾ ಮೈದಾನಕ್ಕೆ ಬಂದು ಇಡೀ ದೇಶದ ಜನರ ಮುಂದೆ ತಲೆಬಾಗಿ ಕ್ಷಮೆ ಕೇಳಬೇಕು. ಸಂವಿಧಾನಕ್ಕೆ ಅಪಚಾರ ಮಾಡಿದ ದೇಶ ವಿರೋಧಿ ಕಾಂಗ್ರೆಸ್ ಪಕ್ಷ ಕ್ಷಮೆ ಕೇಳಬೇಕು. ಸಂವಿಧಾನ ಬದಲಾವಣೆ ಮಾಡಲಿದ್ದೇವೆ ಎಂದು ಬಿಜೆಪಿಯ ಮೇಲೆ ಆರೋಪ ಮಾಡುತ್ತಾರೆ. ಆದರೆ ದ್ರೋಹ ಬಗೆದಿದ್ದು ಕಾಂಗ್ರೆಸ್ ಎಂದು ದೂರಿದರು.
ಸಂವಿಧಾನ ನಮಗೆ ಭಗವದ್ಗೀತೆಗೆ ಸಮಾನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಸಂವಿಧಾನವನ್ನು ಕಾಂಗ್ರೆಸ್ ಬದಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ