Politics

*ಸ್ವಾಮೀಜಿಯವರನ್ನು ಮುಟ್ಟಲು ಬಂದರೆ ಒಕ್ಕಲಿಗ ಸಮುದಾಯ ತಿರುಗಿ ಬೀಳುತ್ತೆ: ಸರ್ಕಾರಕ್ಕೆ ಆರ್. ಅಶೋಕ್ ಎಚ್ಚರಿಕೆ*

ಡಿಸಿಎಂ ಡಿ.ಕೆ. ಶಿವಕುಮಾರ್ ಸಮಯಕ್ಕೆ ತಕ್ಕಂತೆ ಬದಲಾಗುತ್ತಾರೆ ಎಂದು ಕಿಡಿ

ಪ್ರಗತಿವಾಹಿನಿ ಸುದ್ದಿ: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರನ್ನು ಸರ್ಕಾರ ಮುಟ್ಟಲು ಬಂದರೆ ಇಡೀ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಸ್ವಾಮೀಜಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸ್ವಾಮೀಜಿಯವರಿಗೆ ಧೈರ್ಯ ಹೇಳಿದ್ದೇವೆ ಹಾಗೂ ಒಕ್ಕಲಿಗ ಸಮಾಜದೊಂದಿಗೆ ನಾವಿದ್ದೇವೆ ಎಂದು ಹೇಳಿದ್ದೇವೆ. ವಕ್ಫ್ ಮಂಡಳಿ ಹಿಂದೂಗಳ, ಧಾರ್ಮಿಕ ಸಂಸ್ಥೆಗಳ ಜಮೀನುಗಳನ್ನು ನುಂಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಪಹಣಿ ಬದಲಿಸಲಾಗುತ್ತಿದೆ. ಹಿಂದೂಗಳಿಗಾಗುತ್ತಿರುವ ಅನ್ಯಾಯದ ವಿರುದ್ಧ ಅವರು ಮಾತನಾಡಿದ್ದು, ಬಳಿಕ ಅದರಲ್ಲಿ ತಪ್ಪಿದ್ದರೆ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ. ಇಷ್ಟಾದರೂ ಒಬ್ಬ ಮತಾಂಧ ದೂರು ನೀಡಿದ್ದಕ್ಕೆ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರೆ ಸರ್ಕಾರಕ್ಕೆ ಎಷ್ಟು ಧೈರ್ಯ ಇದೆ ಎಂದು ಪ್ರಶ್ನಿಸಿದರು.

ಅಸಾದುದ್ಧೀನ್ ಓವೈಸಿ ದೇಶಕ್ಕೆ ಬೆದರಿಕೆ ಹಾಕುತ್ತಾರೆ. ಆಂಧ್ರಪ್ರದೇಶದಲ್ಲಿ ಮೌಲ್ವಿ ಸರ್ಕಾರಕ್ಕೆ ಬೆದರಿಕೆ ಹಾಕುತ್ತಾನೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ಬೆಲೆ ಕೊಡಲ್ಲ ಎಂದು ಕೆಲವರು ಹೇಳುತ್ತಾರೆ. ದೇವೇಗೌಡರನ್ನೇ ಖರೀದಿ ಮಾಡುತ್ತೇನೆಂದು ಸಚಿವ ಜಮೀರ್ ಹೇಳಿದ್ದರು. ಆದರೆ ಸರ್ಕಾರ ಅದರ ವಿರುದ್ಧ ಕ್ರಮ ವಹಿಸಿಲ್ಲ. ಒಕ್ಕಲಿಗರ ವಿರುದ್ಧ ಕಾಂಗ್ರೆಸ್ ದ್ವೇಷ ಸಾಧಿಸುವುದು ಹೇಯ. ಸರ್ಕಾರ ಸ್ವಾಮೀಜಿಯವರನ್ನು ಮುಟ್ಟುವ ಕೆಲಸ ಮಾಡಿದರೆ ಇಡೀ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ ಎಂದು ಎಚ್ಚರಿಕೆ ನೀಡಿದರು.

Home add -Advt

ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಸಮಯಕ್ಕೆ ತಕ್ಕಂತೆ ಬದಲಾಗುತ್ತಾರೆ. ಒಮ್ಮೆ ಒಕ್ಕಲಿಗರ ಪರ ಮಾತಾಡಿದರೆ, ಮತ್ತೆ ಭಯೋತ್ಪಾದಕರನ್ನು ಬ್ರದರ್ ಎನ್ನುತ್ತಾರೆ. ಆದರೆ ಬಿಜೆಪಿ ಎಂದಿಗೂ ಹಿಂದೂಗಳ ಪರ ನಿಲ್ಲಲಿದೆ ಎಂದರು.

ಸ್ವಾಮೀಜಿಯವರಿಗೆ ತಿಳಿ ಹೇಳುವ ಬದಲು ಪೊಲೀಸರು ನೋಟಿಸ್ ನೀಡಿದ್ದಾರೆ. ಈಗ ಒಕ್ಕಲಿಗ ಸಮುದಾಯ ಎಚ್ಚೆತ್ತುಕೊಳ್ಳಬೇಕಿದೆ. ಸಮುದಾಯದ ವಿರುದ್ಧ ಸರ್ಕಾರ ಈ ರೀತಿ ದ್ವೇಷ ಕಾರುತ್ತಿರುವುದನ್ನು ಸಮುದಾಯದ ಜನರು ಗಮನಿಸಬೇಕಿದೆ. ಸ್ವಾಮೀಜಿಗೆ ಕಿರುಕುಳ ನೀಡಿದರೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button