Politics

*ಜೂನ್‌ 6 ರೊಳಗೆ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಬೇಕು; ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ: ವಿಪಕ್ಷ ನಾಯಕ ಆರ್‌.ಅಶೋಕ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ದಲಿತರ ಹಣವನ್ನು ಕಾಂಗ್ರೆಸ್‌ ಸರ್ಕಾರ ಲೂಟಿ ಮಾಡಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಜೂನ್‌ 6 ರೊಳಗೆ ರಾಜೀನಾಮೆ ನೀಡದಿದ್ದರೆ ರಾಜ್ಯಾದ್ಯಂತ ಪ್ರತಿಭಟಿಸಲಾಗುವುದು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಹಣ ನುಂಗಿದ ಕಾಂಗ್ರೆಸ್‌ ಎಂಬ ಬ್ಯಾನರ್‌ ಅಡಿಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು. ದಲಿತರ ಹಣವನ್ನು ಟಕಾಟಕ್‌ ಎಂದು ಲೂಟಿ ಮಾಡಿದ ಕಾಂಗ್ರೆಸ್‌ ಸರ್ಕಾರವನ್ನು ಟಕಾಟಕ್‌ ಎಂದೇ ಅಧಿಕಾರದಿಂದ ಕೆಳಕ್ಕಿಳಿಸುವ ದಿನ ದೂರವಿಲ್ಲ. ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು.

ಪರಿಶಿಷ್ಟ ಪಂಗಡದ 187 ಕೋಟಿ ರೂ. ಹಣವನ್ನು ಗುಳುಂ ಮಾಡಿದ್ದೇ ಕಾಂಗ್ರೆಸ್‌ ಸರ್ಕಾರದ ಸಾಧನೆ. ಚುನಾವಣೆಗೆ ಮುನ್ನ ದಲಿತರ ಉದ್ಧಾರ ಎಂದು ಕಾಂಗ್ರೆಸ್‌ ಹೇಳುತ್ತಿತ್ತು. ನಂತರ ದಲಿತರನ್ನು ಶೋಷಣೆ ಮಾಡಿದೆ. ರಾಮನ ಹೆಸರು ಕಂಡರೆ ಆಗದ ಕಾಂಗ್ರೆಸ್‌ಗೆ ವಾಲ್ಮೀಕಿ ಹೆಸರಿನ ನಿಗಮವನ್ನೂ ಕಂಡರೆ ಆಗುವುದಿಲ್ಲ. ಹೆಣ್ಣುಮಕ್ಕಳಿಗೆ ಸುರಕ್ಷತೆ ಗ್ಯಾರಂಟಿ ಇಲ್ಲವೆಂದು ಗೊತ್ತಿತ್ತು. ಈಗ ಅಧಿಕಾರಿಗಳಿಗೂ ಗ್ಯಾರಂಟಿ ಇಲ್ಲ ಎಂದರು.

Home add -Advt

ಹಣ ವರ್ಗಾಯಿಸಲು ಸಚಿವರು ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರನ್‌ ಪತ್ರದಲ್ಲಿ ತಿಳಿಸಿದ್ದಾರೆ. ಜಿ.ಪದ್ಮನಾಭ್‌, ಸುಜಾ ಮೊದಲಾದ ಅಧಿಕಾರಿಗಳ ಹೆಸರನ್ನೂ ಉಲ್ಲೇಖಿಸಿದ್ದಾರೆ. ಈ ಪತ್ರದಲ್ಲಿ ಹಗರಣದ ಸಂಪೂರ್ಣ ವಿವರವನ್ನು ದಾಖಲೆಯೊಂದಿಗೆ ತಿಳಿಸಿದ್ದಾರೆ ಎಂದು ಹೇಳಿದರು.

ಮಹಿಳೆಯರ ಖಾತೆಗೆ ಟಕಾಟಕ್‌ ಎಂದು ಹಣ ಹಾಕುತ್ತೇವೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ನಿಗಮದಿಂದ ಆಗಾಗ್ಗೆ ಕೋಟ್ಯಂತರ ರೂಪಾಯಿ ಟಕಾಟಕ್‌ ಆಗಿ ಕಾಂಗ್ರೆಸ್‌ನ ಲೂಟಿ ಖಾತೆಗೆ ವರ್ಗಾವಣೆಯಾಗಿದೆ. 25 ಸಾವಿರ ಕೋಟಿ ರೂ. ದಲಿತರ ಹಣ ಟಕಾಟಕ್‌ ಎಂದು ಕಾಣೆಯಾಗಿದೆ. ಬಿತ್ತನೆ ಬೀಜಗಳ ದರ ಟಕಾಟಕ್‌ ಎಂದು ಏರಿಕೆಯಾಗಿದೆ. ಭಯೋತ್ಪಾದನೆ ಟಕಾಟಕ್‌ ಎಂದು ಮೇಲೆದ್ದಿದೆ ಎಂದರು.

ಕೊಲೆ ಪ್ರಕರಣ ದಾಖಲಿಸಿ

ಹಿಂದೆ ಕೆ.ಎಸ್‌.ಈಶ್ವರಪ್ಪನವರ ಮೇಲೆ ಆರೋಪ ಬಂದಾಗ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಪ್ರಶ್ನೆ ಕೇಳಿದ್ದರು. ಹಾಗೆಯೇ ಸಿಎಂ ಸಿದ್ದರಾಮಯ್ಯ ಅವರಂತೂ ಸೆಕ್ಷನ್‌ 302 ಅಡಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದರು. ಈಗ ಡೆತ್‌ನೋಟ್‌ನಲ್ಲಿ ಸಚಿವರ ಹೆಸರಿದ್ದರೂ ಯಾವುದೇ ಕ್ರಮ ವಹಿಸಿಲ್ಲ. ಮುಖ್ಯಮಂತ್ರಿಗಳಿಗೆ ಮಾನ ಮರ್ಯಾದೆ ಇಲ್ಲ. ಈಗಲೂ ಸಚಿವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಿ ಎಂದು ಒತ್ತಾಯಿಸಿದರು.

20 ಕೋಟಿ ರೂ. ಹಣವನ್ನು ವಾಪಸ್‌ ನೀಡಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡುತ್ತಿದೆ. ಹಾಗೆಯೇ ಅಧಿಕಾರಿಯ ಪ್ರಾಣವನ್ನೂ ಮರಳಿ ತರಲಿ. ಒಬ್ಬ ಅಧಿಕಾರಿಯ ಪ್ರಾಣಕ್ಕೆ ಈ ಸರ್ಕಾರ ಬೆಲೆ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಪಕ್ಷ ನಾಯಕ ಆರ್‌.ಅಶೋಕ ಕೇಳಿದ ಪ್ರಶ್ನೆಗಳು:

• ಆತ್ಮಹತ್ಯೆ ಪತ್ರದಲ್ಲಿ ಸಚಿವರ ಹೆಸರಿದೆ. ಆದರೂ ಎಫ್‌ಐಆರ್‌ನಲ್ಲಿ ಸಚಿವರ ಹೆಸರು ಏಕಿಲ್ಲ?
• 187 ಕೋಟಿ ರೂ. ಗುಳುಂ ಮಾಡಿದ ಅಧಿಕಾರಿಗಳನ್ನು ಏಕೆ ಬಂಧಿಸಿಲ್ಲ?
• ಸಿಐಡಿ ಎಂದರೆ ಕಾಂಗ್ರೆಸ್‌ ಇನ್‌ವೆಸ್ಟಿಗೇಶನ್‌ ಡಿಪಾರ್ಟ್‌ಮೆಂಟ್‌. ತನಿಖೆಯನ್ನು ಸಿಐಡಿಗೆ ಏಕೆ ಕೊಟ್ಟಿದ್ದೀರಿ?
• ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವಾಗ ರಾಜೀನಾಮೆ ನೀಡುತ್ತಾರೆ?
• ಮೃತ ಅಧಿಕಾರಿಯ ಮನೆಯಲ್ಲಿದ್ದ ದಾಖಲೆಗಳನ್ನು ಏಕೆ ಬಹಿರಂಗಪಡಿಸಿಲ್ಲ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button