Politics

*ದಾಖಲೆ ನೀಡದೇ ಹೇಡಿಯಂತೆ ಪಲಾಯನ ಮಾಡಿದ ಸಿಎಂ ಸಿದ್ದರಾಮಯ್ಯ: ಆರ್.ಅಶೋಕ್ ವಾಗ್ದಾಳಿ*

ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಿಜೆಪಿ

ಪ್ರಗತಿವಾಹಿನಿ ಸುದ್ದಿ: ಮುಡಾ ಹಗರಣದಲ್ಲಿ ಭಾಗಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿವೇಶನದಲ್ಲಿ ದಾಖಲೆ ನೀಡದೆ ಹೇಡಿಯಂತೆ ಪಲಾಯನ ಮಾಡಿದ್ದಾರೆ. ಅವರ ರಾಜೀನಾಮೆ ಪಡೆಯಲು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ತಿಳಿಸಿದರು.

ಬಿಜೆಪಿ ಶಾಸಕರೊಂದಿಗೆ ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್‌ ಸರ್ಕಾರ ಬೃಹತ್ತಾದ ಹಗರಣಗಳಲ್ಲಿ ಭಾಗಿಯಾಗಿರುವುದು ಜಗಜ್ಜಾಹೀರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಲೂಟಿ ಮಾಡಿದ ಎರಡು ಹಗರಣಗಳು ಬೆಳಕಿಗೆ ಬಂದಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಹಗರಣ ಬಯಲಿಗೆ ಬಂದಿದೆ. ಸಿದ್ದರಾಮಯ್ಯನವರು ಪತ್ನಿಯ ಹೆಸರಲ್ಲಿ 14 ನಿವೇಶನ ಪಡೆದಿದ್ದರೆ, ಅವರ ಕುಟುಂಬದವರು ನೂರಾರು ಸೈಟುಗಳನ್ನು ಪಡೆದಿದ್ದಾರೆ. ಸಂವಿಧಾನ ರಕ್ಷಣೆ ಮಾಡುತ್ತೇನೆಂದು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದವರೇ ಸಂವಿಧಾನವನ್ನು ಭಕ್ಷಣೆ ಮಾಡಿದ್ದಾರೆ ಎಂದು ದೂರಿದರು.

ಈ ಹಗರಣಗಳ ಕುರಿತು ಮಾತನಾಡಲು ಸದನದಲ್ಲಿ ಅವಕಾಶ ನೀಡಿಲ್ಲ. ಸ್ಪೀಕರ್‌ ಕೂಡ ಕಾಂಗ್ರೆಸ್‌ ಕಡೆ ವಾಲಿರುವುದು ಸ್ಪಷ್ಟವಾಗಿದೆ. ವಿರೋಧ ಪಕ್ಷಕ್ಕೆ ಪ್ರಶ್ನೆ ಮಾಡುವ ಅಧಿಕಾರ ಇದೆ. ಆದರೆ ಅದನ್ನು ಮೊಟಕುಗೊಳಿಸಿ, ದಾಖಲೆಗಳನ್ನು ಕೊಡುತ್ತೇವೆಂಬ ಭಯದಿಂದ ಆಡಳಿತ ಪಕ್ಷ ಪಲಾಯನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಡಾದಲ್ಲಿ ದಲಿತರ ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಬಳಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕೂಡ ದಲಿತರಿಗೆ ಸಂಬಂಧಿಸಿದೆ. ಇಷ್ಟೇ ಅಲ್ಲದೆ 25 ಸಾವಿರ ಕೋಟಿ ರೂಪಾಯಿಯನ್ನು ದಲಿತರಿಗೆ ನೀಡದೆ ಬೇರೆ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ಇದಕ್ಕಾಗಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಈ ಬಗ್ಗೆ ರಾಜ್ಯಪಾಲರಿಗೆ ದೂರು ಹಾಗೂ ಮನವಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿಯವರು ಪತ್ರಿಕಾಗೋಷ್ಠಿ ಬದಲು ಅಧಿವೇಶನದಲ್ಲೇ ದಾಖಲೆಗಳನ್ನು ನೀಡಲಿ. ಆಗ ನಾವು ಅಲ್ಲೇ ಪ್ರಶ್ನೆ ಕೇಳಬಹುದಿತ್ತು. ಅದನ್ನು ಬಿಟ್ಟು ಹೇಡಿಯಂತೆ ಪಲಾಯನ ಮಾಡಿದ್ದಾರೆ ಎಂದು ದೂರಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button