ಪೊಲೀಸ್ ಉಪಠಾಣೆ, ಸ್ಮಶಾನಗಳಿಗೆ ವಿದ್ಯುತ್ ಸಂಪರ್ಕ: ಸಚಿವರಿಬ್ಬರಿಗೆ ಮನವಿ ಸಲ್ಲಿಸಿದ ಡಾ.ಸೋನಾಲಿ ಸರ್ನೋಬತ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಖಾನಾಪೂರ ತಾಲ್ಲೂಕಿನ ಕಕ್ಕೇರಿ ಹಾಗೂ ಪಾರಿಶ್ವಾಡ ಜಿಲ್ಲಾ ಪಂಚಾಯತ ಕ್ಷೇತ್ರಗಳಿಗೆ ಉಪ ಪೊಲೀಸ್ ಠಾಣೆ ಮಂಜೂರು ಮಾಡುವಂತೆ ಸಾಮಾಜಿಕ ಕಾರ್ಯಕರ್ತೆ, ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಶುಕ್ರವಾರ ಸುವರ್ಣ ವಿಧಾನಸೌಧದಲ್ಲಿ ಅಶ್ವತ್ಥ್ ನಾರಾಯಣ ಅವರನ್ನು ಭೇಟಿ ಮಾಡಿದ ಸೋನಾಲಿ ಸರ್ನೋಬತ್, ಖಾನಾಪೂರ ತಾಲ್ಲೂಕಿನ ಕಕ್ಕೇರಿ ಗ್ರಾಮವು ಜಿಲ್ಲಾ ಪಂಚಾಯತ ಕ್ಷೇತ್ರವಾಗಿದ್ದು, ಈ ಗ್ರಾಮವು ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಅಲ್ಲದೆ ಜಿಲ್ಲೆಯ ಗಡಿ ಭಾಗಕ್ಕೆ ಹೊಂದಿಕೊಂಡಿದೆ. ಇಲ್ಲಿ ಪ್ರಸಿದ್ಧ ಬಿಷ್ಟಮ್ಮ ದೇವಿ ದೇವಸ್ಥಾನವಿದ್ದು, ಪ್ರತಿದಿನ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದುಕೊಳ್ಳುತ್ತಾರೆ. ಇಲ್ಲಿ ಪ್ರತಿ ಅಮವಾಸ್ಯೆಯ ದಿನ ಹೆಚ್ಚಿನ ಜನದಟ್ಟಣೆ ಉಂಟಾಗುತ್ತಿದೆ. ಅಲ್ಲದೇ ಪ್ರತಿವರ್ಷ ಲಕ್ಷಾಂತರ ಭಕ್ತರ ಉಪಸ್ಥಿತಿಯಲ್ಲಿ ಶ್ರೀ ಬಿಷ್ಟಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಗ್ರಾಮವು ನಂದಗಡದಿಂದ ಸುಮಾರು 20 ಕಿ.ಮಿ ದೂರದಲ್ಲಿದ್ದು, ಕಕ್ಕೇರಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಗ್ರಾಮಗಳ ಜನ ನಂದಗಡಕ್ಕೆ ಹೋಗಲು ಸೂಕ್ತ ಸಂಚಾರ ವ್ಯವಸ್ಥೆ ಇಲ್ಲ.
ಅದರಂತೆ ಪಾರಿಶ್ವಾಡ ಗ್ರಾಮವು ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ದೊಡ್ಡ ಗ್ರಾಮವಾಗಿದ್ದು, ಜಿಲ್ಲಾ ಪಂಚಾಯತ ಕ್ಷೇತ್ರವಾಗಿದೆ. ಇದು ಖಾನಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ. ಖಾನಾಪೂರದಿಂದ ಈ ಗ್ರಾಮವು ಸುಮಾರು 15 ಕಿ.ಮಿ ದೂರದಲ್ಲಿದ್ದು, ಸಂಚಾರ ವ್ಯವಸ್ಥೆ ಸರಿಯಾಗಿಲ್ಲ.
ಈ ಎರಡು ಜಿಲ್ಲಾ ಪಂಚಾಯತ ಪ್ರದೇಶಗಳ ಜನ ಸಣ್ಣ ಪುಟ್ಟ ತಕರಾರು, ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ದೂರದ ಪೊಲೀಸ್ ಠಾಣೆಗಳಿಗೆ ಅಲೆದಾಡಬೇಕಾಗುತ್ತಿದೆ. ಈ ಬಗ್ಗೆ ಅಲ್ಲಿನ ಗ್ರಾಮ ಪಂಚಾಯತ ಪ್ರತಿನಿಧಿಗಳು ಸಮಸ್ಯೆಯ ಕುರಿತು ನನಗೆ ಈ ಬಗ್ಗೆ ಮನವಿ ಮಾಡಿದ್ದು, ಈ ಎರಡು ಕ್ಷೇತ್ರಗಳ ಜನರಿಗೆ ಅನೂಕುಲವಾಗುವ ದೃಷ್ಟಿಯಿಂದ ಈ ಎರಡು ಗ್ರಾಮಗಳಲ್ಲಿ ಒಂದೊಂದು ಠಾಣೆಗಳನ್ನು ಮಂಜೂರು ಮಾಡಿ, ಇಲ್ಲಿನ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಸೋನಾಲಿ ಸರ್ನೋಬತ್ ಕೋರಿದ್ದಾರೆ.
ಸ್ಮಶಾನಗಳಿಗೆ ವಿದ್ಯುತ್ ಚಿತಾಗಾರ
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಕ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸ್ಮಶಾನಗಳಿಗೆ ವಿದ್ಯುತ್ ಚಿತಾಗಾರ ಒದಗಿಸುವಂತೆ ಡಾ.ಸೋನಾಲಿ ಸರ್ನೋಬತ್ ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕಕ್ಕೇರಿ ಗ್ರಾಮದ ಹಿಂದು ಸಮಾಜದ ಸ್ಮಶಾನ, ಲಿಂಗಾಯತ್ ಸಮಾಜದ ಸ್ಮಶಾನ, ಕ್ರಿಶ್ಚನ್‌ಸಮಾಜದ ಸ್ಮಶಾನ ಹಾಗೂ ಮುಸ್ಲಿಂ ಸಮಾಜದ ಸ್ಮಶಾನಗಳಿಗೆ ವಿದ್ಯುತ್ ಚಿತಾಗಾರ ನೀಡಲು ಕೋರಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಕ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಈ 5 ಗ್ರಾಮಗಳ ವಿವಿಧ ಧರ್ಮಗಳಿಗೆ ಸಂಬಂಧಿಸಿದ ಸ್ಮಶಾನಗಳಿಗೆ ವಿದ್ಯತ್ ಚಿತಾಗಾರ ಸಂಪರ್ಕವಿರುಲ್ಲ. ಇದರಿಂದಾಗಿ ರಾತ್ರಿಯ ಸಮಯದಲ್ಲಿ ಅತ್ಯಸಂಸ್ಕಾರ ನಡೆಸುವಾಗ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ. ಕಕ್ಕೇರಿ ಗ್ರಾಮವು ಜಿಲ್ಲಾ ಪಂಚಾಯತ್ ಕ್ಷೇತ್ರವಾಗಿದ್ದು ಬಹಳಷ್ಟು ಜನಸಂಖ್ಯೆಯನ್ನು ಹೊಂದಿದೆ. ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಮೂಲ ಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ತಕ್ಷಣವೇ ಸ್ಮಶಾನಗಳಿಗೆ ವಿದ್ಯುತ್ ಚಿತಾಗಾರ ನೀಡುವಲ್ಲಿ ಸೂಕ್ತ ಕ್ರಮ ಕೈಗಳ್ಳುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿದ್ದಾರೆ.
ಬೆಳಗಾವಿಯಲ್ಲಿ ರಾತ್ರೋರಾತ್ರಿ ದಿಢೀರ್ ಪ್ರತಿಭಟನೆ : ಧರ್ಮವೀರ್ ಸಂಭಾಜಿ ವೃತ್ತದಲ್ಲಿ ಬೃಹತ್ ಜನಸ್ತೋಮ