Kannada NewsKarnataka NewsLatestUncategorized

*ಕರ್ನಾಟಕಕ್ಕೆ ರಾ.ಹೆ. ಹೆಚ್ಚುವರಿ ಪ್ರಾದೇಶಿಕ ಕಚೇರಿ ನೀಡಲು ಮನವಿ,ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಸಚಿವ ಪ್ರಹ್ಲಾದ್ ಜೋಶಿ ಪ್ರಸ್ತಾವನೆ*

ಪ್ರಗತಿವಾಹಿನಿ ಸುದ್ದಿ; ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆ ನಿರ್ದೇಶಕರ ಕಚೇರಿಗಳನ್ನು 19ಕ್ಕೆ ಹೆಚ್ಚಿಸಿದ್ದು, ಹೆಚ್ಚುವರಿ ಪ್ರಾದೇಶಿಕ ಕಚೇರಿಗಳನ್ನು ಸ್ಥಾಪಿಸುವಂತೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಜೋಶಿ ಅವರು, ಪ್ರತಿ 12 ಯೋಜನಾ ನಿರ್ದೇಶಕರ ಕಚೇರಿಗೆ ಒಂದು ಪ್ರಾದೇಶಿಕ ಕಚೇರಿ ವ್ಯವಸ್ಥೆ ಈಗಾಗಲೇ ಕರ್ನಾಟಕದಲ್ಲೂ ಇದೆ. ಆದರೆ ಈಗ ಯೋಜನಾ ನಿರ್ದೇಶಕರ ಸಂಖ್ಯೆ ಹೆಚ್ಚಿದ್ದರಿದ ಹೆಚ್ಚುವರಿ ಪ್ರಾದೇಶಿಕ ಕಚೇರಿ (R.O.) ಸ್ಥಾಪಿಸಲು ಮನವಿ ಸಲ್ಲಿಸಿದ್ದೇನೆಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಅತಿ ಹೆಚ್ಚಿನ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಅಂಕೋಲಾ-ಹುಬ್ಬಳ್ಳಿ- ವಿಜಾಪುರ ಚತುಷ್ಪಥಕ್ಕೆ ಮನವಿ:
ಎಕ್ಸ್‌ಪ್ರೆಸ್ ಹೈವೇ ಮೇಲ್ದರ್ಜೆಗೆ ಏರಿಸುವ ಭಾರತಮಾಲಾ ಯೋಜನೆಯಡಿ ಅಂಕೋಲಾ-ಹುಬ್ಬಳ್ಳಿ- ವಿಜಾಪುರ ಹೆದ್ದಾರಿಯನ್ನು ನಾಲ್ಕು ಲೈನ್ ರಾಷ್ಟ್ರೀಯ ಹೆದ್ದಾರಿಯನ್ನಾಗಿಸುವಂತೆ ಮನವಿ ಮಾಡಲಾಗಿದೆ.

ಧಾರವಾಡ ಹೆದ್ದಾರಿ ಸಂಪರ್ಕ ರಸ್ತೆಗಳ ಅನುಮೋದನೆಗೆ ಮನವಿ:
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆಗಳ ನಿರ್ಮಾಣಕ್ಕೆ ಅನುಮೋದನೆ ಮತ್ತು ಕೇಂದ್ರ ರಸ್ತೆಗಳ ನಿಧಿ ಬಿಡುಗಡೆ ಮಾಡುವಂತೆ ನಿತಿನ್ ಗಡ್ಕರಿ ಅವರ ಭೇಟಿ ವೇಳೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

ನಿತಿನ್ ಗಡ್ಕರಿ ಅವರು ಈಗಾಗಲೇ ಹುಬ್ಬಳ್ಳಿ- ಧಾರವಾಡದ ಹಲವು ಆಂತರಿಕ ರಸ್ತೆ ಯೋಜನೆಗಳಿಗೆ ಅನುದಾನ ನೀಡಿದ್ದಾರೆ. ಇನ್ನೂ ಹೆಚ್ಚಿನ ಆಂತರಿಕ ರಸ್ತೆಗಳ ಅಭಿವೃದ್ಧಿಗೆ ಸಿ.ಆರ್‌.ಎಫ್ ಅಡಿಯಲ್ಲಿ ಹೆಚ್ಚುವರಿ ಹಣ ನೀಡುವಂತೆ ಕೋರಲಾಗಿದೆ. ಇದಕ್ಕೆ ಗಡ್ಕರಿ ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ನವಲಗುಂದ ಬೈಪಾಸ್ NH-218 ರಸ್ತೆ ಕರಡು ಅನುಮೋದನೆಗೆ ಮನವಿ:
ಈಗಾಗಲೇ ನವಲಗುಂದ ಬೈಪಾಸ್ NH-218 ರಸ್ತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕರಡು ಡಿ.ಪಿ.ಆರ್.ಯನ್ನು ಕೇಂದ್ರಕ್ಕೆ ಸಲ್ಲಿಸಿದ್ದು, ಆದಷ್ಟು ಬೇಗ ಅನುಮೋದಿಸಿ ರಾಜ್ಯ ಸರ್ಕಾರಕ್ಕೆ ಮರಳಿಸುವಂತೆ ಕೋರಲಾಗಿದೆ.

ಪ್ರಸ್ತಾವನೆ ತಲುಪಿಲ್ಲ:
ಹುಬ್ಬಳ್ಳಿಯ ಕುಸುಗಲ್- ನರೇಂದ್ರ ಬೈಪಾಸ್ ಮತ್ತು ಚೆನ್ನಮ್ಮ ವೃತ್ತದಿಂದ ಬಿಡ್ನಾಳ್ ವರೆಗೆ ಮೇಲ್ಸೇತುವೆ ನಿರ್ಮಾಣದ ಪ್ರಸ್ತಾವನೆ ಕೇಂದ್ರವನ್ನು ತಲುಪಿಲ್ಲ. ರಾಜ್ಯ ಸರ್ಕಾರ ಕೂಡಲೇ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲು ಕೋರಿದ್ದೇನೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಕೇಂದ್ರ ಹೆದ್ದಾರಿ ಸಚಿವ ಗಡ್ಕರಿ ಭೇಟಿ ವೇಳೆ ಶಾಸಕ ಅರವಿಂದ ಬೆಲ್ಲದ ಸಹ ಜತೆಗಿದ್ದರು.

Related Articles

Back to top button