ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಇವತ್ತಿನ ಸಮಾಜದಲ್ಲಿ ಜಗತ್ತಿನಾದ್ಯಂತ ಅನೇಕ ಸಂಘ ಸಂಸ್ಥೆಗಳು, ಏನ್ ಜಿ ಓ ಗಳು ಹಾಗೂ ಇನ್ನಿತರ ಸೇವಾ ಸಂಸ್ಥೆಗಳು ಅನೇಕ ರೀತಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ಬೇರೆ ರೀತಿಯಲ್ಲಿ ಸಹಾಯ ಮಾಡುತ್ತಿವೆ. ಆದರೆ ಶಾಂತಾಯಿ ವೃದ್ಧಾಶ್ರಮ ಮತ್ತು ವಿದ್ಯಾ ಆಧಾರ ಸಂಸ್ಥೆ ಯ ರದ್ದಿಯಿಂದ ಬುದ್ದಿಕಡೆಗೆ ಇದೊಂದು ವೈಶಿಷ್ಟಪೂರ್ಣ ಮತ್ತು ಪರಿಪೂರ್ಣ ಸಾಮಾಜಿಕ ಸೇವೆ ಎಂದರೆ ಅತಿಶಯೋಕ್ತಿಯಾಗಲಾರದು ಎಂದು ಗೋವಾ ವಿಧಾನ ಸಭೆಯ ಸಭಾಪತಿ ರಾಜೇಶ್ ಪಾಟ್ನೆಕರ್ ಹೇಳಿದರು.
ಶನಿವಾರ ಶಾಂತಾಯಿ ವೃದ್ಧಾಶ್ರಮದ ಶಾಂತಾಯಿ ವಿದ್ಯಾ ಆಧಾರ ಸಂಘಟನೆ ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ ಬಡ ಮಕ್ಕಳಿಗೆ ಶಿಷ್ಯವೇತನ (ಸ್ಕಾಲರ ಶಿಪ್) ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತಿದ್ದರು.
ಇವತ್ತಿನ ಸ್ಪರ್ಧಾತ್ಮಕ ಮತ್ತು ತಾಂತ್ರಿಕ ಯುಗದಲ್ಲಿ ಶಿಕ್ಷಣ ದುಬಾರಿಯಾಗುತ್ತಿದ್ದು ಎಷ್ಟೋ ಪ್ರತಿಭಾವಂತ ಬಡ ಮಕ್ಕಳಿಗೆ ಅದು ನಿಲುಕದ ನಕ್ಷತ್ರವಾಗಿದೆ. ಆದರೆ ಅಂತಹ ವಿದ್ಯಾರ್ಥಿಗಳಿಗೆ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರ ಜೊತೆಗೆ ಅನೇಕ ಈ ರೀತಿಯ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚುತ್ತಿವೆ ಆದ್ದರಿಂದ ಇವತ್ತಿನ ಬಡ ಮಕ್ಕಳು ಶಿಕ್ಷಣ ದಿಂದ ದೂರ ಉಳಿಯಬಾರದು. ಕಾರಣ ಮನುಷ್ಯನ ಅಭಿವೃದ್ಧಿಗೆ ಶಿಕ್ಷಣ ಒಂದೇ ಪರಿಹಾರ ಮತ್ತು ಅದಕ್ಕೆ ಅದೇ ಪರ್ಯಾಯ ಎಂದು ಹೇಳಿ ಕೇವಲ ದುಡ್ಡಿನ ಅಡಚಣೆಯಿಂದ ಶಿಕ್ಷಣ ಮೊಟಕುಗೊಳ್ಳದಿರಲಿ ಎಂದು ಕಿವಿಮಾತು ಹೇಳಿದರು.
ಶಾಂತಾಯಿ ವೃದ್ದಾಶ್ರಮದ ಸಾಮಾಜಿಕ ಕಾಳಜಿ ಮತ್ತು ಸೇವೆಯನ್ನು ಶ್ಲಾಘಿಸುತ್ತ ಅದರ ಎಲ್ಲ ಪದಾಧಿಕಾರಿಗಳನ್ನ ಹಾಗೂ ಸೇವೆಗೆ ಹಸ್ತ ಚಾಚಿದ ಎಲ್ಲ ದಾನಿಗಳನ್ನ ಅವರು ಕೊಂಡಾಡಿದರು. ಹಾಗೆಯೇ ಈ ರದ್ದಿಯಿಂದ ಬುದ್ದಿಕಡೆಗೆ ಕಾರ್ಯಕ್ರಮದಿಂದ ಸಹಾಯ ಪಡೆದು ಉನ್ನತ ವ್ಯಾಸಂಗ ಮುಗಿಸಿ ಕೆಲಸಕ್ಕೆ ಸೇರಿದ ವಿದ್ಯಾರ್ಥಿಗಳು ಈ ಅರ್ಥ ಪೂರ್ಣ ಕಾರ್ಯಕ್ರಮಕ್ಕೆ ತಮ್ಮ ಸಹಾಯ ಹಸ್ತ ಚಾಚಬೇಕು ಎಂದು ಹೇಳಿದರು. ಕೊನೆಗೆ ಬೆಳಗಾವಿಯ ಬಗ್ಗೆ ಇರುವ ಪ್ರೀತಿ ಮತ್ತು ಅಭಿಮಾನವನ್ನು ಅವರು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ. ಎಲ್. ಎಸ್. ಜಿ ಐ ಟಿ ಯ ಆಡಳಿತ ಮಂಡಳಿ ಅಧ್ಯಕ್ಷ ಯು ಎನ್ ಕಾಲಕುಂದ್ರಿಕರ್ ಮಾತನಾಡಿ, ಶಾಂತಾಯಿ ವೃದ್ಧಾಶ್ರಮದ ಈ ಅರ್ಥ ಪೂರ್ಣ ಕಾರ್ಯಕ್ರಮವನ್ನು ಶ್ಲಾಘಿಸಿ ಕೇವಲ ರದ್ದಿ ಮಾರಿ ಸುಮಾರು ೧೮ ಲಕ್ಷ ದಷ್ಟು ಶಿಷ್ಯ ವೇತನ ಕೊಟ್ಟಿರುವುದು ಒಂದು ಸಾಧನೆಯೇ ಎಂದು ಹೇಳಿ ಜಿ ಐ ಟಿ ಯಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಸಂಗ್ರಹಸಿದ ರದ್ದಿಯನ್ನು ಹಾಗೂ ಚೆಕ್ ಮೂಲಕ ಸಹಾಯಧನವನ್ನು ಶಾಂತಾಯಿ ವಿದ್ಯಾ ಆಧಾರ ಸಂಸ್ಥೆಗೆ ನೀಡಿದರು.
ಈ ಸಮಾರಂಭದಲ್ಲಿ ರದ್ದಿಯಿಂದ ಬುದ್ದಿ ಯೋಜನೆಯ ವತಿಯಿಂದ ೨೦೧೯ -೨೦ ನೇ ಸಾಲಿಗೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನ್ನು ವಿತರಿಸಿದರು.
ನಂತರ ಈ ಶಾಂತಾಯಿ ವಿದ್ಯಾ ಆಧಾರ ದಿಂದ ಶಾಯ ಪಡೆದು ತಮ್ಮ ಶಿಕ್ಷಣ ಮುಗಿಸಿ ಈಗ ಕೆಲಸಕ್ಕೆ ಸೇರಿದ ಕುಮಾರಿ. ಕೋಮಲ್ ಶಿರ್ಸಾಟ್ ಹಾಗೂ ದೀಪಾ ಪಾಟೀಲ್ ತಮ್ಮ ಕೃತಜ್ಞತಾ ಮಾತುಗಳನ್ನಾಡುತ್ತಾ ಈ ವಿದ್ಯಾ ಆಧಾರ ಅವರ ಬದುಕಿಗೆ ಹೇಗೆ ಆಧಾರವಾಯಿತು ಎಂಬುದನ್ನು ಮನ ಮುಟ್ಟುವಂತೆ ಹೇಳಿದರು.
ಈ ಮೊದಲು ಶಾಂತಾಯಿ ವಿದ್ಯಾ ಆಧಾರನ ಅಧ್ಯಕ್ಷ ಹಾಗೂ ಕೆ ಎಲ್ ಎಸ ಸದಸ್ಯರಾಗಿರುವ ವಿನಾಯಕ ಲೋಕುರ್ ಶಾಂತಾಯಿ ವಿದ್ಯಾ ಆಧಾರ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಶಾಂತಾಯಿ ವೃದ್ಧಾಶ್ರಮದ ಅಧ್ಯಕ್ಷ ವಿಜಯ್ ಪಾಟೀಲ್ ವೃದ್ಧಾಶ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರೋಹಿತ್ ದೇಶಪಾಂಡೆ ಹಾಗೂ ಸಂತೋಷ್ ಮಮದಾಪುರ ಅತಿಥಿಗಳನ್ನು ಪರಿಚಯಿಸಿದರು, ಪ್ರೊ. ಗೀತಾ ಸಂಬ್ರೇಕರ್ ನಿರೂಪಿಸಿದರು, ಸೋನಾಲಿ ಸರ್ನೋಬತ್ ವಂದಿಸಿದರು.
ಈ ಸಮಯದಲ್ಲಿ ಜಿ ಐ ಟಿ ಪ್ರಾಚಾರ್ಯ ಡಾ. ಆನಂದ್ ದೇಶಪಾಂಡೆ, ಸಾಮಾಜಿಕ ಕಾರ್ಯಕರ್ತ ಹಾಗೂ ಬೆಳಗಾವಿಯ ಮಾಜಿ ಮೇಯರ್ ವಿಜಯ್ ಮೊರೆ, ಹಾಗೂ ವಿದ್ಯಾ ಆಧಾರನ ಎಲ್ಲ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪಾಲಕರು ಹಾಗೂ ಜಿ ಐ ಟಿ ಸಿಬ್ಬಂದಿ ವರ್ಗ ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ