Kannada NewsKarnataka NewsLatestPolitics

*ಮೋದಿ ನನ್ನ ಫೋನ್ ಟ್ಯಾಪ್ ಮಾಡುತ್ತಿದ್ದಾರೆ*: *ರಾಹುಲ್ ಗಾಂಧಿ ಗಂಭೀರ ಆರೋಪ*

ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ. ಇದಕ್ಕೆ ತಮ್ಮ ಬಳಿ ಪುರಾವೆಯೂ ಇದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಫೋನ್ ತೋರಿಸುತ್ತಲೇ ಈ ಹೇಳಿಕೆ ನೀಡಿರುವ ಅವರು, ಮತ್ತೊಮ್ಮೆ ಪ್ರಧಾನಿ ಮೋದಿಗೆ ಬಹಿರಂಗ ಚರ್ಚೆಯ ಸವಾಲು ಹಾಕಿದ್ದಾರೆ. ಈ ನಡುವೆ ರಾಹುಲ್ ಆರೋಪಕ್ಕೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಫೋನ್ ಎತ್ತಿ ತೋರಿಸಿ, “ಪುರಾವೆ ಈ ಫೋನ್‌ನಲ್ಲಿದೆ. ಪ್ರಧಾನಿ ನನ್ನ ಫೋನ್ ಟ್ಯಾಪ್ ಮಾಡುತ್ತಿರುವುದರಿಂದ ಅವರಿಗೆ ಈ ವಿಷಯ ಗೊತ್ತಿದೆ” ಎಂದು ಹೇಳಿದ್ದಾರೆ. ಆದರೆ, ತಮ್ಮ ಆರೋಪಕ್ಕೆ ಸಂಬಂಧಿಸಿದ ಯಾವುದೇ ತಾಂತ್ರಿಕ ಅಥವಾ ಪರಿಶೀಲಿಸಬಹುದಾದ ಸಾಕ್ಷ್ಯವನ್ನು ರಾಹುಲ್ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ.

ಮೋದಿಗೆ ಬಹಿರಂಗ ಚರ್ಚೆಯ ಸವಾಲು

ಕಳೆದ ಕೆಲವು ದಿನಗಳಿಂದ ಪ್ರಧಾನಿ ಮೋದಿಗೆ ಬಹಿರಂಗ ಚರ್ಚೆಯ ಸವಾಲು ಹಾಕುತ್ತಿರುವ ರಾಹುಲ್ ಗಾಂಧಿ, ವಿದೇಶಿ ಶಕ್ತಿಗಳ ಪ್ರಭಾವ, ರಾಷ್ಟ್ರೀಯ ಭದ್ರತೆ, ಚುನಾವಣಾ ಅಕ್ರಮಗಳು ಸೇರಿದಂತೆ ದೇಶದ ಪ್ರಮುಖ ರಾಜಕೀಯ ವಿಚಾರಗಳ ಬಗ್ಗೆ ಮುಖಾಮುಖಿ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಸಂಸತ್ತಿನಲ್ಲಿ ಮುಕ್ತವಾಗಿ ಮಾತನಾಡಲು ಅವಕಾಶ ಸಿಗುತ್ತಿಲ್ಲ. ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸುವಾಗ ಮೈಕ್ ಸ್ಥಗಿತಗೊಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ದೀರ್ಘ ಭಾಷಣಗಳ ಬದಲು ಪ್ರಧಾನಿ ಮತ್ತು ತಾವು ನೇರವಾಗಿ ಪ್ರಶ್ನೆ ಕೇಳಿ ಉತ್ತರಿಸುವ ರೀತಿಯ ಚರ್ಚೆ ನಡೆಯಬೇಕು ಎಂಬುದು ಅವರ ಬೇಡಿಕೆ.

ಈ ಚರ್ಚೆಗೆ ಉದ್ಯಮಿ ಗೌತಮ್ ಅದಾನಿ ಅಥವಾ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ನಿರ್ಣಾಯಕರಾಗಿ ನೇಮಿಸಿದರೂ ತಮ್ಮ ಅಭ್ಯಂತರವಿಲ್ಲ ಎಂದು ರಾಹುಲ್ ಹೇಳಿದ್ದಾರೆ. ಚರ್ಚೆಯ ನಂತರ ಮೋದಿ ಪ್ರಧಾನಿಯಾಗಿ ಉಳಿಯುವುದಿಲ್ಲ ಎಂಬ ರಾಜಕೀಯ ಸವಾಲನ್ನೂ ಹಾಕಿದ್ದಾರೆ.

ರಾಹುಲ್ ಗಾಂಧಿಯವರ ಬಹಿರಂಗ ಚರ್ಚೆಯ ಬೇಡಿಕೆಯನ್ನು ಬಿಜೆಪಿ ನಾಯಕರು ಒಪ್ಪಿಲ್ಲ. ಚರ್ಚೆಗೆ ಸಂಸತ್ತೇ ಸೂಕ್ತ ವೇದಿಕೆಯಾಗಿದ್ದು, ಅಲ್ಲಿ ವಿಷಯಾಧಾರಿತವಾಗಿ ಮಾತನಾಡಬಹುದು ಎಂಬುದು ಬಿಜೆಪಿಯ ನಿಲುವು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಬಿಜೆಪಿ ನಾಯಕರು ರಾಹುಲ್ ಸಂಸತ್ತಿನಲ್ಲೇ ಚರ್ಚೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದ್ದಾರೆ.

ಅಖಿಲೇಶ್ ಯಾದವ್ ಬೆಂಬಲ

ರಾಹುಲ್ ಗಾಂಧಿಯವರ ಫೋನ್ ಕದ್ದಾಲಿಕೆ ಆರೋಪಕ್ಕೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಬೆಂಬಲ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನ ಬಳಸಿ ಏನು ಬೇಕಾದರೂ ಮಾಡಲು ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ.

ಫೋನ್ ಕದ್ದಾಲಿಕೆ ವಿಚಾರ ರಾಹುಲ್ ಗಾಂಧಿಗೆ ಹೊಸದಲ್ಲ. 2023ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ್ದ ಅವರು, ತಮ್ಮ ಫೋನ್‌ನಲ್ಲಿ ಇಸ್ರೇಲ್‌ನ ಎನ್‌ಎಸ್‌ಒ ಕಂಪನಿ ಅಭಿವೃದ್ಧಿಪಡಿಸಿದ ಪೆಗಾಸಸ್ ಸ್ಪೈವೇರ್ ಇತ್ತು ಎಂದು ಆರೋಪಿಸಿದ್ದರು. ಹಲವು ರಾಜಕಾರಣಿಗಳ ಫೋನ್‌ಗಳ ಮೇಲೂ ನಿಗಾ ಇಡಲಾಗುತ್ತಿದೆ ಎಂದು ಗುಪ್ತಚರ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು ಎಂದೂ ಹೇಳಿದ್ದರು.

ಆದರೆ, ಕೇಂದ್ರ ಸರ್ಕಾರ ಈ ಆರೋಪಗಳನ್ನು ನಿರಾಕರಿಸಿತ್ತು. ಪೆಗಾಸಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ್ದ ತಾಂತ್ರಿಕ ಸಮಿತಿ ಪರಿಶೀಲಿಸಿದ 29 ಫೋನ್‌ಗಳಲ್ಲಿ ಪೆಗಾಸಸ್ ಪತ್ತೆಯಾಗಿರಲಿಲ್ಲ. ಕೆಲವು ಫೋನ್‌ಗಳಲ್ಲಿ ಮಾಲ್‌ವೇರ್ ಕಂಡುಬಂದಿತ್ತು ಎಂದು ಸಮಿತಿಯ ವರದಿಯನ್ನು ಉಲ್ಲೇಖಿಸಿ ವರದಿಯಾಗಿತ್ತು.

ಹೀಗಾಗಿ, ರಾಹುಲ್ ಗಾಂಧಿಯವರ ಹೊಸ ಫೋನ್ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಪರಿಶೀಲಿಸಬಹುದಾದ ಸಾಕ್ಷ್ಯ ಹೊರಬರುತ್ತದೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button