Election NewsKannada NewsKarnataka NewsNationalPolitics

*ರಾಯ್ ಬರೇಲಿ ಉಳಿಸಿಕೊಂಡ ರಾಹುಲ್ ಗಾಂಧಿ: ವಯನಾಡ್ ನಿಂದ ಪ್ರಿಯಾಂಕ ಗಾಂಧಿ ಸ್ಪರ್ಧೆ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಗೆದ್ದಿರುವ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡು, ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದಾರೆ.

ರಾಹುಲ್ ಗಾಂಧಿ ಅವರು ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ನೀಡಲಿರುವ ಕಾರಣ  ತೆರವಾಗುವ ವಯನಾಡ್ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಖರ್ಗೆ ತಿಳಿಸಿದರು.

ರಾಹುಲ್ ಗಾಂಧಿ ಅವರು ವಯನಾಡ್ ಮತ್ತು ರಾಯ್ ಬರೇಲಿ ಲೋಕಸಭಾ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದರು ಮತ್ತು ಜೂನ್ 4 ರಂದು ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟವಾದ 14 ದಿನಗಳಲ್ಲಿ ಒಂದು ಸ್ಥಾನವನ್ನು ತೆರವು ಮಾಡಬೇಕಾಗಿತ್ತು. ಹೀಗಾಗಿ ರಾಹುಲ್ ಗಾಂಧಿ ಅವರು ಇಂದು ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿರ್ಧಾರ ಪ್ರಕಟಿಸಿದ್ದಾರೆ. 

ಈ ಘೋಷಣೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ, ಅಮೇಥಿ ಮತ್ತು ರಾಯ್ ಬರೇಲಿಯೊಂದಿಗಿನ ದೀರ್ಘಕಾಲದ ಸಂಬಂಧವು ಮುರಿಯಲಾಗದು ಎಂದು ಹೇಳಿದರು.

“ವಯನಾಡನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ರಾಹುಲ್ ಗಾಂಧಿ ಅನುಪಸ್ಥಿತಿಯನ್ನು ಅನುಭವಿಸಲು ನಾನು ಬಿಡುವುದಿಲ್ಲ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ ಮತ್ತು ಎಲ್ಲರನ್ನು ಸಂತೋಷಪಡಿಸಲು ಮತ್ತು ಉತ್ತಮ ಪ್ರತಿನಿಧಿಯಾಗಲು ಪ್ರಯತ್ನಿಸುತ್ತೇನೆ ಎಂದರು.

ವಯನಾಡ್ ಜನರಿಗೆ ತಮ್ಮ ಬಾಗಿಲು ಯಾವಾಗಲೂ ತೆರೆದಿರುತ್ತದೆ ಮತ್ತು ಕ್ಷೇತ್ರವು ತನ್ನ ಮತ್ತು ತಮ್ಮ ಸಹೋದರಿಯ ಮೂಲಕ ಪರಿಣಾಮಕಾರಿಯಾಗಿ ಇಬ್ಬರು ಸಂಸದರನ್ನು ಹೊಂದಲಿದೆ ಎಂದು ರಾಹುಲ್ ಗಾಂಧಿಯವರು ಹೇಳಿದ್ದಾರೆ.

“ಪ್ರಿಯಾಂಕಾ ಗಾಂಧಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಮತ್ತು ಅವರು ಚುನಾವಣೆಯಲ್ಲಿ ಗೆಲ್ಲಲಿದ್ದಾರೆ ಎಂದು ನನಗೆ ವಿಶ್ವಾಸವಿದೆ. ವಯನಾಡಿನ ಜನರು ತಮಗೆ ಇಬ್ಬರು ಸಂಸತ್ ಸದಸ್ಯರಿದ್ದಾರೆ ಎಂದು ಭಾವಿಸಬಹುದು; ಒಬ್ಬರು ನನ್ನ ಸಹೋದರಿ ಮತ್ತು ಇನ್ನೊಬ್ಬರು ನಾನು. ನನ್ನ ಬಾಗಿಲು ಯಾವಾಗಲೂ ವಯನಾಡಿನ ಜನರಿಗಾಗಿ ತೆರೆದಿರುತ್ತದೆ. ನಾನು ವಯನಾಡಿನ ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತೇನೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button