*ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ?; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಪ್ರಶ್ನೆ*

ಕಳ್ಳತನದ ಸರ್ಕಾರ ಕಳ್ಳತನವನ್ನೇ ಮಾಡುವುದು; ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ ರಾಹುಲ್ ಗಾಂಧಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿಯಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೇಂದ್ರ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದಾರೆ. ಬೆಳಗಾವಿಯ ಯಮಕನಮರಡಿ, ಚಿಕ್ಕೋಡಿ, ಸದಲಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ನಡೆಸಿದರು.
ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಶಾಸಕರನ್ನು ಖರೀದಿ ಮಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಕಳ್ಳತನದ ಸರ್ಕಾರ ಕಳ್ಳತನವನ್ನೇ ಮಾಡುವುದು ಎಂದು ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ವಾಗ್ದಾಳಿ ನಡೆಸಿದರು.
ದೇಶದಲ್ಲಿಯೇ ಅತಿ ಭ್ರಷ್ಟ ಸರ್ಕಾರ ಎಂದರೆ ಬಿಜೆಪಿ ಸರ್ಕಾರ. ಸರ್ಕಾರದ 40% ಕಮಿಷನ್ ಬಗ್ಗೆ ಗುತ್ತಿಗೆದಾರರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದರು. ಆದರೆ ಯಾವುದೇ ಉತ್ತರ ನೀಡಿಲ್ಲ. ಪ್ರಧಾನಿ ಮೋದಿಯವರೇ ಭ್ರಷ್ಟಾಚಾರದ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಪ್ರಶ್ನಿಸಿದರು.
ಪಿಎಸ್ ಐ ನೇಮಕಾತಿ, ಶಿಕ್ಷಕರ ನೇಮಕಾತಿ, ಉಪನ್ಯಾಸಕರ ನೇಮಕಾತಿಯಲ್ಲೂ ಭ್ರಷ್ಟಾಚಾರ. ಪ್ರಧಾನಿ ಮೋದಿ ಉದ್ದದ ಭಾಷಣ ಮಾಡುತ್ತಾರೆ. ಆದರೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲ್ಲ. ಗ್ಯಾಸ್ ಸಿಲಿಂಡರ್ 400 ರೂಪಾಯಿ ಇತ್ತು ಈಗ 1500 ರೂಪಾಯಿ ಆಗಿದೆ. ಲೀಟರ್ ಪೆಟ್ರೋಲ್ 60 ರೂಪಾಯಿ ಇತ್ತು. ಈಗ 100 ರೂ. ಆಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಜನಸಾಮಾನ್ಯರು ಕಣೀರಿಡುತ್ತಿದ್ದಾರೆ. ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿ ಸುಳ್ಳ್ಉ ಭರವಸೆಯನ್ನು ನೀಡಿದರು. ಈಗ ಇದಾವುದರ ಬಗ್ಗೆಯೂ ಪ್ರಧಾನಿ ಮೋದಿ ಚಕಾರವೆತ್ತುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿರುವ ಜನರ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಿಲ್ಲ, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತದೆ. ಬಿಜೆಪಿಯಂತೆ
15 ಲಕ್ಷ ಬ್ಯಾಂಕ್ ಖಾತೆಗೆ ಹಾಕುತ್ತೇವೆ ಎಂದು ಸುಳ್ಳು ಭರವಸೆ ನಾವು ಕೊಟ್ಟಿಲ್ಲ, ಈಡೇರಿಸಲು ಸಾಧ್ಯವಾದ ಗ್ಯಾರಂಟಿ ಯೋಜನೆಗಳನ್ನು ಮಾತ್ರ ಘೋಷಿಸಿದೇವೆ. ಈ ಹಿದೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಿದೆ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಕಾಂತ್ರಿಕಾರಿ ಅಭಿವೃದ್ಧಿ ಕೆಲಸ ಮಾಡಲಿದೆ ಐದು ಗ್ಯಾರೆಂಟಿಗಳನ್ನು ಮೊದಲ ಕ್ಯಾಬಿನೆಟ್ ನಲ್ಲಿ ಜಾರಿಗೆ ತರುತ್ತೇವೆ ಬಿಜೆಪಿ ಸರ್ಕಾರ ನಿಮ್ಮಿಂದ ಲೋಟಿ ಮಾಡಿದ ಹಣ ನಿಮಗೆ ವಾಪಸ್ ನೀಡಲು ಹೊರಟಿದ್ದೇವೆ ಎಂದು ಹೇಳಿದರು.
ಬಿಜೆಪಿ ನಾಯಕರು ಭಯೋತ್ಪಾದಕರ ಬಗ್ಗೆ ಮಾತಾಡುತ್ತಾರೆ. ಭಯೋತ್ಪಾದಕರ ಕೃತ್ಯದಿಂದಾದ ನೋವು ಏನು ಎಂಬುದು ನನಗೆ ಗೊತ್ತು. ಭಯೋತ್ಪಾದಕರ ದುಷ್ಕೃತ್ಯಕ್ಕೆ ನನ್ನ ಕುಟುಂಬದ ಇಬ್ಬರನ್ನು ಕಳೆದುಕೊಂಡಿದ್ದೇನೆ ಎಂದರು. ಬಿಜೆಪಿಗೆ 40 ಅಂಕಿ ತುಂಬಾ ಇಷ್ಟಾ ಕಳೆದ ಮೂರು ವರ್ಷದಿಂದ 40 ಅಂಕಿ ಅಂಶಗಳ ಬಗ್ಗೆ ಹೇಳುತಿದ್ದಾರೆ. ಹಾಗಾಗಿ ಅವರಿಗೆ ಬರಿ 40 ಕ್ಷೇತ್ರಗಳಲ್ಲಿ ಗೆಲ್ಲಿಸಿ ಆದರೆ ಕಾಂಗ್ರೆಸ್ ಪಕ್ಷಕ್ಕೆ 150 ಕ್ಷೇತ್ರದಲ್ಲಿ ಗೆಲ್ಲಿಸಬೇಕು ಇಲ್ಲದಿದ್ದರೆ ಮತ್ತೆ ಬಿಜೆಪಿ ಕಳ್ಳತನ ಮಾಡಿ ಸರ್ಕಾರ ರಚನೆ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಸಮಯದಲ್ಲಿ ರಾಜ್ಯಕ್ಕೆ ಭೇಟಿ ನೀಡುತ್ತಾರೆ. ಕನ್ನಡಿಗರ ಕಷ್ಟದ ದಿನಗಳಲ್ಲಿ ಪ್ರಧಾನಿ ಅವರು ಬರಲ್ಲ. ಆದರೆ ಈಗ ಮತ ಕೇಳಲು ಬರುವುದು ವಿಪರ್ಯಾಸ, ಯುವಕರ ಭವಿಷ್ಯದ ಬಗ್ಗೆ ಆಸೆ ತೋರಿಸಿ, ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಯುವಕರಿಗೆ ಉದ್ಯೋಗ ನೀಡುತ್ತೇನೆ ಎಂದು ಹೇಳಿ ಉದ್ಯೋಗ ಸೃಷ್ಟಿ ಮಾಡಲಿಲ್ಲ, ನಾವು ಸುಳ್ಳು ಭರವಸೆ ನಿಡುವುದಿಲ್ಲ, ಅಧಿಕಾರ ನೀಡಿ ನೋಡಿ. 2.5 ಲಕ್ಷ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರ ಅಧಿಕಾರ ಪಡೆದು ದೇಶ, ರಾಜ್ಯವನ್ನು ಲೂಟಿ ಮಾಡುತ್ತಿದೆ. ಭಯೋತ್ಪಾದನೆ ಬಗ್ಗೆ ಮಾತನಾಡುವ ಬಿಜೆಪಿಗರು ಮಾಡಿದ್ದೇನು..? ಇಂತವರ ಭಯೋತ್ಪಾದನೆಯಿಂದ ನನ್ನ ತಂದೆ, ನನ್ನ ಅಜ್ಜಿಯನ್ನು ಕಳೆದುಕೊಂಡಿದ್ದೇನೆ, ಭಯೋತ್ಪಾದನೆಯಿಂದ ನಮ್ಮ ಕುಟುಂಬ, ನಾನು ನೋವು ಅನುಭವಿಸಿದ್ದೇವೆ ಎಂದರು.
ಬಿಜೆಪಿ ಸರ್ಕಾರ ಜನರಿಂದ ಲೂಟಿ ಮಾಡಿದ ಹಣವನ್ನು, ರೈತರ, ಜನರ, ಬಡವರಿಗೆ ನೀಡುವುದೇ ಕಾಂಗ್ರೆಸ್ ಪಕ್ಷದ ಗುರಿಯಾಗಿದ್ದು, ಅದಕ್ಕಾಗಿಯೇ ನಾವು ಇಂದು ಚುನಾವಣೆ ಮುಂಚೆಯೇ ಐದು ಗ್ಯಾರಂಟಿಗಳನ್ನು ನೀಡಿದ್ದು, ನಾನು ಅಧಿಕಾರಕ್ಕೆ ಬಂದ ಐದು ದಿನಗಳಲ್ಲಿ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ಅವುಗಳಿಂದ ಜನ ಕಲ್ಯಾಣ ಹೇಗೆ ಆಗುತ್ತೆ ಎಂಬುವುದನ್ನು ನೀವೇ ಮುಂದೆ ನೋಡುವಿರಿ ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿಯವರು ಜನ ಸಾಮಾನ್ಯರ, ಹಿಂದುಳಿದವರು ಸೇರಿದಂತೆ ಎಲ್ಲ ವರ್ಗದವರ ಬಗ್ಗೆ ಕಳಕಳಿ ಇರುವ ನಾಯಕ. ಇಂತ ನಾಯಕ, ನಿಮ್ಮ ಸಮಸ್ಯೆ ಗೆ ಸದಾ ಸ್ಪಂದಿಸುವ ಸತೀಶ್ ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕೆಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ಕಳೆದ 3 ಭಾರಿ ಯಮಕನಮರಡಿ ಜನತೆ ನನಗೆ ಆಶೀರ್ವಾದ ಮಾಡಿದ್ದಾರೆ. ಅದಕ್ಕೆ ನಿಮಗೆ ಧನ್ಯವಾದಗಳು, ಈ ಚುನಾವಣೆಯಲ್ಲಿಯೂ ಆಶೀರ್ವಾದ ಮಾಡುತ್ತೀರಿ ಅನ್ನೋ ನಂಬಿಕೆ ನನಗಿದೆ. 15 ವರ್ಷಗಳ ಹಿಂದೆ ಈ ಕ್ಷೇತ್ರ ಹೇಗಿತ್ತು ಅನ್ನೋದು ನಿಮಗೆ ಗೊತ್ತಿದೆ, ಆದರೆ ಈಗ ಎಷ್ಟು ಅಭಿವೃದ್ಧಿ ಹೊಂದಿದೆ ಎಂದು ಎಲ್ಲರನ್ನೂ ಕೇಳಿ. ನಮ್ಮ ವಿರೋಧಿಗಳಿಗೆ ಚಾಲೆಂಜ್ ಮಾಡ್ತೀನಿ, ನಾವು ಈ ಚುನಾವಣೆಯಲ್ಲಿ ಟಾಪ್ ಟೆನ್ ಅಲ್ಲಿ ಆಯ್ಕೆ ಆಗುತ್ತೇನೆ, ಅದಕ್ಕೆ ನಿಮ್ಮ ಗ್ಯಾರಂಟಿ ಬೇಕು ಎಂದರು.
ಈಗಾಗಲೇ ನಾವು ಸರ್ವೇ ಮಾಡಿದ್ದು, ಸರ್ವೇಯಲ್ಲಿ ನಾವೇ ಮುಂದೆ ಇದ್ದೇವೆ, ಇನ್ನೂ ಕೇವಲ ನಾಲ್ಕು ದಿನ ಅಷ್ಟೇ ಸಮಯ ಇದೆ. ನನ್ನನ್ನು ಯಾವ ರೀತಿ ಆಯ್ಕೆಮಾಡಬೇಕೆಂದರೆ ನಮ್ಮ ವಿರೋಧಿಗಳು ಇನ್ನು ಇಪ್ಪತ್ತು ವರ್ಷ ನಮ್ಮ ಹತ್ತಿರ ಬರಬಾರದು ಎಂದರು.
ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿ, ಕ್ಷೇತ್ರದ ಜನರ ಕೆಲಸ, ಕಾರ್ಯ, ಸೇವೆಯನ್ನು ಪ್ರಾಮಾಣಿಕಯಿಂದ ಮಾಡಿದ್ದ ತಂದೆ, ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಮತ್ತೊಮ್ಮೆ ಭಾರಿ ಅಂತರದಿಂದ ಗೆಲ್ಲಿಸಬೇಕು. ವಿರೋಧ ಪಕ್ಷದ ನಾಯಕರು ಚುನಾವಣೆ ಬಂದಾಗ ಅಷ್ಟೇ ನಿಮ್ಮ ಮನೆಗೆ ಬರುತ್ತಾರೆ. ಇಂತಹ ವ್ಯಕ್ತಿಗಳನ್ನು ನಂಬಬೇಡಿ. ರಾಹುಲ್ ಗಾಂಧೀಜಿ ಅವರು ಹೇಳಿದ ಹಾಗೆ ಬಿಜೆಪಿಗೆ 40 ಸೀಟು ಮಾತ್ರ ನೀಡಬೇಕು. ಅದೇ ರೀತಿ ಯಮಕನಮರಡಿಯಲ್ಲಿ ವಿರೋಧ ಪಕ್ಷದವರು 40 ಸಾವಿರ ಮತಗಳನ್ನು ಮೀರಬಾರದು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವ ವೀರಕುಮಾರ್ ಪಾಟೀಲ್, ಬೆಳಗಾವಿ ಉತ್ತರ ಮತಕ್ಷೇತ್ರದ ಅಭ್ಯರ್ಥಿ ಆಸೀಫ್ (ರಾಜು) ಸೇಠ್, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಸುನೀಲ್ ಹಣಮನ್ನವರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ, ಅರುಣ ಕಟಾಂಬಳೆ, ಸಿದ್ದು ಸುಣಗಾರ್, ಸಿದ್ದಿಕ್ ಅಂಕಲಗಿ, ಕಿರಣ ರಜಪೂತ್, ಯಮಕನಮರಡಿ ಮತಕ್ಷೇತ್ರದ ಜಿಪಂ, ತಾಪಂ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು, ಸಾರ್ವಜನಿಕರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ