ನಾನು ಕೇಳಿದ ಸಣ್ಣ ಪ್ರಶ್ನೆಯಿಂದ ಪ್ರಧಾನಿ ರಕ್ಷಿಸಲು ನಡೆಸಲಾದ ಸಂಪೂರ್ಣ ನಾಟಕವಿದು : ರಾಹುಲ್ ಗಾಂಧಿ ವಾಗ್ದಾಳಿ
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಆಕ್ರಮಣ ನಡೆದಿದೆ. ಇದನ್ನು ಪ್ರತಿದಿನ ನಾವು ನೋಡುತ್ತಿದ್ದೇವೆ. ಉದ್ಯಮಿ ಗೌತಮ್ ಅದಾನಿಗೆ ಸೇರಿದ ಹಲವು ಕಂಪನಿಗಳಿವೆ. ಮೋದಿ-ಅದಾನಿ ನಡುವಿನ ವ್ಯವಹಾರ ಬಹಳ ಹಿಂದಿನಿಂದ ಇದೆ. ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗಿನಿಂದಲೂ ಅವರ ನಡುವಿನ ವ್ಯವಹಾರ ಇದೆ . ಈ ಬಗ್ಗೆ ಫ್ಲೈಟ್ ನಲ್ಲಿ ಫೋಟೋ ಕೂಡ ಬಿಡುಗಡೆ ಮಾಡಿದ್ದೇನೆ. ನಾನು ಎರಡು ಬಾರಿ ಪತ್ರ ಬರೆದರೂ ಯಾವುದೇ ಉತ್ತರ ಬಂದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ನಾನು ಯಾರನ್ನೂ ಅವಮಾನಿಸಿಲ್ಲ, ಯಾವ ಜಾತಿಯನ್ನೂ ಗುರಿಯಾಗಿಸಿ ಮಾತನಾಡಿಲ್ಲ. ನಾನು ಭಾರತದ ಧ್ವನಿಯಾಗಿ ಹೋರಾಡುತ್ತಿದ್ದೇನೆ. ಯಾವ ಬೆಲೆತೆರಲು ಕೂಡ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಸಂಸತ್ ನಲ್ಲಿ ನಾನು ಮಾಡಿದ ಭಾಷಣವನ್ನು ಅಳಿಸಲಾಯಿತು. ಬಳಿಕ ನಾನು ಲೋಕಸಭಾ ಸ್ಪೀಕರ್ ಅವರಿಗೆ ವಿವರವಾದ ಉತ್ತರ ಬರೆದೆ. ನಾನು ವಿದೇಶಿ ಸಹಾಯ ಕೇಳಿದ್ದೇನೆ ಎಂದು ಕೆಲ ಸಚಿವರು ನನ್ನ ವಿರುದ್ಧ ಆರೋಪ ಮಾಡಿದರು. ಆದರೆ ನಾನು ಅಂತಹ ಯಾವ ಸಹಾಯವನ್ನೂ ಕೇಳಿಲ್ಲ ಎಂದರು.
ನಾನು ಅದಾನಿ ಬಗ್ಗೆ ಒಂದು ಪ್ರಶ್ನೆ ಕೇಳಿದ್ದೆ. ನಾನು ಪ್ರಶ್ನೆ ಮಾಡುವುದನ್ನು ಮುಂದುವರೆಸುತ್ತೇನೆ. ಪ್ರಜಾಪ್ರಭುತ್ವಕ್ಕಾಗಿ ದೇಶದಲ್ಲಿ ಹೋರಾಡುತ್ತೇನೆ. ಅದಾನಿ ಶೆಲ್ ಕಂಪನಿಗಳಿಗೆ 20,000 ಕೋಟಿ ರೂಪಾಯಿ ಯಾರದ್ದು? ಎಂದು ನಾನು ಕೇಳಿದ್ದೆ. ನಾನು ಕೇಳಿದ ಸಣ್ಣ ಪ್ರಶ್ನೆಯಿಂದ ಪ್ರಧಾನಿಯವರನ್ನು ರಕ್ಷಿಸಲು ನಡೆಸಲಾದ ಸಂಪೂರ್ಣ ನಾಟಕವಿದು. ಈ ಬೆದರಿಕೆ, ಅನರ್ಹತೆ ಇದಕ್ಕೆ ಹೆದರುವುದಿಲ್ಲ. ಜೈಲು ಶಿಕ್ಷೆಗೂ ಸಿದ್ಧ. ನನಗೆ ಸತ್ಯವನ್ನು ಹೊರತುಪಡಿ ಯಾವುದರಲ್ಲೂ ಆಸಕ್ತಿ ಇಲ್ಲ. ನಾನು ಸತ್ಯವನ್ನು ಮಾತ್ರ ಮಾತನಾಡುತ್ತೇನೆ. ಅದು ಮಾತ್ರ ನನ್ನ ಕೆಲಸ. ನನ್ನನ್ನು ಅನರ್ಹಗೊಳಿಸಲಿ, ಬಂಧಿಸಲಿ ಸತ್ಯವನ್ನು ಹೇಳುವುದನ್ನು ಬಿಡಲ್ಲ. ಈ ದೇಶ ನನಗೆ ಎಲ್ಲವನ್ನೂ ಕೊಟ್ಟಿದೆ. ಅದಕ್ಕಾಗಿ ನಾನು ಸತ್ಯವನ್ನು ಹೇಳುತ್ತೇನೆ. ಪ್ರಜಾಪ್ರಭುತ್ವ ರಕ್ಷಣೆಗಾಗಿ ಹೋರಾಡುತ್ತೇನೆ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ