ಜನ್ಮದಿನದ ನಿಮಿತ್ತ ವಿಶೇಷ ಲೇಖನ
ಯುವ ನಾಯಕ ಹಾಗೂ ಸತೀಶ ಶುಗರ್ಸ ನಿರ್ದೇಶಕ ರಾಹುಲ ಜಾರಕಿಹೊಳಿ ಅವರ ಹುಟ್ಟುಹಬ್ಬದ ನಿಮ್ಮಿತ್ತ ಅ. ೨ರಿಂದ ಮೂರುದಿನಗಳ ಕಾಲ ಸತೀಶ ಜಾರಕಿಹೊಳಿ ಅಭಿಮಾನಿ ಬಳಗ, ರಾಹುಲ ಜಾರಕಿಹೊಳಿ ಅಭಿಮಾನಿ ಬಳಗ ಮತ್ತು ಪ್ರಿಯಾಂಕಾ ಅಕ್ಕಾ ಅಭಿಮಾನಿ ಬಳಗದ ವತಿಯಿಂದ ರಾಹುಲೋತ್ಸವ ಹಮ್ಮಿಕೊಳ್ಳಲಾಗಿದೆ.
ಕರದಂಟು ನಗರಿ ಗೋಕಾಕ ಎಂದರೆ ತಟ್ಟನೇ ನೆನಪಿಗೆ ಬರುವುದು ಒಂದು ಗೋಕಾಕ ಫಾಲ್ಸ್. ಇನ್ನೊಂದು ಪ್ರತಿಷ್ಠಿತ ಜಾರಕಿಹೊಳಿ ಕುಟುಂಬ. ರಾಜ್ಯ ರಾಜ್ಯಕಾರಣದ ಮೇಲೆ ಪ್ರಬಲ ಹಿಡಿತ ಹೊಂದಿರುವ ಈ ಕುಟುಂಬ ರಾಜಕೀಯ ಪಕ್ಷಕ್ಕಿಂತ ವೈಯಕ್ತಿಕವಾಗಿ ವರ್ಚಸ್ಸು ಹೊಂದಿದೆ.
ಈ ಕುಟುಂಬದ ಕೊಂಡಿ ಯುವ ನಾಯಕ, ಹೊಸ ಆಶಾಕಿರಣ ರಾಹುಲ್ ಜಾರಕಿಹೊಳಿ. ಸತೀಶ ಜಾರಕಿಹೊಳಿ ಫೌಂಡೇಷನ್ ಮೂಲಕ ನೊಂದ ಜೀವಗಳಿಗೆ ಭರವಸೆ ಹೊಂಬೆಳಕು ತೋರುತ್ತಿದ್ದಾರೆ. ಸಮಾಜಮುಖಿ ಸತೀಶ ಜಾರಕಿಹೊಳಿ ಫೌಂಡೇಷನ್‌ನನ್ನು ಹುಟ್ಟುಹಾಕಿ ಈ ಮೂಲಕ ಮನೆ ಮನೆಗಳಲ್ಲಿ ಮಾತಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ಪುತ್ರನಾಗಿರುವ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ತಮ್ಮ ತಂದೆ ತೋರಿಸಿಕೊಟ್ಟಿರುವ ಹಾದಿಯಲ್ಲಿ ನಡೆಯುತ್ತಿದ್ದಾರೆ.
ತಮ್ಮ ಸಮಾಜ ಸೇವೆಯ ಮೂಲಕ ಎಲ್ಲೆಡೆ ಅಪಾರ ಬೆಂಬಲಿಗರ ಪಡೆಯನ್ನು ಸಂಪಾದಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಮಾಜದಲ್ಲಿ ಬೇರೂರಿರುವ ಅನಿಷ್ಟ ಪಿಡುಗುಗಳಿಗೆ ಇತಿಶ್ರೀ ಹಾಡಲು ಪಣತೊಟ್ಟರು. ಸಮಾಜದಲ್ಲಿ ಅಂಧ ಶ್ರದ್ಧೆ ಹೋಗಲಾಡಿಸಿ, ಜ್ಞಾನಯುಕ್ತ ಸಮಾಜ ನಿರ್ಮಾಣ ಕಾಯಕದಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.
ಸೇವೆಗಾಗಿ ಪ್ರತಿಷ್ಠಾನ:
ತಂದೆಯ ಮಾರ್ಗದರ್ಶನದಲ್ಲಿ ಅವರ ಜತೆ ಜತೆಯಲ್ಲೇ ನಿಸ್ವಾರ್ಥ ಸಮಾಜ ಸೇವೆಯನ್ನುನಡೆಸಲು ರಾಹುಲ್ ಜಾರಕಿಹೊಳಿ ಅವರು ಸತೀಶ ಜಾರಕಿಹೊಳಿ ಫೌಂಡೇಷನ್ ಆರಂಭಿಸಿದರು. ಅಭಿಮಾನಿಗಳಿಂದ ರಾಹುಲ್ ಅಣ್ಣ, ಸಾಹುಕಾರ ಎಂದೇ ಕರೆಸಿಕೊಳ್ಳುತ್ತಿರುವ ರಾಹುಲ ಜಾರಕಿಹೊಳಿ ಸಮಾಜ ಪರಿವರ್ತನಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದೂರ ದೂರುಗಳಿಂದ ಸಂಕಷ್ಟ ಹೊತ್ತು ಬರುವವರ ಪಾಲಿಕೆ ಆಶಾಕಿರಣ. ಪ್ರತಿಷ್ಠಾನದ ವತಿಯಿಂದ ಹಲವು ಸಾಮಾಜಿಕ ಚಟುಟಿಕೆ ನಡೆಸುತಿದ್ದಾರೆ. ಈ ಕಾರ್ಯಕ್ಕೆ ಯಾರಿಂದಲೂ ಒಂದು ರೂಪಾಯಿ ದೇಣಿಗೆ ಸ್ವೀಕರಿಸಿಲ್ಲ ಎನ್ನುವುದೇ ಇವರ ವೈಶಿಷ್ಟ್ಯ.
ಸತೀಶ ಜಾರಕಿಹೊಳಿ ಫೌಂಡೇಷನ್ ತನ್ನ ಕಾರ್ಯಕ್ಷೇತ್ರವನ್ನು ರಾಜ್ಯಾದ್ಯಂತ ಹೊಂದಿದೆ. ಕಳೆದ ಎರಡು ವರ್ಷಗಳಿಂದ ಶಿಕ್ಷಣ, ಆರೋಗ್ಯ, ಸಾಹಿತ್ಯ, ಕಲೆ,ಸಂಸ್ಕೃತಿ, ಕ್ರೀಡೆ ಸೇರಿದಂತೆ ಎಲ್ಲ ರಂಗಗಳಲ್ಲಿನ ಸಾಧಕರನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತ ಬಂದಿದೆ. ಸತೀಶ ಜಾರಕಿಹೊಳಿ ಫೌಂಡೇಷನ್ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ಪುತ್ರ ರಾಹುಲ ಜಾರಕಿಹೊಳಿ ಸಾರಥ್ಯದಲ್ಲಿ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಮಹಾಮಾರಿ ಕೊರೋನಾ ಸಂಕಷ್ಟ ಸಂದರ್ಭದಲ್ಲಿಯೂ ಸತೀಶಜಾರಕಿಹೊಳಿ ಫೌಂಡೇಶನ್ ಸಮಾಜ ಸೇವೆ ಮಾಡಿ, ನೊಂದವರ ಕಣ್ಣೀರು ಒರೆಸುವ ಕಾರ್ಯವನ್ನು ಮಾಡಿತ್ತಲ್ಲದೇ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ಧಾನ್ಯ ಕಿಟ್, ಆರ್ಥಿಕ ನೆರವನ್ನು ನೀಡಿ ಮಾನವೀಯ ಕಾರ್ಯವನ್ನು ಮಾಡುತ್ತ ಬಂದಿದೆ.
ಕೋವಿಡ್-೧೯ನ ನಂತರವೂ ಸತೀಶ ಫೌಂಡೇಷನ್ ಸಮಾಜ ಸೇವೆಯಲ್ಲಿ ಮತ್ತಷ್ಟು ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಜನ ಸೇವೆಯೇ ಜನಾರ್ಧನ ಸೇವೆ ಎನ್ನುತ್ತ ಸೇವೆ ಮಾಡುತ್ತಿದೆ. ಸತೀಶ ಫೌಂಡೇಷನ್ ಇಷ್ಟು ಚುರುಕಾಗಿ ಕೆಲಸ ಮಾಡುತ್ತಿರುವ ಹಿಂದೆ ರಾಹುಲ್ ಜಾರಕಿಹೊಳಿ ಅವರ ಸಮಾಜಿಕ ಕಳಕಳಿ, ಪರಿಶ್ರಮವೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.
ಬೆಳಗಾವಿ ಜಿಲ್ಲೆಯ ಸಮಾಜದ ಎಲ್ಲ ಸಮುದಾಯದ ಜನರ ಮಠ, ಮಂದಿರ, ಚರ್ಚ್, ದರ್ಗಾ, ಸಮುದಾಯ ಭವನಗಳಿಗೆ ಉಚಿತವಾಗಿ ಕುರ್ಚಿ, ಸೌಂಡ್ ಸಿಸ್ಟಮ್ ವಿತರಿಸುತ್ತ ಬಂದಿದೆ. ಆಯಾ ಗ್ರಾಮಗಳಲ್ಲಿ, ನಗರಗಳಲ್ಲಿನ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಕಾರ್ಯಕ್ರಮಗಳಿಗೆ ನೀಡುತ್ತಾ ಬರಲಾಗುತ್ತಿದೆ.
ಗ್ರಾಮೀಣ ಪ್ರದೇಶದ ಕ್ರೀಡಾ ಪಟುಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅವರ ಪ್ರತಿಭೆಯನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುತ್ತ ಬಂದಿದೆ. ಸತೀಶ ಫೌಂಡೇಶನ್ ಕ್ರೀಡೆಗೆ ಅದರಲ್ಲೂ ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತ ಬಂದಿದೆ. ಕಬಡ್ಡಿ, ಕುಸ್ತಿ ಪಂದ್ಯಾವಳಿಗೆ ಉಚಿತವಾಗಿ ಮ್ಯಾಟ್ ಒದಗಿಸಲಾಗುತ್ತಿದೆ. ಘಟಪ್ರಭಾ ಡಾ.ನಾ.ಸು.ಹರ್ಡೇಕರ ಸೇವಾದಳದ ಅಡಿ ಸಾವಿರಾರು ಯುವಕರಿಗೆ ಉಚಿತವಾಗಿ ಸೈನಿಕ, ಪೊಲೀಸ್ ತರಬೇತಿ ನೀಡಲಾಗುತ್ತದೆ. ಕೆಎಎಸ್, ಐಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ತರಬೇತಿ ಶಿಬಿರಗಳನ್ನು ಮಾಡಲಾಗುತ್ತಿದೆ. ಅಲ್ಲದೇ, ಅಡುಗೆ ತಯಾರಿಕಾ ತರಬೇತಿ, ಕಲೆ, ಸಂಗೀತ, ಬೇರೆ ಬೇರೆ ತರಬೇತಿಗಳನ್ನು ನೀಡಲಾಗುತ್ತಿದೆ. ಚಿಕ್ಕ ನಾಟಕಗಳು, ಸಂಗೀತ, ನೃತ್ಯ, ಹಾಡುಗಳಿಗೆ ಪ್ರೋತ್ಸಾಹಿಸಲಾಗುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು, ಪಠ್ಯಪುಸ್ತಕ ವಿತರಿಸಲಾಗುತ್ತಿದೆ. ಅಲ್ಲದೇ, ಸಾಮಾಜಿಕ ಜಾಲತಾಣಗಳ ಮೂಲಕವು ಕೂಡ ಯುವಕರಿಗೆ ತರಬೇತಿ ನೀಡಲಾಗುತ್ತಿದೆ.
ಯುವಕರ ಬದುಕು ಕಟ್ಟುವುದೇ ನಮ್ಮ ಗುರಿ
ನಮ್ಮ ಯುವಕರು ದೇಶವನ್ನು ರಕ್ಷಣೆ ಮಾಡುವ ಸೇನೆ ಮತ್ತು ಸಮಾಜದಲ್ಲಿ ಜನರನ್ನು ರಕ್ಷಣೆ ಮಾಡುವ ಪೊಲೀಸ್ ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೌಕರಿಗಳನ್ನು ಹಿಡಿದು ದೇಶ ಮತ್ತು ಸಮಾಜ ಸೇವೆ ಮಾಡುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡು ತಮ್ಮ ಕುಟುಂಬಗಳನ್ನು ಉತ್ತಮ ರೀತಿಯಲ್ಲಿ ನೋಡಿಕೊಂಡರೆ ಸತೀಶ ಜಾರಕಿಹೊಳಿ ಫೌಂಡೇಷನ್ ಮೂಲಕ ಮಾಡುತ್ತಿರುವ ಸಮಾಜ ಕಟ್ಟುವ ಕಾರ್ಯದ ಉದ್ದೇಶ ಈಡೇರುತ್ತದೆ, ಯುವಜನರನ್ನು ಉತ್ತಮ ಮಾರ್ಗದಲ್ಲಿ ಸಾಗುವಂತೆ ಮಾಡುವ ನಮ್ಮ ಕೆಲಸಕ್ಕೆ ಮತ್ತಷ್ಟು ಹುಮ್ಮಸ್ಸು ಬಂದಂತಾಗುತ್ತದೆ ಎನ್ನುತ್ತಾರೆ ಯುವ ನಾಯಕ ರಾಹುಲ ಜಾರಕಿಹೊಳಿ ಅವರು.
ಘಟಪ್ರಭದ ಸೇವಾದಳದಲ್ಲಿ ಆಸಕ್ತ ಯುವಕರಿಗೆ ಹತ್ತು ದಿನಗಳ ಕಾಲ ನಡೆಯುವ ಎರಡನೇ ಬ್ಯಾಚಿನ ಉಚಿತ ಸೇನಾ ಮತ್ತು ಪೊಲೀಸ್ ಕಾನ್ಟೇಬಲ್ ತರಬೇತಿ ಶಿಬಿರ ನಡೆಸುತ್ತ ಬರಲಾಗುತ್ತಿದೆ. ಸೇನೆ ಸೇರಿ ದೇಶಕ್ಕಾಗಿ ಸೇವೆ ಸಲ್ಲಿಸುವುದು ಹಾಗೂ ಪೋಲಿಸ್ ಇಲಾಖೆಗೆ ಸೇರುವುದು ನಮ್ಮ ಯುವಕರಿಗೆ ಹೆಮ್ಮೆಯ ವಿಷಯವಾಗಿದೆ. ಅದಕ್ಕಾಗಿ ಅವರು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಅವರ ಗುರಿ ಸಾಧನೆಗೆ ಸತೀಶ ಜಾರಕಿಹೊಳಿ ಫೌಂಡೇಶನ್ ಬೆನ್ನೆಲುಬಾಗಿ ಕೆಲಸ ಮಾಡಲಿದೆ ಇದರ ಸದುಪಯೋಗವನ್ನು ಎಲ್ಲ ಯುವಕರು ಪಡೆದುಕೊಳ್ಳುವಂತಾಗಬೇಕು, ಇಲ್ಲಿ ತರಬೇತಿ ಪಡೆದ ಪ್ರತಿಯೊಬ್ಬರಿಗೂ ಜೀವನದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸುತ್ತಾರೆ ರಾಹುಲ್.
ತಂದೆಗೆ ತಕ್ಕ ಮಕ್ಕಳಾದ ರಾಹುಲ್- ಪ್ರಿಯಾಂಕಾ
ತಂದೆ ಸತೀಶ ಜಾರಕಿಹೊಳಿ ಅವರಿಗೆ ತಕ್ಕ ಮಕ್ಕಳಾಗಿರುವ ಪ್ರಿಯಾಂಕಾ ಮತ್ತು ರಾಹುಲ್ ಕೆಲವೇ ಕೆಲ ದಿನಗಳಲ್ಲೇ ಜಿಲ್ಲೆಯ ಜನತೆಯ ನೆಚ್ಚಿನ ಯುವ ನಾಯಕರಾಗಿ ಹೊರಹೊಮ್ಮಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಹುಲ್ ಜಾರಕಿಹೊಳಿ ಅವರ ಜನಪ್ರಿಯತೆಯಂತೂ ಹೇಳತೀರದು. ಏಕೆಂದರೆ, ಜಿಲ್ಲೆಯಾದ್ಯಂತ ರಾಹುಲ ಜಾರಕಿಹೊಳಿ ಅಭಿಮಾನಿ ಬಗಳ ಹುಟ್ಟಿಕೊಂಡಿರುವುದು ಅವರ ಜನಪ್ರಿಯತೆಗೆ ಸಾಕ್ಷಿ.
ಪ್ರಿಯಾಂಕಾ ಜಾರಕಿಹೊಳಿ ಅವರು ವಿವಿಧ ಮಹಿಳಾ ಸಂಘ- ಸಂಸ್ಥೆಗಳೊಂದಿಗೆ ಒಡನಾಟ ಹೊಂದಿದ್ದು, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಅಲ್ಲದೇ, ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದು, ಇವರು ಕೂಡ ಸಹೋದರನಷ್ಟೇ ಜನಪ್ರಿಯತೆ ಹೊಂದಿದ್ದಾರೆ. ಬೇಸಿಗೆ ಕಾಲದಲ್ಲಿ ಹಕ್ಕಿಗಳಿಗೆ ಕುಡಿಯುವ ನೀರಿನ ಅನುಕೂಲತೆ ಮಾಡುವಂತೆ ಜನರಲ್ಲಿ ಅರಿವು ಮೂಡಿಸಿದ್ದಾರೆ. ಅಲ್ಲದೇ, ತಾವು ಕೂಡ ಅಲ್ಲಲ್ಲಿ ಹಕ್ಕಿಗಳಿಗೆ ನೀರಿನ ವ್ಯವಸ್ಥೆಯನ್ನು ಮಾಡಿದ್ದಾರೆ. ಈ ಮೂಲಕ ರಾಹುಲ್ ಮತ್ತು ಪ್ರಿಯಾಂಕಾ ಹಕ್ಕಿ, ಪ್ರಾಣಿ ಪ್ರಿಯರ ಮೆಚ್ಚೆಗೆಗೂ ಪಾತ್ರರಾಗಿದ್ದಾರೆ.
ತಂದೆ ಮಾರ್ಗದಲ್ಲಿಯೇ ರಾಹುಲ್ ನಡಿಗೆ:
ಬೆಳಗಾವಿ ಸೇರಿದಂತೆ ರಾಜ್ಯದಲ್ಲಿಯೇ ಸತೀಶ ಜಾರಕಿಹೊಳಿ ಅವರು ಅತ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದು, ಸಮಾಜ ಸೇವೆ ಮೂಲಕ ದೀನ ದಲಿತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ, ನೊಂದ ಜೀವಗಳಿಗೆ ಭರವಸೆ ಹೊಂಬೆಳಕಾಗಿದ್ದಾರೆ. ೯೦ರ ದಶಕದಲ್ಲಿ ತಂದೆ ಸತೀಶ ಜಾರಕಿಹೊಳಿ ಅವರು ಸಮಾಜ ಸೇವೆಗೆ ಬಂದಿದ್ದು, ಶೋಷಿತರ ಪರ ದನಿಯಾಗಿದ್ದರು. ಸಾಮಾಜಿಕ ತಳಹದಿ ತತ್ವದಡಿ ಅಧಿಕಾರ ವೀಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಈ ಮೂಲಕ ಎಲ್ಲ ಸಮುದಾಯಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೆಲ್ಲರನ್ನೂ ಒಂದೇ ವೇದಿಕೆಗೆ ಕರೆದುಕೊಂಡು ಹೋಗುವುದು ಇತಿಹಾಸ. ಪ್ರತಿ ಜಿಲ್ಲೆಯಲ್ಲಿಯೂ ಸತೀಶ ಅಭಿಮಾನ ಬಳಗವು ಸತೀಶ ಸೂಚಿಸಿದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಈಗ ಸತೀಶ ಅವರ ಪುತ್ರ ರಾಹುಲ್ ಕೂಡ ತಂದೆಯಂತೆ ಬಡವರ ಕಷ್ಟಗಳಿಗೆ ಸ್ಪಂದಿಸುತ್ತ ಸಮಾಜಮುಖಿ ಕಾರ್ಯಗಳಿಗೆ ಮುಂಚೂಣಿಯಾಗಿ ನಿಂತಿರುವುದು ಸತೀಶ ಅವರಿಗೆ ಆನೆಬಲ ಬಂದಿದೆ. ಹಾಗೆಯೇ ಜಾರಕಿಹೊಳಿ ಕುಟುಂಬದ ಮೇಲಿನ ಗೌರವ ಇಮ್ಮಡಿಗೊಳಿಸುವಂತೆ ಮಾಡಿದೆ.
ಹಸಿದ ಹೊಟ್ಟೆಗಳ ತುಂಬಿಸಿದ ಅನ್ನದಾತ:
ಪ್ರವಾಹ ಸಂಕಷ್ಟಕ್ಕೆ ಸತೀಶ ಜಾರಕಿಹೊಳಿ ಕಾಲಿಗೆ ಚಕ್ರಕಟ್ಟಿಕೊಂಡು ಜಿಲ್ಯಾದ್ಯಂತ ತಿರುಗಿ ಸಂತ್ರಸ್ತರಿಗೆ ಸಹಾಯ ಹಸ್ತ ಹಾಗೂ ಅಗತ್ಯ ಮೂಲ ಸೌಕರ‌್ಯಗಳಿಗೆ ವ್ಯವಸ್ಥೆ ಮಾಡಿಸಿದ್ದರು. ತಂದೆಯ ಆಸೆಯಂತೆ ರಾಹುಲ್ ಕೂಡ ಜನರ ಕಷ್ಟಗಳಿಗೆ ಸ್ಪಂದಿಸಿ ಸಹಾಯ ಹಸ್ತ ನೀಡಿ ಬದುಕುವ ಭರವಸೆ ಹೆಚ್ಚಿಸಿದ್ದರು. ಹಾಗೆಯೇ ಕೋವಿಡ್ ಅಲೆಗೆ ಕೂಲಿ ಕಾರ್ಮಿಕರು ಸೇರಿದಂತೆ ದುಡಿದು ತಿನ್ನುವ ವರ್ಗದ ಜನರಿಗೆ ಮಾನಸಿಕಸ್ಥೈರ್ಯ ತುಂಬುವುದರೊಂದಿಗೆ ಆತ್ಮಬಲ ಹೆಚ್ಚಿಸಿರುವುದು ಎಲ್ಲರ ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಅತಿವೃಷ್ಟಿಯಿಂದ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ವೈಯಕ್ತಿಕವಾಗಿ ನೆರವಿನ ಹಸ್ತ ಚಾಚಿದ್ದಲ್ಲದೇ ಹಸಿದ ಹೊಟ್ಟೆಗಳಿಗೆ ಅನ್ನ, ಆಸರೆ ನೀಡಿ ಅನ್ನದಾತರೆಂದಿನಿಸಿದ್ದಾರೆ.
ಸಹೋದರಿಯೇ ಬೆನ್ನೆಲುಬು:
ಜಿಲ್ಲೆಯಲ್ಲಿ ೨೦೧೯ರಲ್ಲಿ ಉಂಟಾದ ಪ್ರವಾಹದ ಸಂದರ್ಭದಲ್ಲಿ ರಾಹುಲ್ ಅವರು ಹುಕ್ಕೇರಿ, ಗೋಕಾಕ, ಬೆಳಗಾವಿ, ಮೂಡಲಗಿ, ಅಥಣಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ತೆರಳಿ ಪ್ರವಾಹ ಸಂತ್ರಸ್ತರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಲ್ಲದೇ ಅಗತ್ಯ ಆಹಾರ ಕಿಟ್‌ಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ರಾಹುಲ್ ಸಾಮಾಜಿಕ ಕಾರ್ಯಗಳಿಗೆ ಸಹೋದರಿ ಪ್ರಿಯಾಂಕಾ ಜಾರಕಿಹೊಳಿ ಅವರು ಬೆನ್ನೆಲುಬಾಗಿ ನಿಂತು ಸಹೋದರ ಕೆಲಸ ಕಾರ್ಯಗಳನ್ನು ಯಶಸ್ವಿಗೊಳಿಸುತ್ತಿದ್ದಾರೆ.
ಮೂರು ದಿನ ರಾಹುಲೋತ್ಸವ
ಯುವ ನಾಯಕ ಹಾಗೂ ಸತೀಶ ಶುಗರ್ಸ ನಿರ್ದೇಶಕ ರಾಹುಲ ಜಾರಕಿಹೊಳಿ ಅವರ ಹುಟ್ಟುಹಬ್ಬದ ನಿಮ್ಮಿತ್ತ ಅ. ೨ರಿಂದ ಮೂರುದಿನಗಳ ಕಾಲ ಸತೀಶ ಜಾರಕಿಹೊಳಿ ಅಭಿಮಾನಿ ಬಳಗ, ರಾಹುಲ ಜಾರಕಿಹೊಳಿ ಅಭಿಮಾನಿ ಬಳಗ ಮತ್ತು ಪ್ರಿಯಾಂಕಾ ಅಕ್ಕಾ ಅಭಿಮಾನಿ ಬಳಗದ ವತಿಯಿಂದ ರಾಹುಲೋತ್ಸವ ಹಮ್ಮಿಕೊಳ್ಳಲಾಗಿದೆ.
ಅ.೨ ರಂದು ಬೆಳಗಾವಿಯ ಕೆಪಿಟಿಸಿಎಲ್ ಸಭಾಭವನದಲ್ಲಿ, ಅ. ೩ ರಂದು ಯಮನಕಮರಡಿಯ ಅಲದಾಳ ಗೆಸ್ಟ್‌ಹೌಸ್‌ದಲ್ಲಿಹಾಗೂ ಅ. ೪ ರಂದು ಗೋಕಾಕದ ಹಿಲ್ ಗಾರ್ಡನ್‌ದಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯಲಿವೆ. ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಶುಭಾಶಯ ಮಹಾಪೂರ
ಅಕ್ಟೋಬರ್ ೨ ರಂದು ರಾಹುಲ್ ಜಾರಕಿಹೊಳಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು ಶುಭ ಹಾರೈಕೆಯ ಮಹಾಪೂರವೇ ಹರಿದುಬರುತ್ತಿದೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅವರ ಅಭಿಮಾನಿಗಳು, ಹುಟ್ಟುಹಬ್ಬದ ಶುಭಕೋರಿರುವ ಬೃಹತ್ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ