Kannada NewsLatest

ರಾಹುಲ್‌ ಜಾರಕಿಹೊಳಿ ಭವಿಷ್ಯದ ಆಶಾಕಿರಣವಾಗಲಿ; ಶ್ರೀ ಪ್ರಭುಚನ್ನಬಸವ ಮಹಾಸ್ವಾಮೀಜಿ ಹಾರೈಕೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಾರಕಿಹೊಳಿ ಮನೆತನ ದೀನ-ದಲಿತ, ದುರ್ಬಲ ವರ್ಗದವರು ಸೇರಿದಂತೆ ಎಲ್ಲಾ ಸಮಾಜದ ನೊಂದವರಿಗೆ ಆಶಾಕಿರಣವಾಗಿದ್ದು, ಈಗ ಅದೇ ಮನೆತನದ ಯುವ ನಾಯಕ ರಾಹುಲ್‌ ಸತೀಶ್‌ ಜಾರಕಿಹೊಳಿಯವರು ಸಾಮಾಜಿಕ ಕಾರ್ಯಾದಲ್ಲಿ ಪಾಲ್ಗೊಂಡು, ರಾಜಕೀಯವಾಗಿ ಬೆಳೆಯುತ್ತಿರುವುದು ನಿಮ್ಮೆಲ್ಲರಿಗೂ ಹೆಮ್ಮೆಯ ವಿಚಾರ ಎಂದು ಅಥಣಿ ಮೋಟಗಿ ಮಠದ ಪೂಜ್ಯ ಶ್ರೀ ಪ್ರಭುಚನ್ನಬಸವ ಮಹಾಸ್ವಾಮೀಜಿ ಹೇಳಿದರು.

ನಗರದ ಕೆಪಿಟಿಸಿಎಲ್‌ ಸಭಾಂಗಣದಲ್ಲಿ ಅಭಿಮಾನಿಗಳು ಹಮ್ಮಿಕೊಂಡಿದ್ದ ರಾಹುಲ್‌ ಜಾರಕಿಹೊಳಿ ಅವರ 24ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಅವರು, ರಾಹುಲ್‌ ಜಾರಕಿಹೊಳಿಯವರು ಈ ನಾಡಿನ ಭವಿಷ್ಯದ ಆಶಾಕಿರಣವಾಗಲಿ ಎಂದು ಹರಿಸಿದರು.

ಬುದ್ದ, ಬಸವಣ್ಣ, ಡಾ. ಬಿ.ಆರ್.‌ ಅಂಬೇಡ್ಕರ್‌ ಅವರನ್ನು ಸ್ಮರಿಸುತ್ತಾ, ಸ್ವಾತಂತ್ರ್ಯ ಸಂಗ್ರಾಮ ಎಂದಾಗ ಮಹಾತ್ಮಾ ಗಾಂಧೀಜಿ, ತಬ್ಬಲಿಗಳ ಕೂಗು ಕೇಳಿದಾಗ ಮದರ್‌ ತೆರೇಸಾ, ಧೈಯ್ಯ-ದಾಸೋಹ ನೆನಪಾದಾಗ ಬಸವಣ್ಣ, ಸಂವಿಧಾನ, ಸೇವೆ, ಸಮಬಾಳು ಎಂದಾಗ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರು ನೆನಪು ಆಗುತ್ತಾರೆ. ಆದರೆ ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಆಧುನಿಕ ಕಾಲದಲ್ಲಿ ಸತೀಶ್‌ ಜಾರಕಿಹೊಳಿ ಅವರು ನೆನಪು ಆಗುತ್ತಾರೆ. ಹೀಗಾಗಿ ಅವರಲ್ಲಿ ಇನ್ನಷ್ಟು ಶಕ್ತಿಯನ್ನು ನೀವು ತುಂಬಬೇಕೆಂದರು.

ಯುವ ನಾಯಕ ರಾಹುಲ್‌ ಜಾರಕಿಹೊಳಿ ಮಾತನಾಡಿ, ಕಳೆದ ವರ್ಷ ಜನ್ಮದಿನ ಕಾರ್ಯಕ್ರಮದಲ್ಲಿ ಸತೀಶ್‌ ಶುಗ​ರ್ಸ್‌ ಮತ್ತು ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ವತಿಯಿಂದ 1 ಕೋಟಿ ರೂ. ಸಮಾಜ ಸೇವೆಗೆ ಮೀಸಲಿಡಲಾಗುವುದು ಎಂದು ಹೇಳಲಾಗಿತ್ತು. ಅದರಂತೆಯೇ ಈ ಹಣದಲ್ಲಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಕ್ರೀಡಾ ಸಾಮಗ್ರಿಗಳು, ವಿಜ್ಞಾನ ಸಲಕರಣೆಗಳು ನೀಡಿ ಇನ್ನಿತರ ಸಾಮಾಜಿಕ ಕಾರ್ಯಗಳನ್ನು ಮಾಡಲಾಗಿದೆ. ಅಲ್ಲದೇ ಸಮಾಜದಲ್ಲಿ ಶೋಷಿತರಿಗೆ ನ್ಯಾಯ ಒದಗಿಸುವ ಕಲಸ, ಓದುವ ವಿದ್ಯಾರ್ಥಿಗಳಿಗೆ ಪುಸ್ತಕ ನೀಡುವ ಕಾರ್ಯ, ಸಂತ್ರಸ್ತರಿಗೆ ಸಹಾಯ ಹಸ್ತ ಹಾಗೂ ಅಗತ್ಯ ಮೂಲ ಸೌಕರ್ಯಗಳಿಗೆ ವ್ಯವಸ್ಥೆ, ಅತಿವೃಷ್ಟಿಯಿಂದ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ವೈಯಕ್ತಿಕವಾಗಿ ನೆರವಿನ ಹಸ್ತ ಹಾಗೂ ಕ್ರೀಡಾಸಕ್ತರಿಗೆ ಪ್ರೋತ್ಸಾಹ ಹಾಗೂ ಆಟದ ಸಾಮಗ್ರಿಗಳನ್ನು ನೀಡಲಾಗಿದೆ ಎಂದರು.

ತಂದೆಯವರ ಮಾರ್ಗದರ್ಶನದಲ್ಲಿ ಕಳೆದ 3 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದೇನೆ. ಅಭಿಮಾನಿಗಳು ನನ್ನ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿದ್ದಕ್ಕೆ ನಾನು ಚಿರಋುಣಿಯಾಗಿದ್ದೇನೆ. ರಾಜಕೀಯವಾಗಿ ಜಿಲ್ಲೆಯಲ್ಲಿ ಅನೇಕ ಬೆಳವಣಿಗೆಗಳು ನಡೆಯುತ್ತಿದ್ದು, ಯಾರೋ ಹತ್ತು ಜನ ಸಂಘ ಕಟ್ಟಿಕೊಂಡು ನಮ್ಮ ವಿರುದ್ಧ ಅಪಪ್ರಚಾರ ಮಾಡಿದರೆ ಅದಕ್ಕೆ ಆದ್ಯತೆ ನೀಡುವ ಅವಶ್ಯಕತೆವಿಲ್ಲ ಎಂದು ಇದೇ ವೇಳೆ ವಿರೋಧಿಗಳಿಗೆ ಎಚ್ಚರಿಕೆ ಸಂದೇಶ ನೀಡಿದರು.

ಭೂತರಾಮನಟ್ಟಿ ಮುಕ್ತಿ ಮಠದ ಶ್ರೀ ಶಿವಸಿದ್ದ ಸೋಮೇಶ್ವರ ಶಿವಚಾರ್ಯ ಮಹಾಸ್ವಾಮೀಜಿ, ಕಾರಂಜಿ ಮಠದ ಗುರುಸಿದ್ದ ಸ್ವಾಮೀಜಿ, ಕಡೋಲಿ ಮಠದ ಬಸವಲಿಂಗ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇದೇ ವೇಳೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜೀ ಅವರ ಜಯಂತಿಯ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಕುಡಚಿ, ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಪಂ ಮಾಜಿ ಸದಸ್ಯರಾದ ಸಿದ್ದು ಸುಣಗಾರ, ಕೆಪಿಸಿಸಿ ಸದಸ್ಯ ಮಲಗೌಡಾ ಪಾಟೀಲ, ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಕಲ್ಪನಾ ಜೋಶಿ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್‌, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಎಂ. ಜೆ, ಸುನೀಲ ಹನುಮಣ್ಣವರ, ಅರುಣ ಕಟಾಂಬಳೆ, ಪಾಲಿಕೆ ಮಾಜಿ ಸದಸ್ಯೆ ಸರಳಾ ಹಿರೇಕರ, ಅನಂತ ಬ್ಯಾಕೂಡ್‌ ಹಾಗೂ ಸಮಸ್ತ ಕಾಂಗ್ರೆಸ್‌ ಕಾರ್ಯಕರ್ತರು, ರಾಹುಲ್‌ ಜಾರಕಿಹೊಳಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.

BJPಯಲ್ಲಿ ಯಾರೂ ಬೇಲ್ ಮೇಲೆ ಇಲ್ವಾ? ಸಿಎಂಗೆ ಟಾಂಗ್ ನೀಡಿದ ಸಿದ್ದರಾಮಯ್ಯ

https://pragati.taskdun.com/politics/siddaramaiahcm-basavaraj-bommaiattack/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button