Kannada NewsKarnataka NewsLatest

*ಬೆಂಗಳೂರಿನಲ್ಲಿ ಮತ್ತೆ ವರುಣನ ಆರ್ಭಟ*: *ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ, ಸಿಡಿಲು ಬಡಿದು ರೈತ ಸಾವು*

ಪ್ರಗತಿವಾಹಿನಿ ಸುದ್ದಿ: ರಾಜಧಾನಿ ಬೆಂಗಳೂರಿನಲ್ಲಿ ಇಂದು ಸಂಜೆ ಮತ್ತೆ ವರುಣನ ಆರ್ಭಟ ಜೋರಾಗಿದೆ. ಹಲವೆಡೆ ಕಪ್ಪು ಮೋಡಗಳು ಆವರಿಸಿ, ಗುಡುಗು-ಸಿಡಿಲಿನೊಂದಿಗೆ ಧಾರಾಕಾರ ಮಳೆ ಸುರಿದಿದೆ. ದಿಢೀರ್ ಮಳೆಯಿಂದ ಪ್ರಮುಖ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ.

ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಕೆಆರ್ ಪುರಂ, ಟಿನ್ ಫ್ಯಾಕ್ಟರಿ, ಟಿಸಿ ಪಾಳ್ಯ, ಜಕ್ಕೂರು ಹಾಗೂ ಹೆಬ್ಬಾಳ ಸುತ್ತಮುತ್ತ ಭಾರಿ ಮಳೆಯಾಗಿದೆ. ಕೆಆರ್ ಪುರಂ ಮೆಟ್ರೋ ನಿಲ್ದಾಣ ಮತ್ತು ಟಿನ್ ಫ್ಯಾಕ್ಟರಿ ರಸ್ತೆಯ ಸುತ್ತಮುತ್ತ ನೀರು ನಿಂತ ಪರಿಣಾಮ ಸಂಚಾರ ನಿಧಾನಗೊಂಡಿದೆ.

ಧಾರಾಕಾರ ಮಳೆಯಿಂದಾಗಿ ಕೆಲವೆಡೆ ಮುಂದಿನ ದೃಶ್ಯಗಳು ಕಾಣಿಸದಂತಾಗಿದೆ. ಹೀಗಾಗಿ ವಾಹನ ಸವಾರರು ಹೆಡ್‌ಲೈಟ್ ಆನ್ ಮಾಡಿಕೊಂಡು ನಿಧಾನವಾಗಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗೆದ್ದಲಹಳ್ಳಿ ರೈಲ್ವೆ ಸೇತುವೆ ಬಳಿಯೂ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದ ಮಳೆ ನೀರು ಶೇಖರಣೆಯಾಗಿದೆ. ಹೆಣ್ಣೂರು ಕಡೆಗೆ ಸಾಗುವ ಮಾರ್ಗದಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದ್ದು, ಚಾಲಕರು ಎಚ್ಚರಿಕೆಯಿಂದ ಸಂಚರಿಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಮುಂದಿನ ಎರಡು ದಿನಗಳಲ್ಲೂ ಬೆಂಗಳೂರಿನಲ್ಲಿ ಮಳೆಯ ಸಾಧ್ಯತೆ ಇದೆ. ಇಂದು ಮತ್ತು ನಾಳೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು-ಸಿಡಿಲಿನೊಂದಿಗೆ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆ ಮುಂದುವರಿದರೆ ನಗರದ ತಗ್ಗು ಪ್ರದೇಶಗಳು ಹಾಗೂ ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ. ಸಂಜೆ ಕಚೇರಿಗಳಿಂದ ಮನೆಗೆ ತೆರಳುವ ಉದ್ಯೋಗಿಗಳು ಮತ್ತು ವಾಹನ ಸವಾರರು ಮುನ್ನೆಚ್ಚರಿಕೆಯಿಂದ ಪ್ರಯಾಣಿಸುವಂತೆ ಸೂಚಿಸಲಾಗಿದೆ.

ಇತ್ತ ಕೊಡಗು ಜಿಲ್ಲೆಯಲ್ಲೂ ಗುಡುಗು-ಸಿಡಿಲಿನೊಂದಿಗೆ ಮಳೆಯಾಗಿದ್ದು, ಮಂಜಿನ ನಗರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ತಂಪಿನ ವಾತಾವರಣ ತಂದಿದೆ. ಆದರೆ ಹಾವೇರಿ ಜಿಲ್ಲೆಯಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಸವಣೂರು ತಾಲೂಕಿನ ಚಿಕ್ಕಮರಳಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ನಿವಾಸಿ ದೊಡ್ಡಹನುಮಂತಪ್ಪ ನಿಂಗಪ್ಪ ರಿತ್ತಿ (60) ಮೃತಪಟ್ಟ ರೈತ ಎಂದು ತಿಳಿದುಬಂದಿದೆ.

ದೊಡ್ಡಹನುಮಂತಪ್ಪ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದಿಢೀರ್ ಮಳೆ ಆರಂಭವಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ಜಮೀನಿನಲ್ಲಿದ್ದ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಳೆ ಜನಜೀವನಕ್ಕೆ ತೊಂದರೆ ತಂದಿದ್ದರೆ, ಹಾವೇರಿಯಲ್ಲಿ ಸಿಡಿಲು ರೈತನ ಜೀವವನ್ನೇ ಬಲಿ ಪಡೆದಿದೆ. ಹೀಗಾಗಿ ಗುಡುಗು-ಸಿಡಿಲಿನ ಸಂದರ್ಭದಲ್ಲಿ ಮರಗಳ ಕೆಳಗೆ ನಿಲ್ಲದಂತೆ ಹಾಗೂ ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

pragativahini.com/battle-against-donne-nayaka-continues-pradeep-eshwar-lashes-out-at-sudhakar-again/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button