*‘ದೊಣ್ಣೆ ನಾಯಕನ ವಿರುದ್ಧ ಸಮರ ನಿರಂತರ’*: *ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಗುಡುಗು*

ಪ್ರಗತಿವಾಹಿನಿ ಸುದ್ದಿ: ಚಿಕ್ಕಬಳ್ಳಾಪುರ ಕಾಂಗ್ರೆಸ್ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಹಾಗೂ ಚಿಂತಾಮಣಿ ಶಾಸಕ, ಮಾಜಿ ಸಚಿವ ಎಂ.ಸಿ. ಸುಧಾಕರ್ ನಡುವಿನ ರಾಜಕೀಯ ಸಮರ ಮತ್ತಷ್ಟು ತೀವ್ರಗೊಂಡಿದೆ. ಹೆಸರು ಪ್ರಸ್ತಾಪಿಸದೆ ‘ಚಿಂತಾಮಣಿಯ ದೊಣ್ಣೆ ನಾಯಕ’ ಎಂದು ಉಲ್ಲೇಖಿಸಿ ಪ್ರದೀಪ್ ಈಶ್ವರ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣ ಸಂದೇಶ ರವಾನಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಇಬ್ಬರ ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಅದು ಸಾಮಾಜಿಕ ಜಾಲತಾಣದ ವಾಗ್ವಾದದ ರೂಪ ಪಡೆದಿದೆ. ಹಿಂದೆ ಸುಧಾಕರ್ ಅವರನ್ನು ರಾಜಕೀಯ ಗುರು ಎಂದು ಹೇಳುತ್ತಿದ್ದ ಪ್ರದೀಪ್ ಈಶ್ವರ್, ಇದೀಗ ನೇರ ಸವಾಲಿನ ಧಾಟಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದು ಚರ್ಚೆಗೆ ಕಾರಣವಾಗಿದೆ.
ತಾಜಾ ಟ್ವೀಟ್ನಲ್ಲಿ, ಕೆ.ಎಚ್. ಮುನಿಯಪ್ಪ ಅವರನ್ನು ಹಲವು ವರ್ಷಗಳಿಂದ ಗುರಿಯಾಗಿಸಿಕೊಂಡಿದ್ದೀರಿ ಎಂದು ಆರೋಪಿಸಿರುವ ಪ್ರದೀಪ್ ಈಶ್ವರ್, ಮುನಿಯಪ್ಪ ಕುಟುಂಬದ ವ್ಯಕ್ತಿಗೆ ಟಿಕೆಟ್ ನೀಡದಂತೆ ಹಠ ಹಿಡಿದಿದ್ದೀರಿ ಹಾಗೂ ಶಿಡ್ಲಘಟ್ಟದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜುಗೌಡರನ್ನು ಟಾರ್ಗೆಟ್ ಮಾಡಿದ್ದೀರಿ ಎಂದು ಆರೋಪಿಸಿದ್ದಾರೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಪ್ರದೀಪ್ ಈಶ್ವರ್ ಯಾವುದೇ ನಿರ್ದಿಷ್ಟ ದಾಖಲೆಗಳನ್ನು ತಮ್ಮ ಟ್ವೀಟ್ನಲ್ಲಿ ಬಹಿರಂಗಪಡಿಸಿಲ್ಲ.
ಇದೀಗ ಚಿಕ್ಕಬಳ್ಳಾಪುರಕ್ಕೆ ಪಾದಾರ್ಪಣೆ ಮಾಡುತ್ತಿದ್ದೀರಿ ಎಂದು ಪರೋಕ್ಷವಾಗಿ ಸುಧಾಕರ್ ಅವರನ್ನು ಉದ್ದೇಶಿಸಿ ಟೀಕಿಸಿರುವ ಪ್ರದೀಪ್ ಈಶ್ವರ್, “ಕೆ.ಎಚ್. ಮುನಿಯಪ್ಪನವರಷ್ಟು ಸೌಮ್ಯ ಸ್ವಭಾವದ ವ್ಯಕ್ತಿ ನಾನಲ್ಲ” ಎಂದು ಹೇಳಿದ್ದಾರೆ.
ಇದಕ್ಕೂ ಮುಂದೆ ಹೋಗಿ, “ಒಂದು ಕಲ್ಲು ಬಿದ್ದರೆ ಹತ್ತು ಕಲ್ಲು ಬಿಸಾಕಿ ಮಾತುಕತೆಗೆ ಬರುವ ವ್ಯಕ್ತಿತ್ವ ನನ್ನದು. ನಿಮ್ಮ ತಾಕತ್ತು ಎಷ್ಟಿದೆಯೋ ಅಷ್ಟು ಬಿಸಾಕಿ. ನಾನು ಹತ್ತರಷ್ಟು ತಿರುಗಿಸಿ ಕೊಡುವುದು ನನಗೆ ಗೊತ್ತಿದೆ” ಎಂದು ಸವಾಲಿನ ಧಾಟಿಯಲ್ಲಿ ಬರೆದುಕೊಂಡಿದ್ದಾರೆ. “ನಿಮ್ಮ ವಿರುದ್ಧ ಸಮರ ನಿರಂತರ” ಎಂದೂ ಹೇಳಿದ್ದಾರೆ.
ಚಿಂತಾಮಣಿ ತಾಲೂಕಿನ ಪ್ರಭಾವಿ ರಾಜಕಾರಣಿಯೊಬ್ಬರು ಹಾಗೂ ಬೆಂಗಳೂರಿನ ಪ್ರತಿಷ್ಠಿತ ಕುಟುಂಬದ ವ್ಯಕ್ತಿಯೊಬ್ಬರು ತಮ್ಮ ವಿರುದ್ಧ ದ್ವೇಷ ಸಾರುತ್ತಿದ್ದಾರೆ ಎಂದು ಪ್ರದೀಪ್ ಈಶ್ವರ್ ಮತ್ತೊಂದು ಆರೋಪ ಮಾಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕೆಲವರನ್ನು ತಮ್ಮ ವಿರುದ್ಧ ಮಾತನಾಡಲು ಪ್ರೇರೇಪಿಸಲಾಗುತ್ತಿದೆ ಎಂದೂ ಹೇಳಿದ್ದಾರೆ.
ಇದೇ ವೇಳೆ, ಚಿಂತಾಮಣಿ ಪ್ರಭಾವಿ ರಾಜಕಾರಣಿಗೆ ಸಂಬಂಧಿಸಿದೆ ಎನ್ನಲಾದ ಹೈದರಾಬಾದ್ನ ಡಯಾಗ್ನೋಸ್ಟಿಕ್ ಸೆಂಟರ್, ಮುಂಬೈನ ಕಮರ್ಷಿಯಲ್ ಕಾಂಪ್ಲೆಕ್ಸ್ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಕುಟುಂಬದ ವ್ಯಕ್ತಿಯ ಆಸ್ತಿಗಳ ಕುರಿತು ಶೀಘ್ರದಲ್ಲೇ “ಸ್ಫೋಟಕ ಮಾಹಿತಿ” ನೀಡುವುದಾಗಿ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಆದರೆ ಈ ಆರೋಪಗಳಿಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಸದ್ಯ ಬಹಿರಂಗಪಡಿಸಿಲ್ಲ.
“ಯಾವುದೇ ವಿಮರ್ಶೆಗೆ ಹೆದರುವ ವ್ಯಕ್ತಿ ನಾನಲ್ಲ. ನಾನು ಯಾರಿಗೂ ಹೆದರುವ, ಅಂಜುವ ವ್ಯಕ್ತಿಯಲ್ಲ. ಆಲ್ ದಿ ಬೆಸ್ಟ್, ವೇಟ್ ಆ್ಯಂಡ್ ಸೀ” ಎಂಬ ಸಂದೇಶವನ್ನೂ ನೀಡಿದ್ದಾರೆ.
ಈ ಬೆಳವಣಿಗೆ ಕೋಲಾರ-ಚಿಕ್ಕಬಳ್ಳಾಪುರ ಭಾಗದ ಕಾಂಗ್ರೆಸ್ನಲ್ಲಿನ ಆಂತರಿಕ ಭಿನ್ನಾಭಿಪ್ರಾಯವನ್ನು ಮತ್ತಷ್ಟು ಮುನ್ನೆಲೆಗೆ ತಂದಿದೆ. ಇತ್ತೀಚೆಗೆ ಎರಡೂ ಜಿಲ್ಲೆಗಳ ಹಲವು ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ಕುರಿತು ಚರ್ಚೆ ನಡೆದಿರುವುದಾಗಿ ವರದಿಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




