ಬರದ ನೆಲದ ಜನತೆಯ ಮೊರೆಗೆ ಸಿಕ್ಕಿತು ಫಲ; ಬತ್ತಿ ಬರಿದಾಗಿದ್ದ ಕೃಷ್ಣೆಯಲ್ಲಿ ಹರಿದು ಬರುತ್ತಿದೆ ಭರಪೂರ ಜಲ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಸಿಲ ಬೇಗೆಗೆ ತತ್ತರಿಸಿದ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ತೀರದ ಜನರ ನೀರಿಗಾಗಿ ಮೊರೆ ಫಲಿಸಿದೆ. ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ಬತ್ತಿ ಬರಡಾಗಿದ್ದ ಕೃಷ್ಣೆಯ ಒಡಲು ಭರಿಸತೊಡಗಿದೆ.
ಇಂದು ಬೆಳಗ್ಗೆ 6ರ ಸುಮಾರಿಗೆ ಕೃಷ್ಣಾ ನದಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ನೀರು ಉಗಾರದ ಬಾಂದಾರದವರೆಗೂ ಹರಿದು ಬಂದಿದ್ದು, ಈ ಭಾಗದ ಜನರ ಜಲದಾಹ ಹಿಂಗಿಸುವ ಆಶಾದಾಯಕ ಬೆಳವಣಿಗೆ ಸಮಾಧಾನ ಮೂಡಿಸಿದೆ.
ಸದ್ಯ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ನಿಂದ 2 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಮಳೆ ಮುಂದುವರಿದರೆ ಸಂಜೆಯವರೆಗೆ ಕೃಷ್ಣೆಯ ಒಡಲಲ್ಲಿ ಸಾಕಷ್ಟು ನೀರು ತುಂಬಿಕೊಳ್ಳುವ ನಿರೀಕ್ಷೆ ಹೊಂದಲಾಗಿದೆ.
ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಸಂಪೂರ್ಣ ಬತ್ತಿದ್ದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಎದುರಾಗಿತ್ತು. ನದಿಯ ಪಾತಳಿಯಲ್ಲಿ ಬಿಂದಿಗೆ ನೀರು ಭರಿಸದ ಬವಣೆ ಸಂಕಷ್ಟ ತಂದಿಟ್ಟಿತ್ತು. ಕೃಷ್ಣೆಯ ಹರಿವಿನಂಚಿನ ಕೃಷಿ ಭೂಮಿಗಳೆಲ್ಲ ಬಿರಿದು ಬೆಳೆಗಳೆಲ್ಲ ಒಣಗಿಹೋಗುತ್ತಿದ್ದವು. ಶ್ರಮಪಟ್ಟು ಬೆಳೆಸಿದ ಬೆಳೆಗಳು ಒಣಗಿ ನೆಲಕ್ಕೊರಗುವುದನ್ನು ಕಣ್ಣಾರೆ ಕಂಡರೂ ರೈತರ ಬಳಿ ಅಸಹಾಯಕತೆ ಬಿಟ್ಟರೆ ಬೇರೇನೂ ಇರಲಿಲ್ಲ.
ಸರಕಾರದ ನೆರವಿನತ್ತ ಮುಖ ಮಾಡಿದ್ದರೂ ರೈತರಿಗೆ ಸಮಾಧಾನ ತರುವ ಯಾವ ಬೆಳವಣಿಗೆಗಳೂ ಕಂಡುಬಂದಿರಲಿಲ್ಲ. ಪ್ರಕೃತಿ ಮಾತೆಯ ಆಶೀರ್ವಾದವೋ ಎಂಬಂತೆ ಕೊನೆಗೆ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದ ವರ್ಷಧಾರೆ ಈ ಭಾಗದ ಜನರಿಗೆ ವರದಾನವಾಗಿ ಕೃಷ್ಣೆಯ ಒಣ ಒಡಲು ಮತ್ತೆ ಜಲಭರಿತವಾಗುತ್ತಿದೆ.
ಮಹಾರಾಷ್ಟ್ರದ ಕೊಯ್ನಾದಲ್ಲಿ 22 ಮಿ.ಮೀ. ಮಳೆಯಾಗಿದ್ದು ಕೊಯ್ನಾ ಜಲಾಶಯದಲ್ಲಿ 1221 ಟಿಎಂಸಿ (ಶೇ.12) ನೀರಿನ ದಾಸ್ತಾನು ಇದೆ. ಸದ್ಯ 1050 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಕೃಷ್ಣೆಯ ಉಗಮ ಸ್ಥಾನ ಮಹಾಬಲೇಶ್ವರದಲ್ಲಿ 37 ಮಿ.ಮೀ. ಮಳೆಯಾಗಿದೆ. ವಾರಣಾ ಜಲಾಶಯದಲ್ಲಿ 1078 ಟಿಎಂಸಿ (ಶೇ.31) ನೀರಿದ್ದು 245 ಕ್ಯೂಸೆಕ್ ನೀರು ಮಾತ್ರ ಬಿಡುಗಡೆಯಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ