
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಪಣತ್ತೂರು ಅಂಡರ್ಪಾಸ್ನಲ್ಲಿ ನೀರು ತುಂಬಿ ಕಾರೊಂದು ಸಿಲುಕಿದರೆ, ಮತ್ತೊಂದೆಡೆ ಚಾಮರಾಜಪೇಟೆಯ ಏಳು ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಅಷ್ಟೇ ಅಲ್ಲ, ಕೋಲಾರದಲ್ಲಿ ಹಳೆಯ ಅಂಗನವಾಡಿ ಕಟ್ಟಡಕ್ಕೂ ನೀರು ನುಗ್ಗಿದ್ದು, ಮೈಸೂರಿನಲ್ಲಿ ಎತ್ತು ನೀರಿನ ಪಾಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಮುಂದಿನ ಮೂರು ದಿನಗಳಿಗೂ ಮಳೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರಿನ ಪಣತ್ತೂರು ರೈಲ್ವೆ ಅಂಡರ್ಪಾಸ್ನಲ್ಲಿ ನೀರು ಹರಿದುಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ಈ ವೇಳೆ ಕಾರೊಂದು ನೀರಿನಲ್ಲಿ ಸಿಲುಕಿದ್ದು, ಚಾಲಕ ಮತ್ತು ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಬೈಕ್ ಸವಾರನೊಬ್ಬನೂ ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದರಿಂದ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತು ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು.
ಚಾಮರಾಜಪೇಟೆಯಲ್ಲಿ ಮಳೆ ನೀರು ನುಗ್ಗಿ ಜ್ಯುವೆಲ್ಲರಿ, ಟೈಲರಿಂಗ್, ಟ್ಯಾಟೂ ಮತ್ತು ಗಿಫ್ಟ್ ಶಾಪ್ ಸೇರಿದಂತೆ ಏಳು ಅಂಗಡಿಗಳಿಗೆ ಹಾನಿಯಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನೀರಿನಲ್ಲಿ ನೆನೆದು ಹಾಳಾಗಿವೆ. ದಾಸರಹಳ್ಳಿ, ಬಾಗಲಗುಂಟೆ, ಚಿಕ್ಕಬಾಣಾವರ, ಸೋಲದೇವನಹಳ್ಳಿ ಮತ್ತು ಮಾದನಾಯಕನಹಳ್ಳಿ ಭಾಗಗಳಲ್ಲೂ ಸಂಜೆ ಸುರಿದ ಮಳೆಯಿಂದ ವಾಹನ ಸವಾರರು ರಸ್ತೆಯ ಬದಿಯಲ್ಲಿ ನಿಂತು ಆಶ್ರಯ ಪಡೆಯುವಂತಾಯಿತು.
ಕೋಲಾರ ಜಿಲ್ಲೆಯ ನಂದಂಬಳ್ಳಿಯಲ್ಲಿ 40ರಿಂದ 50 ವರ್ಷಗಳಷ್ಟು ಹಳೆಯದಾದ ಅಂಗನವಾಡಿ ಕಟ್ಟಡಕ್ಕೆ ಮಳೆ ನೀರು ನುಗ್ಗಿದೆ. ಕಟ್ಟಡ ಕುಸಿಯುವ ಭೀತಿ ಎದುರಾಗಿದ್ದರೂ ಪುಟ್ಟ ಮಕ್ಕಳು ನೀರಿನಲ್ಲೇ ನಿಂತು ಬಿಸಿಯೂಟ ಸೇವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇತ್ತ ಕೆಜಿಎಫ್ನ ಹೈಗ್ರೌಂಡ್ಸ್ನಲ್ಲಿ ವಿದ್ಯುತ್ ತಂತಿ ತಗುಲಿ ರೈತ ಮುರುಗನ್ಗೆ ಸೇರಿದ ಸುಮಾರು 70 ಸಾವಿರ ರೂಪಾಯಿ ಮೌಲ್ಯದ ಸೀಮೆಹಸು ಮೃತಪಟ್ಟಿದೆ.
ಮೈಸೂರು ಜಿಲ್ಲೆಯ ಸಿದ್ದಲಿಂಗಪುರದಲ್ಲೂ ಮಳೆಯಿಂದ ಅವಾಂತರ ಸಂಭವಿಸಿದೆ. ಅಲ್ಲಿನ ನಾಲೆ ಉಕ್ಕಿ ಹರಿದಿದ್ದು, ನಾಲೆಯನ್ನು ದಾಟಲು ಯತ್ನಿಸಿದ ಒಂದು ಎತ್ತು ನೀರಿನಲ್ಲಿ ಕೊಚ್ಚಿಹೋಗಿದೆ. ನಿರಂತರ ಮಳೆಯಿಂದ ಗ್ರಾಮೀಣ ಭಾಗಗಳಲ್ಲೂ ಜನರು ಹಾಗೂ ಜಾನುವಾರುಗಳಿಗೆ ಅಪಾಯ ಎದುರಾಗುತ್ತಿದೆ.
ಇನ್ನು ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




