ಪ್ರಗತಿವಾಹಿನಿ ಸುದ್ದಿ, ಮಾಂಜರಿ (ಚಿಕ್ಕೋಡಿ) – ಕಳೆದ ವರ್ಷದ ಪ್ರವಾಹದ ನೆನಪುಗಳು ಮಾಸುವ ಮುನ್ನವೆ ಕೃಷ್ಣಾತೀರದ ಜನರಲ್ಲಿ ಮತ್ತೊಮ್ಮೆ ಆತಂಕ ಮನೆ ಮಾಡಿದೆ.
ಮಹಾರಾಷ್ಟ್ರದ ಘಟ್ಟಪ್ರದೇಶ ಹಾಗೂ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ರಾಜ್ಯದ ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ನದಿ ತೀರದ ಗ್ರಾಮಸ್ಥರಲ್ಲಿಆತಂಕದ ವಾತಾವರಣ ನಿರ್ಮಾಣವಾಗಿದೆ.
ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದ ನಿಪ್ಪಾಣಿ ತಾಲೂಕಿನ ಧೂದಗಂಗಾ ನದಿಯ ಒಳಹರಿವಿನ ಪ್ರಮಾಣದಲ್ಲಿ ದಿಢೀರ ಹೆಚ್ಚಳವಾಗಿದೆ. ಹೀಗಾಗಿ ಕಾರದಗಾ – ಭೋಜ ಗ್ರಾಮಗಳ ನಡುವಿನ ಸಂಪರ್ಕ ಸೇತುವೆ ಜಲಾವೃತವಾಗಿದೆ. ಪರಿಣಾಮ ಗ್ರಾಮಸ್ಥರು ಸುತ್ತುವರೆದು ಪ್ರಯಾಣ ಬೆಳೆಸುವಂತಾಗಿದೆ.
ಇನ್ನು ದೂದಗಂಗಾ ಹಾಗೂ ವೇದಗಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾದಂತೆ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಯಲ್ಲಿ ದಿಢೀರ್ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಒಂದೇ ರಾತ್ರಿಯಲ್ಲಿ ನೀರಿನ ಪ್ರಮಾಣ ೪ ಅಡಿ ಹೆಚ್ಚಳವಾಗಿದೆ. ಮಳೆಗಾಲ ಆರಂಭದಲ್ಲೆ ಈ ಪ್ರಮಾಣದಲ್ಲಿ ಮಳೆಯಿಂದ ನದಿಗಳಿಗೆ ನೀರು ಹರಿದು ಬರುತ್ತಿರುವುದು ಈ ಬಾರಿಯೂ ಪ್ರವಾಹದ ಆತಂಕಕ್ಕೆ ಕಾರಣವಾಗಿದೆ.
ಕಳೆದ ವರ್ಷ ಹೆಚ್ಚಿನ ಮಳೆ ಆಗಿದ್ದರಿಂದ ಕೃಷಿ ಚಟುವಟಿಕೆಗಳು ತೀರ ಕಡಿಮೆ ಆಗಿದ್ದವು. ಅಲ್ಲದೆ ಕೊರೊನಾ ಹೊಡೆತಕ್ಕೆ ೩ ತಿಂಗಳು ರೈತರ ಕೃಷಿ ಚಟುವಟಿಕೆ ಕೂಡ ಮಂದಗತಿಯಲ್ಲಿ ಸಾಗಿತ್ತು. ಪರಿಣಾಮ ಮಹಾರಾಷ್ಟ್ರದಿಂದ ರಾಜ್ಯದ ಗಡಿಯವರೆಗೂ ಮಹಾರಾಷ್ಟ್ರ ಕೃಷ್ಣಾ ದೂದಗಂಗಾ ವೇದಗಂಗಾ ನದಿಗಳಿಗೆ ಅಡ್ಡಲಾಗಿ ಬ್ಯಾರೇಜ್ ಗಳನ್ನು ನಿರ್ಮಾಣ ಮಾಡಲಾಗಿತ್ತು. ಈ ಎಲ್ಲಾ ಬ್ಯಾರೇಜ್ ಗಳಲ್ಲಿ ನೀರು ಖರ್ಚಾಗದೆ ತುಂಬಿಯೆ ಇದೆ. ಪರಿಣಾಮ ಈಗ ನೀರು ಸಂಗ್ರಹಕ್ಕೆ ಸಾಧ್ಯವಾಗದೆ ಮಹಾರಾಷ್ಟ್ರ ಬಂದ ನೀರನ್ನು ನೇರವಾಗಿ ಹರಿ ಬಿಡುತ್ತಿರುವ ಕಾರಣ ಮಳೆಗಾಲದ ಆರಂಭದಲ್ಲೆ ನದಿಗಳ ಒಳ ಹರಿವಿನ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಪ್ರವಾಹಎದುರಿಸಲು ಸಜ್ಜಾಗಿ; ನಿನ್ನೆಯಷ್ಟೆ ಜಿಲ್ಲಾಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ಈ ಬಾರಿಯು ಪ್ರವಾಹ ಬರುವ ಮುನ್ಸೂಚನೆ ಇದ್ದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಲ್ಲದೆ ಈಗಾಗಲೇ ನದಿ ತೀರದಲ್ಲಿಇರುವ ಬೋಟ್ ಗಳನ್ನ ರಿಪೇರಿ ಮಾಡಿಸಬೇಕು. ಇದರ ಜೊತೆಗೆ ಕಾರವಾರದಿಂದ ಹಚ್ಚಿನ ಬೋಟ್ ಗಳನ್ನು ತರೆಸಿಕೊಳ್ಳಿ. ನದಿ ಪಾತ್ರದ ಜನರಲ್ಲಿ ಈಗಿನಿಂದಲೆ ಎಚ್ಚರಿಗೆ ಮೂಡಿಸಿಕೊಳ್ಳಿ ಎಂದು ಹೇಳಿದ್ದಾರೆ.
ಅಲ್ಲದೆ ಮಹಾರಾಷ್ಟ್ರದ ನೀರಾವರಿ ಇಲಾಖೆ ಅಧಿಕಾರಿಗಳ ಜೋತೆ ನಿರಂತರ ಸಂಪರ್ಕದಲ್ಲಿದ್ದು ನಿಗಾ ವಹಿಸುವಂತೆ ಸೂಚಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ